ನವದೆಹಲಿ: ಜೆ.ಪಿ. ನಡ್ಡಾ ಅವರು ಕೇಂದ್ರ ಸಚಿವ ಸಂಪುಟ ಸೇರಿರುವ ಕಾರಣ ಶೀಘ್ರದಲ್ಲೇ ಬಿಜೆಪಿ ಅಧ್ಯಕ್ಷ ಹುದ್ದೆಗೆ ಅವರು ರಾಜೀನಾಮೆ ನೀಡುವ ಸಾಧ್ಯತೆ ಇದೆ. ಇದರ ಬೆನ್ನಲ್ಲೇ ಒಬ್ಬ ಮಹಿಳೆ ಸೇರಿ 5 ಬಿಜೆಪಿ ನಾಯಕರ ಹೆಸರು, ನಡ್ಡಾ ಉತ್ತರಾಧಿಕಾರಿಯ ಪಟ್ಟಕ್ಕೆ ಕೇಳಿಬರುತ್ತಿವೆ. ವಿನೋದ ತಾವ್ಡೆ, ಸುನೀಲ್‌ ಬನ್ಸಲ್‌, ಓಂ ಮಾಥುರ್‌. ಕೆ. ಲಕ್ಷ್ಮಣ ಹಾಗೂ ಸ್ಮೃತಿ ಇರಾನಿ- ಇವು ಕೇಳಿಬರುತ್ತಿರುವ ಹೆಸರುಗಳು.

ವಿನೋದ್ ತಾವ್ಡೆ:
ವಿನೋದ್‌ ತಾವ್ಡೆ ಅವರು ಮರಾಠಾ ನಾಯಕರಾಗಿದ್ದು, ಹಾಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ. ಬಿ.ಎಲ್.ಸಂತೋಷ್ ನಂತರ ಬಿಜೆಪಿಯ ಅತ್ಯಂತ ಪ್ರಭಾವಿ ಪ್ರಧಾನ ಕಾರ್ಯದರ್ಶಿಗಳಲ್ಲಿ ಎಂಬ ಕೀರ್ತಿ ಪಕ್ಷದ ವಲಯದಲ್ಲಿ ತಾವ್ಡೆ ಅವರಿಗೆ ಇದೆ.

ಕೆ. ಲಕ್ಷ್ಮಣ:
ಕೆ. ಲಕ್ಷ್ಮಣ್ ಎಂಬುದು ಸುತ್ತುತ್ತಿರುವ ಮತ್ತೊಂದು ಹೆಸರು, ಬಿಜೆಪಿಯ ಒಬಿಸಿ ಮೋರ್ಚಾ ಮುಖ್ಯಸ್ಥ. ಆಂಧ್ರ-ತೆಲಂಗಾಣದಿಂದ ಬಂದ ಇವರು ಆಕ್ರಮಣಕಾರಿ ಹಾಗೂ ತಾಳ್ಮೆಯುತ ನಾಯಕ ಎಂದು ಹೆಸರುವಾಸಿಯಾಗಿದ್ದಾರೆ.

ಸುನೀಲ್ ಬನ್ಸಲ್‌:
ರೇಸ್‌ನಲ್ಲಿದ್ದಾರೆ ಎಂದು ನಂಬಲಾದ ಮತ್ತೊಂದು ಹೆಸರು ಸುನಿಲ್ ಬನ್ಸಲ್. ಪ್ರಸ್ತುತ, ಅವರು ಪಶ್ಚಿಮ ಬಂಗಾಳ, ತೆಲಂಗಾಣ ಮತ್ತು ಒಡಿಶಾ ರಾಜ್ಯಗಳ ಪ್ರಧಾನ ಕಾರ್ಯದರ್ಶಿ ಮತ್ತು ಉಸ್ತುವಾರಿ. ಈ ಹಿಂದೆ ಉತ್ತರ ಪ್ರದೇಶದಲ್ಲೂ ಉತ್ತಮ ಸಂಘಟನೆ ಮಾಡಿದವರು. ಆರೆಸ್ಸೆಸ್‌ ಹಿನ್ನೆಲೆಯವರು. ಆದರೆ ಪಕ್ಷದ ಒಂದು ವರ್ಗದಿಂದ ವಿರೋಧ ಹೊಂದಿದ್ದಾರೆ.

