ಬೆಳಗಾವಿ :
ಬೆಳಗಾವಿ ಅಧಿವೇಶನದಲ್ಲಿ ಬೆಳಗಾವಿಯನ್ನು ಎರಡನೇ ರಾಜಧಾನಿ ಎಂದು ಘೋಷಿಸುವ ಹಾಗೂ ಸುವರ್ಣ ಸೌಧಕ್ಕೆ ಕಚೇರಿಗಳ ಸ್ಥಳಾಂತರದ ಬಗ್ಗೆ ಚರ್ಚಿಸುವ ಮತ್ತು ಸರಕಾರದ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಕನ್ನಡ ಸಂಘಟನೆಗಳು ಒತ್ತಾಯಿಸಿವೆ.

ಈ ಬಗ್ಗೆ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯ ಅಧ್ಯಕ್ಷ ಅಶೋಕ ಚಂದರಗಿ ಅವರ ನೇತೃತ್ವದಲ್ಲಿ ರಾಜ್ಯ ಸರಕಾರಕ್ಕೆ ಪತ್ರ ಬರೆಯಲಾಗಿದೆ.

ಡಿಸೆಂಬರ್ 4 ರಿಂದ ಬೆಳಗಾವಿಯಲ್ಲಿ 10 ದಿನಗಳ ಕಾಲ ನಡೆಯುವ ವಿಧಾನ ಮಂಡಲದ ಚಳಿಗಾಲದ ಅಧಿವೇಶನ ಬಗ್ಗೆ ಉತ್ತರ ಕರ್ನಾಟಕದ ಜನರು ಬಹಳಷ್ಟು ನಿರೀಕ್ಷೆಗಳನ್ನು ಹೊಂದಿದ್ದಾರೆ. 11 ವರ್ಷಗಳ ಹಿಂದೆ ಉದ್ಘಾಟಿಸಲ್ಪಟ್ಟ ಸುವರ್ಣ ಸೌಧಕ್ಕೆ, ಬೆಂಗಳೂರಿನ ವಿಧಾನ ಸೌಧದಿಂದ ಮಹತ್ವದ ಕಚೇರಿಗಳನ್ನು ಸ್ಥಳಾಂತರಿಸಬೇಕೆಂಬ ಬೇಡಿಕೆಯನ್ನು ಸತತವಾಗಿ ನಾವು ಮಂಡಿಸುತ್ತಲೇ ಬಂದಿದ್ದೇವೆ. ಬೆಳಗಾವಿಯನ್ನು ಎರಡನೇ ರಾಜಧಾನಿಯನ್ನಾಗಿ ಘೋಷಿಸಬೇಕೆಂಬ ಒತ್ತಾಯವೂ ಉತ್ತರ ಕರ್ನಾಟಕದ ಜನತೆಯಿಂದ ಮೇಲಿಂದ ಮೇಲೆ ಬರುತ್ತಲೇ ಇದೆ. ಅದಾಗ್ಯೂ ಈ ಎರಡು ಮಹತ್ವದ ಬೇಡಿಕೆಗಳ ಬಗ್ಗೆ ರಾಜ್ಯ ಸರಕಾರ ಯಾವುದೇ ರೀತಿಯ ಸಕಾರಾತ್ಮಕ ಸ್ಪಂದನೆ ನೀಡದಿರುವುದು ದುರ್ದೈವದ ಸಂಗತಿಯಾಗಿದೆ.

ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯವನ್ನಾಗಿ ಮಾಡಬೇಕೆಂಬ ಕೂಗಿನ ಹಿಂದೆ ಈ ಭಾಗಕ್ಕೆ ಆಗುತ್ತಿರುವ ಅನ್ಯಾಯಗಳ ಸರಮಾಲೆಯೇ ಕಾರಣ ಹಾಗೂ ರಾಜ್ಯದ ಜನತೆಗೆ ಚೆನ್ನಾಗಿ ತಿಳಿದಿರುವ ವಿಷಯವಾಗಿದೆ. ಕರ್ನಾಟಕದ ಏಕೀಕರಣದ ಹೋರಾಟದ ಫಲವಾಗಿ, ಹರಿದು ಹಂಚಿ ಹೋಗಿದ್ದ ಕನ್ನಡ ಪ್ರದೇಶಗಳು ಒಗ್ಗೂಡಿ ಅಸ್ತಿತ್ವಕ್ಕೆ ಬಂದ ಅಖಂಡ ಕರ್ನಾಟಕಕ್ಕೆ ಬದ್ಧವಾಗಿರುವ ಕನ್ನಡ ಸಂಘಟನೆಗಳು ಪ್ರಜ್ಞಾವಂತ ನಾಗರಿಕರು ಬೆಳಗಾವಿಯನ್ನು ಎರಡನೇ ರಾಜಧಾನಿಯನ್ನಾಗಿ ಘೋಷಿಸಬೇಕೆಂಬ ಬೇಡಿಕೆಯನ್ನು ಇಡುತ್ತಲೇ ಬಂದಿದ್ದಾರೆ. ಇಂತಹ ಕ್ರಮದ ಮೂಲಕ ಪ್ರತ್ಯೇಕ ರಾಜ್ಯದ ಕೂಗಿಗೆ ಕಡಿವಾಣ ಹಾಕಬೇಕೆಂಬುದು ನಮ್ಮೆಲ್ಲರ ನಿಲುವಾಗಿದೆ. ಎರಡನೇ
ರಾಜಧಾನಿಯನ್ನಾಗಿ ಘೋಷಿಸುವ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ಸಮಗ್ರವಾಗಿ ಚರ್ಚೆ ನಡೆಯಬೇಕು. ಈ ಬಗ್ಗೆ ಸರಕಾರ ತನ್ನ ಸ್ಪಷ್ಟ ನಿಲುವನ್ನು ಪ್ರಕಟಿಸಬೇಕೆಂಬುದು ನಮ್ಮ ಆಗ್ರಹವಾಗಿದೆ.

ಕಳೆದ 11 ವರ್ಷಗಳಿಂದ ಸುವರ್ಣ ಸೌಧಕ್ಕೆ ಕಚೇರಿಗಳ ಸ್ಥಳಾಂತರದ ಬಗ್ಗೆ ಕನ್ನಡ ಸಂಘಟನೆಗಳು ಒತ್ತಾಯಿಸುತ್ತಲೇ ಬಂದಿವೆ. ಈ ಬಗ್ಗೆ ರಾಜ್ಯ ಸರಕಾರ ಯಾವುದೇ ಸ್ಪಷ್ಟವಾದ ಅಧಿಕೃತ ನಿಲುವನ್ನು ಪ್ರಕಟಿಸಿಲ್ಲ. ರಾಜ್ಯ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಈ ಹಿಂದೆ ವಿಧಾನ ಮಂಡಲದ ಭರವಸೆಗಳ ಸಮಿತಿಯ ಅಧ್ಯಕ್ಷರಾಗಿದ್ದಾಗ 13 ಮಹತ್ವದ ಕಚೇರಿಗಳ ಸ್ಥಳಾಂತರಕ್ಕೆ ಶಿಫಾರಸು ಮಾಡಿದ್ದರು. ಈ ಶಿಫಾರಸುಗಳ ಬಗ್ಗೆ ಪ್ರಸಕ್ತ ಅಧಿವೇಶನದಲ್ಲಿ ಸಮಗ್ರವಾಗಿ ಚರ್ಚೆ ನಡೆಯಲೇ ಬೇಕು. ಈ ಸಂಬಂಧ ರಾಜ್ಯ ಸರಕಾರ ತನ್ನ ಗಟ್ಟಿಯಾದ ನಿಲುವನ್ನು ವಿಧಾನ ಮಂಡಲದ ಅಧಿವೇಶನದಲ್ಲಿ ಪ್ರಕಟಿಸಬೇಕೆಂಬುದೂ ನಮ್ಮ ಒತ್ತಾಯವಾಗಿದೆ.

ಈ ಎರಡು ಮಹತ್ವದ ಬೇಡಿಕೆಗಳ ಬಗ್ಗೆ ರಾಜ್ಯ ಸರಕಾರ ತಳೆಯುವ ನಿಲುವನ್ನು ಆಧರಿಸಿ ಉತ್ತರ ಕರ್ನಾಟಕದ ಕನ್ನಡ ಸಂಘಟನೆಗಳು ತಮ್ಮ ಮುಂದಿನ ಹೋರಾಟದ ಹೆಜ್ಜೆಯನ್ನು ಇರಿಸಲಿವೆಯೆಂದು ಈ ಮೂಲಕ ತಮ್ಮ ಗಮನಕ್ಕೆ ತರಬಯಸುತ್ತೇವೆ ಎಂದು ಅವರು ತಿಳಿಸಿದ್ದಾರೆ.