ಚೆನ್ನೈ : ವೀರಪ್ಪನ್ ತಾನು ಜೀವಿತದಲ್ಲಿದ್ದಾಗ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದ. ಆದರೆ ಆತನ ಮಗಳು ಈಗ ಬಿಜೆಪಿಯಿಂದ ರಾಜಕಾರಣ ಮಾಡಲು ಮುಂದಾಗಿರುವ ಸಂಗತಿ ಬೆಳಕಿಗೆ ಬಂದಿದೆ. ಈ ಹಿಂದೆಯೂ ಸಾಕಷ್ಟು ಸಲ ಆಕೆ ಬಿಜೆಪಿಯಿಂದ ರಾಜಕೀಯ ರಣರಂಗದಲ್ಲಿ ಸಾಧನೆ ಮಾಡುವ ತನ್ನ ಉತ್ಸಾಹವನ್ನು ವ್ಯಕ್ತಪಡಿಸಿದ್ದನ್ನು ಇಲ್ಲಿ ನೆನಪಿಸಬಹುದು.
ಸ್ವತಃ ಯೂಟ್ಯೂಬ್ ಚಾನೆಲ್ ಹೊಂದಿರುವ ವೀರಪ್ಪನ್ ಪುತ್ರಿ ಕನ್ನಡದ ಕೆಲ ಯೂಟ್ಯೂಬ್ ಚಾನೆಲ್ ಗಳಲ್ಲಿ ಆಗಾಗ ಮಾತನಾಡಿ ಕನ್ನಡಿಗರಿಗೆ ಚಿರಪರಿಚಿತಳಾಗಿದ್ದಾಳೆ.
ಕಾಡುಗಳ್ಳ, ದಂತಚೋರ, ದರೋಡೆಕೋರ ಮುಂತಾದ ಹೆಸರಿನಿಂದ ಕುಖ್ಯಾತಿ ಪಡೆದಿದ್ದ ವೀರಪ್ಪನ್ ಪುತ್ರಿಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನೀಡುವ ಸಾಧ್ಯತೆಯಿದೆ.
ತಮಿಳುನಾಡು ಮತ್ತು ಪುದುಚೇರಿಯ 39 ಕ್ಷೇತ್ರಗಳ ಪೈಕಿ ಯಾವುದಾದರೂ ಒಂದು ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ನೀಡಿದರೆ ಆಶ್ಚರ್ಯವಿಲ್ಲ. ನಾನು ನನ್ನ ತಂದೆಯ ಕೆಲಸದಿಂದ ಪ್ರಭಾವಿತನಾಗಿಲ್ಲ, ಆದರೆ ಅವರು ಸಮಾಜಕ್ಕೆ ಮಾಡಿದ ಒಳ್ಳೆಯ ಕೆಲಸದಿಂದ ಸ್ಪೂರ್ತಿ ಪಡೆದಿದ್ದೇನೆ.
ನಾನು ಆರು ವರ್ಷದವಳಿದ್ದಾಗ ಮಾತ್ರ ಒಮ್ಮೆ ನನ್ನ ತಂದೆಯನ್ನು ಭೇಟಿಯಾಗಿರುವುದು ಎಂದು ವೀರಪ್ಪನ್ ಪುತ್ರಿ ವಿದ್ಯಾರಾಣಿ ಹೇಳಿದ್ದಾರೆ.
ಫೆಬ್ರವರಿ 23, 2020ರಲ್ಲಿ ತಮಿಳುನಾಡಿನ ಕೃಷ್ಣಗಿರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಮುರಳೀಧರ್ ರಾವ್ ಮತ್ತು ಮಾಜಿ ಕೇಂದ್ರ ಸಚಿವ ಪೊನ್ ರಾಧಾಕೃಷ್ಣನ್ ಅವರು ವಿದ್ಯಾ ರಾಣಿ ಅವರನ್ನು ಅಧಿಕೃತವಾಗಿ ಬಿಜೆಪಿ ಸೇರ್ಪಡೆಗೊಳಿಸಿದ್ದರು. ಪ್ರಧಾನಿ ಮೋದಿಯವರ ಯೋಜನೆಗಳನ್ನು ಜನರಿಗೆ ತಲುಪಿಸುವ ಗುರಿಯನ್ನು ನಾನು ಹೊಂದಿದ್ದೇನೆ ಎಂದು ವಿದ್ಯಾರಾಣಿ ಹೇಳಿದ್ದರು. ಕ್ರಿಮಿನಲ್ ಹಿನ್ನಲೆಯ ಕುಟುಂಬದಿಂದ ಬಂದವರಾಗಿದ್ದರೂ, ತನ್ನ ಜೀವನವನ್ನು ತಾನೇ ರೂಪಿಸಿಕೊಂಡಿರುವ ವಿದ್ಯಾರಾಣಿಗೆ ಬಿಜೆಪಿ ಟಿಕೆಟ್ ನೀಡುವ ಸಾಧ್ಯತೆಯಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.
