ಬೆಳಗಾವಿ :
ಬೆಳಗಾವಿಯ ಹಿರಿಯ ಪತ್ರಕರ್ತ, ಕನ್ನಡ ಹೋರಾಟಗಾರ, ಅಜಾತಶತ್ರು ಎಂದೇ ಖ್ಯಾತಿ ಪಡೆದಿರುವ ಮೆಹಬೂಬ ಮಕಾಂದರ ಅವರಿಗೆ ನಾಗನೂರು ರುದ್ರಾಕ್ಷಿಮಠದ ವತಿಯಿಂದ ನೀಡುವ ಕನ್ನಡ ನುಡಿ ಶ್ರೀ ಪ್ರಶಸ್ತಿ ಲಭಿಸಿದೆ.

ಮೆಹಬೂಬ ಮಕಾಂದಾರ ಅವರು ಕಳೆದ ಮೂರು ದಶಕಗಳಿಂದ ಪತ್ರಕರ್ತರಾಗಿ ಛಾಪು ಮೂಡಿಸಿದ್ದಾರೆ. ಕನ್ನಡಮ್ಮ ದಿನಪತ್ರಿಕೆಯಲ್ಲಿ ಎರಡು ದಶಕಗಳಿಗೂ ಹೆಚ್ಚು ಕಾಲ ಪತ್ರಕರ್ತರಾಗಿ ಸೇವೆ ಸಲ್ಲಿಸಿದ್ದಾರೆ. ಇದೀಗ ಬೆಳಗಾವಿ ಸುದ್ದಿ ಡಾಟ್ ಕಾಮ್ ಮೂಲಕ ಕ್ಷಣ ಕ್ಷಣದ ಸುದ್ದಿಗಳ ಮೂಲಕ ನಾಡಿನಾದ್ಯಂತ ಚಿರಪರಿಚಿತರಾಗಿದ್ದಾರೆ. ಕನ್ನಡಪರ ಹೋರಾಟಗಾರರಾಗಿ ಬೆಳಗಾವಿಯಲ್ಲಿ ಕನ್ನಡ ಕಟ್ಟುವ ಕೆಲಸದಲ್ಲಿ ಜಾಗೃತ ಧ್ವನಿಯಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಅನುಪಮ ಸೇವೆ ಪರಿಗಣಿಸಿ ಪ್ರಶಸ್ತಿ ನೀಡಲಾಗುತ್ತಿದೆ.

ಡಿಸೆಂಬರ್ 5 ರಂದು ಸಂಜೆ 5:00 ಗಂಟೆಗೆ ಶ್ರೀ ಮಠದಲ್ಲಿ ನಡೆಯುವ ಕಾಯಕಯೋಗಿ ಮಹಾಪ್ರಸಾದಿ ಡಾ..ಶಿವಬಸವ ಮಹಾಸ್ವಾಮಿಗಳ 134 ನೇ ಜಯಂತಿ ಮಹೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.