ಬೆಂಗಳೂರು :
“ಇಂದು ಲೋಕಸಭೆ ಚುನಾವಣೆಯ ಪೂರ್ವಭಾವಿ ಸಭೆ ಕರೆಯಲಾಗಿದ್ದು, ಬೆಳಗ್ಗೆ ಪಕ್ಷದ ಎಲ್ಲಾ ಶಾಸಕರು, ಪದಾಧಿಕಾರಿಗಳು, ಚುನಾವಣೆ ಸ್ಪರ್ಧಿಸಿದ್ದ ನಾಯಕರ ಸಭೆ ನಡೆಸಲಾಗುವುದು. ಮಧ್ಯಾಹ್ನ ಜಿಲ್ಲಾ ಕಾಂಗ್ರೆಸ್ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಜತೆ ಸಭೆ ಮಾಡುತ್ತೇವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಕೆಪಿಸಿಸಿ ಕಚೇರಿಯ ಇಂದಿರಾ ಭವನದಲ್ಲಿ ಸಭೆ ಆರಂಭಕ್ಕೂ ಮುನ್ನ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು, “ಈ ಸಭೆಯಲ್ಲಿ ಪಕ್ಷದ ಸಂಘಟನೆ, ಬೂತ್ ಮಟ್ಟದಲ್ಲಿ ಬಿಎಲ್ಎಗಳು, ಮತದಾರರ ಹೆಸರು ಸೇರ್ಪಡೆ, ಪರಿಷ್ಕರಣೆ, ಗ್ಯಾರಂಟಿ ಅನುಷ್ಠಾನ, ಜಿಲ್ಲಾ ಮಟ್ಟದ ಸಭೆ, ವಿಧಾನಸಭೆ ವ್ಯಾಪ್ತಿಯಲ್ಲಿ ಗ್ಯಾರಂಟಿ ಯೋಜನೆಗಳ ಬಗ್ಗೆ ಸಭೆ, ಕಾರ್ಯಕರ್ತರ ಸಮಾವೇಶ, ರಾಜ್ಯ ಮಟ್ಟದ ಸಮಾವೇಶದ ಬಗ್ಗೆ ಚರ್ಚೆ ಮಾಡಲಿದ್ದೇವೆ” ಎಂದು ತಿಳಿಸಿದರು.