ಚಂಡೀಗಢ: ಹರಿಯಾಣ ವಿಧಾನಸಭೆಯ ಎಲ್ಲಾ 90 ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಿದ್ದು ಆಡಳಿತರೂಢ ಬಿಜೆಪಿ ಮತ್ತೆ ಅಧಿಕಾರಕ್ಕೆ ಏರಿದೆ. ಈ ಮೂಲಕ ಗೆಲುವಿನ ಹ್ಯಾಟ್ರಿಕ್ ಸಾಧಿಸಿದೆ.
ಹರಿಯಾಣದಲ್ಲಿ ಬಿಜೆಪಿ ಈ ಬಾರಿ ಅಭೂತಪೂರ್ವ ಗೆಲುವು ಸಾಧಿಸಲು ಮುಖ್ಯಮಂತ್ರಿ ನೇರ ಕಾರಣರಾಗಿದ್ದಾರೆ. ಚುನಾವಣಾ ಪ್ರಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬಿಜೆಪಿ ಹೆಚ್ಚು ಬಳಸಿಕೊಂಡಿರಲಿಲ್ಲ. ಸ್ಥಳೀಯ ಮಟ್ಟದಲ್ಲಿ ಮುಖ್ಯಮಂತ್ರಿಯೇ ವ್ಯಾಪಕ ಪ್ರಚಾರ ನಡೆಸಿದರು. ಅವರ ವರ್ಚಸ್ಸಿನಿಂದಲೇ ಹರಿಯಾಣದಲ್ಲಿ ಈ ಬಾರಿ ಬಿಜೆಪಿ ಮತ್ತೆ ದಿಗ್ವಿಜಯ ಸಾಧಿಸುವಂತಾಗಿದೆ.
ಸ್ಪಷ್ಟ ಬಹುಮತಕ್ಕೆ 46 ಸ್ಥಾನಗಳ ಅಗತ್ಯ ಇತ್ತು. ಈ ಪೈಕಿ ಬಿಜೆಪಿ 48 ಸ್ಥಾನಗಳನ್ನು ಗೆದ್ದು ಸರಳ ಬಹುಮತ ಪಡೆಯಿತು. ಕಾಂಗ್ರೆಸ್ 37, ಐಎನ್‌ಎಲ್‌ಡಿ 2, ಪಕ್ಷೇತರ ಅಭ್ಯರ್ಥಿಗಳು 3 ಸ್ಥಾನಗಳನ್ನು ಗೆದ್ದು ಕೊಂಡಿದ್ದಾರೆ. ಕಾಂಗ್ರೆಸ್ ದೊಡ್ಡ ವಿರೋಧ ಪಕ್ಷವಾಗಿ ಹೊರ ಹೊಮ್ಮಿದೆ.
ಸಿಎಂ ನಯಾಬ್ ಸಿಂಗ್ ಸೈನಿ ಅವರೇ ಮತ್ತೆ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಹರಿಯಾಣದಲ್ಲಿ ಒಟ್ಟು 1,031 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರು. 2 ಕೋಟಿಗೂ ಅಧಿಕ ಜನರು ಮತ ಚಲಾವಣೆ ಮಾಡಿದ್ದರು.
ಹರಿಯಾಣ ವಿಧಾನಸಭೆ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು ಆಡಳಿತರೂಢ ಬಿಜೆಪಿ ಮತ್ತೆ ಅಧಿಕಾರಕ್ಕೆ ಏರಿದೆ. ಈ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದೆ.
ಒಮರ್ ಅಬ್ದುಲ್ಲಾ ಜಮ್ಮು-ಕಾಶ್ಮೀರದ ನೂತನ ಮುಖ್ಯಮಂತ್ರಿ :
ಜಮ್ಮು-ಕಾಶ್ಮೀರದ ನೂತನ ಮುಖ್ಯಮಂತ್ರಿಯಾಗಿ ಒಮರ್ ಅಬ್ದುಲ್ಲಾ ಆಯ್ಕೆ ಆಗಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಚುನಾವಣೆಯಲ್ಲಿ ನ್ಯಾಷನಲ್ ಕಾನ್ಫರೆನ್ಸ್, ಕಾಂಗ್ರೆಸ್ ಮೈತ್ರಿಕೂಟ ಜಯಗಳಿಸಿದ ಬೆನ್ನಲ್ಲೇ ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಖ್ ಅಬ್ದುಲ್ಲಾ ಅವರು ತಮ್ಮ ಪುತ್ರ ಒಮರ್ ಅಬ್ದುಲ್ಲಾ ಅವರನ್ನು ಮುಂದಿನ ಮುಖ್ಯಮಂತ್ರಿ ಘೋಷಣೆ ಮಾಡಿದ್ದಾರೆ.
ನ್ಯಾಷನಲ್ ಕಾನ್ಫರೆನ್ಸ್ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಬುದ್ಗಾಮ್ ಮತ್ತು ಗಂದರ್ಬಾಲ್ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಿ ಗೆದ್ದಿದ್ದಾರೆ. ಅಬ್ದುಲ್ಲಾ ಕುಟುಂಬಕ್ಕೆ ಮೂರು ತಲೆಮಾರುಗಳಿಂದಲೂ ಗಂದೇರ್ಬಾಲ್ ಕ್ಷೇತ್ರ ಭದ್ರಕೋಟೆಯಾಗಿದೆ.
90 ಕ್ಷೇತ್ರಗಳ ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯು ಮೂರು ಹಂತಗಳಲ್ಲಿ ಸೆಪ್ಟೆಂಬರ್ 18, ಸೆಪ್ಟೆಂಬರ್ 25 ಮತ್ತು ಅಕ್ಟೋಬರ್ 1ರಂದು ಮತದಾನ ನಡೆದಿತ್ತು. ಮಂಗಳವಾರ ಮತಗಳ ಎಣಿಕೆ ನಡೆಯಿತು. ಇತ್ತೀಚಿನ ಟ್ರೆಂಡ್ ಪ್ರಕಾರ ಎನ್‌ಸಿ ಮತ್ತು ಕಾಂಗ್ರೆಸ್ ಮೈತ್ರಿಕೂಟ 49 ಕ್ಷೇತ್ರ, ಬಿಜೆಪಿ 29, ಪಿಡಿಪಿ 3, ಇತರರು 9 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.ಒಟ್ಟು 90 ಕ್ಷೇತ್ರಗಳ ಪೈಕಿ ಎನ್‌ಸಿ 56, ಕಾಂಗ್ರೆಸ್ 38, ಸಿಪಿಎಂ 1 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದವು. ಬಿಜೆಪಿ 62 ಕ್ಷೇತ್ರಗಳಲ್ಲಿ ಪಿಡಿಪಿ 81 ಕ್ಷೇತ್ರಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿತ್ತು.