ಬೆಂಗಳೂರು : ಉದ್ಯಮಗಳಲ್ಲಿನ ನಾಮಫಲಕಗಳಲ್ಲಿ ಕನ್ನಡ ಭಾಷೆ ಕಡ್ಡಾಯಗೊಳಿಸುವ ವಿಧಾನಮಂಡಲ ಅಧಿವೇಶನದಲ್ಲಿ ಅನುಮೋದನೆ ಪಡೆಯಲಾಗಿದ್ದ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ (ತಿದ್ದುಪಡಿ) ವಿಧೇಯಕ 2024ಕ್ಕೆ ಸಂಬಂಧಿಸಿದಂತೆ ರಾಜ್ಯಪತ್ರ ಪ್ರಕಟಿಸಲಾಗಿದೆ.

ಕನ್ನಡ ನಾಮಫಲಕ ಕಡ್ಡಾಯಗೊಳಿಸುವ ಸಂಬಂಧ ಕಳೆದ ತಿಂಗಳು ಕನ್ನಡಪರ ಹೋರಾಟಗಾರರು ಪ್ರತಿಭಟನೆ ನಡೆಸಿದ್ದರು. ನಂತರ ಕನ್ನಡ ನಾಮಫಲಕ ಅಳವಡಿಕೆಯನ್ನು ಕಾನೂನು ಬದ್ಧವಾಗಿಸಲು ಫೆ.13ರಂದು ವಿಧಾನಸಭೆಯಲ್ಲಿ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ (ತಿದ್ದುಪಡಿ) ವಿಧೇಯಕ 2024 ಮಂಡಿಸಿ ಅನುಮೋದನೆ ಪಡೆಯಲಾಗಿತ್ತು. ಇದೀಗ ತಿದ್ದುಪಡಿಗೆ ರಾಜ್ಯಪಾಲರು ಅಂಕಿತ ಹಾಕಿದ್ದು, ರಾಜ್ಯಪತ್ರ ಪ್ರಕಟಿಸಲಾಗಿದೆ.

ತಿದ್ದುಪಡಿ ವಿಧೇಯಕದಿಂದಾಗಿ ಸರ್ಕಾರ ಅಥವಾ ಸ್ಥಳೀಯ ಪ್ರಾಧಿಕಾರದಿಂದ ಅನುಮತಿ ಮತ್ತು ಮಂಜೂರಾತಿ ಪಡೆದ ವಾಣಿಜ್ಯ, ಕೈಗಾರಿಕೆ, ಟ್ರಸ್ಟ್‌ಗಳು, ಸಮಾಲೋಚನಾ ಕೇಂದ್ರ ಗಳು, ಆಸ್ಪತ್ರೆಗಳು, ಪ್ರಯೋಗಾಲಯಗಳು, ಮನರಂಜನಾ ಕೇಂದ್ರಗಳು, ಹೋಟೆಲ್‌ಗಳು ಸೇರಿದಂತೆ ಇನ್ನಿತರ ಉದ್ದಿಗೆಗಳ ನಾಮಫಲಕಗಳಲ್ಲಿ ಕನ್ನಡ ಭಾಷೆ ಶೇ. 60ರಷ್ಟು ಪ್ರದರ್ಶಿಸಬೇಕು ಹಾಗೂ ನಾಮಫಲಕದ ಮೇಲ್ಬಾಗದಲ್ಲಿ ಅದನ್ನು ಅಳವಡಿಸಬೇಕಾಗುತ್ತದೆ