ಮಂಗಳೂರು: ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಭಾರಿ ತಯಾರಿ ಮಾಡಿಕೊಳ್ಳಲು ದಕ್ಷಿಣ ಕನ್ನಡ ಜಿಲ್ಲೆಯಿಂದ ಆರಂಭಿಸಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮೊದಲ ಸಮಾವೇಶ ಮಂಗಳೂರಿನಲ್ಲಿ ಇಂದು ನಡೆಯಲಿದೆ.

ಮಂಗಳೂರಿನಲ್ಲಿ ಕಾಂಗ್ರೆಸ್ ರಾಜ್ಯ ಮಟ್ಟದ ಸಮಾವೇಶವನ್ನು ಇಂದು ಆಯೋಜಿಸಲಾಗಿದ್ದು, ಕರಾವಳಿಯಿಂದ ಲೋಕಸಭಾ ಚುನಾವಣೆಗೆ ರಣಕಹಳೆಯನ್ನು ಕಾಂಗ್ರೆಸ್ ಮೊಳಗಿಸಲಿದೆ. ಕರಾವಳಿಯ ಮೂರು ಜಿಲ್ಲೆಗಳು ಹಾಗೂ ಪಕ್ಕದ ಚಿಕ್ಕಮಗಳೂರಿನಿಂದ ಹೆಚ್ಚಿನ ಮತಗಳನ್ನು ಸೆಲೆಯಲು ಪ್ಲಾನ್‌ ರೂಪಿಸಲಾಗಿದೆ. ಮಂಗಳೂರು ಹೊರವಲಯದ ಅಡ್ಯಾರ್‌ನಲ್ಲಿರುವ ಸಹ್ಯಾದ್ರಿ ಕಾಲೇಜ್ ಮೈದಾನದಲ್ಲಿ ಸಮಾವೇಶ ಆಯೋಜಿಸಲಾಗಿದೆ.
ಈ ಸಮಾವೇಶದ ಮೂಲಕ ಕರಾವಳಿಯಲ್ಲಿ ನೆಲಕಚ್ಚಿರುವ ಕಾಂಗ್ರೆಸ್‌ಗೆ ಶಕ್ತಿ ತುಂಬುವ ಪ್ರಯತ್ನ ನಡೆಸಲಾಗುತ್ತಿದೆ. ಸಮಾವೇಶದಲ್ಲಿ ಎಐಸಿಸಿ ಅದ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ, ಡಿಸಿಎಂ ಡಿಕೆ ಶಿವಕುಮಾರ್, ಗೃಹಸಚಿವ ಪರಮೇಶ್ವರ್, ವೇಣುಗೋಪಾಲ್ ಸೇರಿದಂತೆ ರಾಜ್ಯ‌ದ ಇತರ ಸಚಿವರುಗಳು ಭಾಗಿಗಳಾಗಲಿದ್ದಾರೆ.

ಸಮಾವೇಶಕ್ಕೆ‌ ಸಕಲ ಸಿದ್ಧತೆ ಪೂರ್ಣವಾಗಿದ್ದು, ಇದರಲ್ಲಿ ಸುಮಾರು 50 ಸಾವಿರ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆ ಇದೆ. ಹೆಚ್ಚಾಗಿ ಉಭಯ ಜಿಲ್ಲೆಗಳಿಂದ ಹಾಗೂ ಅಕ್ಕಪಕ್ಕದ ಚಿಕ್ಕಮಗಳೂರು, ಕಾಸರಗೋಡು, ಕೊಡಗುಗಳಿಂದ ಮತ್ತು ರಾಜ್ಯದ ನಾನಾ ಭಾಗಗಳಿಂದ ಕಾರ್ಯಕರ್ತರು ಆಗಮಿಸಲಿದ್ದಾರೆ. 30 ಸಾವಿರ ಕಾರ್ಯಕರ್ತರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ.