ನವದೆಹಲಿ: ಭಾರತದ ಮುಖ್ಯ ನ್ಯಾಯಮೂರ್ತಿ ಸಂಜೀವ ಖನ್ನಾ ಬುಧವಾರ ಕೇಂದ್ರ ಕಾನೂನು ಸಚಿವಾಲಯಕ್ಕೆ ಸುಪ್ರೀಂ ಕೋರ್ಟ್‌ನ ಹಿರಿಯ ನ್ಯಾಯಮೂರ್ತಿ ಭೂಷಣ ರಾಮಕೃಷ್ಣ ಗವಾಯಿ ಅವರನ್ನು ಮುಂದಿನ ಸುಪ್ರೀಂ ಕೋರ್ಟ್‌ನ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸುವಂತೆ ಶಿಫಾರಸು ಮಾಡಿದ್ದಾರೆ.
ನ್ಯಾಯಮೂರ್ತಿ ಗವಾಯಿ ಅವರು ಮೇ 14 ರಂದು ಸುಪ್ರೀಂ ಕೋರ್ಟ್‌ನ 52 ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಹಾಲಿ ಮುಖ್ಯ ನ್ಯಾಯಮೂರ್ತಿ ಸಂಜೀವ ಖನ್ನಾ ಅವರು ಮೇ 13 ರಂದು ನಿವೃತ್ತರಾಗಲಿದ್ದಾರೆ.

ಬಿ.ಆರ್‌.ಗವಾಯಿ ಅವರು 2007 ರಿಂದ 2010 ರವರೆಗೆ ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ನಂತರ ಎರಡನೇ ದಲಿತ ಸಿಜೆಐ ಆಗಲಿದ್ದಾರೆ.

ನವೆಂಬರ್ 24, 1960 ರಂದು ಮಹಾರಾಷ್ಟ್ರದ ಅಮರಾವತಿಯಲ್ಲಿ ಜನಿಸಿದ ಅವರು ಹಿರಿಯ ಸಂಸದೀಯ ಪಟು ದಿವಂಗತ ರಾಮಕೃಷ್ಣ ಗವಾಯಿ ಅವರ ಪುತ್ರ. ರಾಮಕೃಷ್ಣ ಸೂರ್ಯಭಾನ್‌ ಗವಾಯಿ ಅವರು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಆರ್‌ಪಿಐ) ಸ್ಥಾಪಕರು. ಮಾರ್ಚ್ 16, 1985 ರಂದು ವಕೀಲರಾಗಿ ಸೇರಿಕೊಂಡರು. ಅವರು ಮಹಾರಾಷ್ಟ್ರ ಸರ್ಕಾರದ ಪರವಾಗಿ ಸರ್ಕಾರಿ ವಕೀಲರಾಗಿ ಮತ್ತು ನಂತರ ಸರ್ಕಾರಿ ಅಭಿಯೋಜಕರಾಗಿ ಸೇವೆ ಸಲ್ಲಿಸಿದರು.. ನಂತರ ಅವರು 1987 ರಿಂದ 1990 ರವರೆಗೆ ಬಾಂಬೆ ಹೈಕೋರ್ಟ್‌ನಲ್ಲಿ ಸ್ವತಂತ್ರವಾಗಿ ವಕೀಲಿಕೆ ಪ್ರಾಕ್ಟೀಸ್‌ ಮಾಡಿದರು.

1990 ರ ನಂತರ, ಅವರು ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠದಲ್ಲಿ ಸಾಂವಿಧಾನಿಕ ಮತ್ತು ಆಡಳಿತಾತ್ಮಕ ಕಾನೂನಿನ ಮೇಲೆ ಕೇಂದ್ರೀಕರಿಸಿದರು. ಅವರು ನಾಗ್ಪುರ ಮುನ್ಸಿಪಲ್ ಕಾರ್ಪೊರೇಷನ್, ಅಮರಾವತಿ ಮುನ್ಸಿಪಲ್ ಕಾರ್ಪೊರೇಷನ್ ಮತ್ತು ಅಮರಾವತಿ ವಿಶ್ವವಿದ್ಯಾಲಯಕ್ಕೆ ಸ್ಥಾಯಿ ಸಲಹೆಗಾರರಾಗಿ ಸೇವೆ ಸಲ್ಲಿಸಿದರು. ಅವರನ್ನು ನವೆಂಬರ್ 14, 2003 ರಂದು ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರನ್ನಾಗಿ ನೇಮಿಸಲಾಯಿತು ಮತ್ತು ನವೆಂಬರ್ 12, 2005 ರಂದು ಬಾಂಬೆ ಹೈಕೋರ್ಟ್‌ನ ಕಾಯಂ ನ್ಯಾಯಾಧೀಶರನ್ನಾಗಿ ದೃಢೀಕರಿಸಲಾಯಿತು.
ಅವರನ್ನು ಮೇ 24, 2019 ರಂದು ಭಾರತದ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರ ಸ್ಥಾನಕ್ಕೆ ಬಡ್ತಿ ನೀಡಲಾಯಿತು, ನವೆಂಬರ್ 23, 2025 ರಂದು ನಿವೃತ್ತಿಯಾಗಲಿದ್ದಾರೆ.