ವಾಷಿಂಗ್ಟನ್: ಇದೀಗ ಅಮೆರಿಕದಲ್ಲಿ ಚುನಾವಣೆಯದ್ದೆ ಸುದ್ದಿ. ಅತ್ಯಂತ ಪ್ರತಿಷ್ಠಿತ ಹಾಗೂ ಜಾಗತಿಕವಾಗಿ ಗಮನ ಸೆಳೆದಿರುವ ಅಧ್ಯಕ್ಷೀಯ ಚುನಾವಣೆಯ ರಣಕಣ ಕಾವೇರಿದೆ. ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಗೆ ಇನ್ನೂ 3 ತಿಂಗಳು ಬಾಕಿ ಉಳಿದಿರುವಾಗ ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್‌ ವಿರುದ್ದ ಡೆಮಾಕ್ರೆಟಿಕ್ ಹುರಿಯಾಳು ಕಮಲಾ ಹ್ಯಾರಿಸ್ ನಿರ್ಣಾಯಕ 3 ರಾಜ್ಯಗಳಲ್ಲಿ ಗೆಲುವು ಸಿಗಬಹುದು ಎಂದು ಸಮೀಕ್ಷೆಯೊಂದು ಹೇಳಿದೆ. ಅಮೆರಿಕದ 3 ನಿರ್ಣಾಯಕ ರಾಜ್ಯಗಳಾದ ವಿಸ್ಕಾನ್ಸಿನ್, ಪೆನ್ಸಿಲ್ವೆನೀಯಾ, ಮಿಚಿ ಗನ್‌ನಲ್ಲಿ ಕಮಲಾ ಹ್ಯಾರಿಸ್‌ ಮುನ್ನಡೆ ಸಾಧಿಸಬಹುದು, ಟ್ರಂಪ್‌ಗೆ ಜಯದ ಹಾದಿ ಕಷ್ಟವಾಗಬಹುದು ಎಂದು ನ್ಯೂಯಾರ್ಕ್ ಟೈಮ್ಸ್ ಮತ್ತು ಸಿಯೆನಾ ಕಾಲೇಜು ಆ. 5-9ರವರೆಗೆ ನಡೆಸಿದ ಸಮೀಕ್ಷೆ ಹೇಳಿದೆ. ಈ ರಾಜ್ಯಗಳಲ್ಲಿ ಕಮಲಾ ಹ್ಯಾರಿಸ್ ಶೇ. 50 ರಷ್ಟು ಮತಗಳನ್ನು ಪಡೆಯುವ ಸಾಧ್ಯತೆಯಿವೆ. ಆದರೆ ಟ್ರಂಪ್‌ಗೆ ಶೇ. 46ರಷ್ಟು ಮತ ಪ್ರಮಾಣ ದೊರೆತಿದೆ. ಈ ಸಮೀಕ್ಷೆಗೆ 1,973 ಮತದಾರರ ಅಭಿಪ್ರಾಯ ಪಡೆಯಲಾಗಿದೆ.