ಓಂ ಮಾಥುರ್‌:
ರಾಜಸ್ಥಾನದ ರಾಜ್ಯಸಭಾ ಸದಸ್ಯ ಹಾಗೂ ಭೈರೋನ್ ಸಿಂಗ್ ಶೆಖಾವತ್ ಅವರ ಆಪ್ತರಾಗಿದ್ದ ಓಂ ಮಾಥುರ್ ಕೂಡ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗುವ ಸ್ಪರ್ಧೆಯಲ್ಲಿದ್ದಾರೆ ಎಂದು ನಂಬಲಾಗಿದೆ. ಪ್ರಸ್ತುತ ಮೋದಿ ಅವರ ತವರು ಗುಜರಾತ್ ಉಸ್ತುವಾರಿ. ನಗುವಿನಲ್ಲೇ ಎಲ್ಲ ಸಮಸ್ಯೆ ಪರಿಹರಿಸಬಲ್ಲರು ಎಂದು ಮಾಥುರ್‌ ಪರ ಪಕ್ಷದಲ್ಲಿ ಮುಖಂಡರು ಮಾತಾಡಿಕೊಳ್ಳುತ್ತಾರೆ.

ಸ್ಮೃತಿ ಇರಾನಿ:
ಕೊನೆಯದಾಗಿ ಸ್ಮೃತಿ ಇರಾನಿ. ಬಿಜೆಪಿಯ ಫೈರ್ ಬ್ರಾಂಡ್‌ ನಾಯಕಿ. ಹಿಂದಿ-ಇಂಗ್ಲಿಷ್‌ ಚೆನ್ನಾಗಿ ಬಲ್ಲರು. ಪ್ರಧಾನಿ ನರೇಂದ್ರ ಮೋದಿ ಆಪ್ತೆ ಕೂಡ. ಈಗ ಗಾಂಧಿ ಕುಟುಂಬದ ಪ್ರಭಾವ ಇರುವ ಅಮೇಠಿಯಲ್ಲಿ ಅವರು ಸೋತಿರಬಹುದು. ಆದರೆ ತಮ್ಮದು ಮಹಿಳಾ ಪರ ಪಕ್ಷ ಎಂಬ ಸಂದೇಶ ನೀಡಲು ಹಾಗೂ ಗಾಂಧಿ ಕುಟುಂಬದ ಎದುರು ತಾನು ಸೋತರೂ ಎದೆಗುಂದಿಲ್ಲ ಎಂಬ ಸಂದೇಶ ನೀಡಲು ಸ್ಮೃತಿ ಅವರನ್ನು ಬಿಜೆಪಿ ಅಧ್ಯಕ್ಷೆ ಮಾಡಬಹುದು ಎನ್ನಲಾಗಿದೆ. ಇದು ಸಾಕಾರಗೊಂಡರೆ ಅವರು ಬಿಜೆಪಿಯ ಮೊದಲ ಮಹಿಳಾ ಅಧ್ಯಕ್ಷೆ ಎನ್ನಿಸಿಕೊಳ್ಳಲಿದ್ದಾರೆ.

ಅನಿರೀಕ್ಷಿತ ಘೋಷಣೆ?:
ಆದರೆ ಮೋದಿ-ಶಾ ಜೋಡಿ ಯಾವಾಗಲೂ ಅನಿರೀಕ್ಷಿತ ಘೋಷಣೆ ಮಾಡುವಲ್ಲಿ ಹೆಸರುವಾಸಿ. ಹೀಗಾಗಿ ಈ ಸಂಭಾವ್ಯರನ್ನು ಬಿಟ್ಟು ಇನ್ನೊಬ್ಬ ಸಂಘಟನಾ ಚತುರನನ್ನು ಪಕ್ಷಾಧ್ಯಕ್ಷ ಮಾಡಬಹುದು ಎಂಬ ಅನುಮಾನವೂ ಬಿಜೆಪಿ ವಲಯದಲ್ಲಿದೆ.