ವೀರಪ್ಪನ್ ನನ್ನು ಹೊಡೆದುರುಳಿಸಿದ ನಂತರ ಸಮಾಜದಲ್ಲಿ ಎದುರಾದ ಅವಮಾನವನ್ನು ಮೆಟ್ಟಿನಿಂತು ವಕೀಲ ವೃತ್ತಿಯಲ್ಲಿ ಪದವೀಧರರಾಗಿರುವ ವಿದ್ಯಾರಾಣಿಯನ್ನು ಬಿಜೆಪಿ, ತಮಿಳುನಾಡು ಘಟಕದ ಹಿಂದುಳಿದ ವರ್ಗದ ಉಪಾಧ್ಯಕ್ಷರನ್ನಾಗಿ ನೇಮಿಸಿತ್ತು. 2021ರಲ್ಲಿ ತಮಿಳುನಾಡು ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ವಿದ್ಯಾರಾಣಿಗೆ ಅವಕಾಶವಿದ್ದರೂ, ಅದನ್ನು ಒಪ್ಪಿಕೊಳ್ಳದ ವಿದ್ಯಾರಾಣಿ, ಈಗ ಸಾರ್ವತ್ರಿಕ ಚುನಾವಣೆಗೆ ಸಜ್ಜಾಗುತ್ತಿದ್ದಾರೆ. ಯಾವ ಕ್ಷೇತ್ರದಿಂದ ಇವರಿಗೆ ಟಿಕೆಟ್ ಸಿಗುತ್ತೆ ಅಥವಾ ಟಿಕೆಟ್ ನೀಡುವ ವಿಚಾರದಲ್ಲಿ ಬಿಜೆಪಿ ಹೈಕಮಾಂಡ್ ಅಂತಿಮ ನಿರ್ಧಾರ ತೆಗೆದುಕೊಂಡಿದೆಯೋ ಎನ್ನುವುದರ ಬಗ್ಗೆ ಸ್ಪಷ್ಟತೆಯಿಲ್ಲ.ವಕೀಲ ವೃತ್ತಿ ಜೊತೆಗೆ ಬಿಜೆಪಿ ನಾಯಕಿಯಾಗಿ ರಾಜ್ಯಾದ್ಯಂತ ಪ್ರವಾಸ ಮಾಡಿದ್ದ ವಿದ್ಯಾರಾಣಿ ತಮ್ಮ ಸಾಮಾಜಿಕ ಕಳಕಳಿಯ ಕೆಲಸದ ಮೂಲಕ, ತನ್ನ ಕುಟುಂಬದ ಮೇಲಿರುವ ಕಪ್ಪುಚುಕ್ಕೆಯನ್ನು ಅಳಿಸುವ ಪ್ರಯತ್ನವನ್ನು ಮಾಡಿದ್ದರು.
ಮೈಸೂರಿನಲ್ಲಿ ಬಡಮಕ್ಕಳಿಗಾಗಿ ಶಾಲೆಯನ್ನೂ ಇವರು ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಸಮಾಜಮುಖಿ ಕೆಲಸ ಮಾಡಲು ನನ್ನ ತಂದೆಯೇ ನನಗೆ ಹೀರೋ ಎಂದು ಹಿಂದೊಮ್ಮೆ ಹೇಳಿದ್ದ ವಿದ್ಯಾರಾಣಿ, ತನ್ನ ಜೀವನದಲ್ಲಿ ತಂದೆಯನ್ನು ನೋಡಿದ್ದು, ಮಾತನಾಡಿದ್ದು ಕೇವಲ ಮೂವತ್ತು ನಿಮಿಷ ಎಂದು ಹೇಳಿದ್ದಾರೆ. ನನ್ನ ಆ ಭೇಟಿ ಅದೇ ಮೊದಲ ಮತ್ತು ಕೊನೆಯ ಭೇಟಿಯಾಗಿತ್ತು ಎಂದು ಹೇಳಿರುವ ವಿದ್ಯಾರಾಣಿ, ತಮಗೆ ಬಿಜೆಪಿ ಟಿಕೆಟ್ ಸಿಗುವ ಆಶಾಭಾವನೆಯಲ್ಲಿದ್ದಾರೆ. ತಮಿಳುನಾಡಿನಲ್ಲಿ ಇಂಡಿಯಾ, ಎನ್ಡಿಎ ಮೈತ್ರಿಕೂಟ ಮತ್ತು ಎಐಎಡಿಎಂಕೆ ಸೇರಿದಂತೆ ಹಲವು ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸುತ್ತಿದೆ.
ತಮಿಳುನಾಡು ಬಿಜೆಪಿಯ ಘಟಕದ ಅಧ್ಯಕ್ಷ ಅಣ್ಣಾಮಲೈ ಆ ಹುದ್ದೆ ಸ್ವೀಕರಿಸಿದ ನಂತರ ಬಿಜೆಪಿಯ ವೋಟ್ ಬ್ಯಾಂಕಿನಲ್ಲಿ ಗಣನೀಯ ಸುಧಾರಣೆಯಾಗಿದೆ ಮತ್ತು ಕೆಲವು ಸೀಟುಗಳನ್ನು ಗೆಲ್ಲುವ ಸಾಧ್ಯತೆಯೂ ಇದೆ ಎಂದು ಇತ್ತೀಚೆಗೆ ಪ್ರಕಟಗೊಂಡ ಸರ್ವೇಯಲ್ಲಿ ಉಲ್ಲೇಖವಾಗಿದೆ.