
ಹೆಬ್ರಿ : ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ ಹೆಬ್ರಿ ತಾಲೂಕು ಘಟಕದ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತಿನ 111 ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಕನ್ನಡ ರಸಪ್ರಶ್ನೆ ಸ್ಪರ್ಧೆ ಮತ್ತು ಉಪನ್ಯಾಸ ಕಾರ್ಯಕ್ರಮವು ದಿನಾಂಕ :7-5 – 2025 ರಂದು ಸರಕಾರಿ ಪ್ರಥಮ ದರ್ಜೆ ಕಾಲೇಜು ಮುನಿಯಾಲು ಇಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ.ಸಾ.ಪ ಹೆಬ್ರಿ ತಾಲೂಕು ಘಟಕದ ಅಧ್ಯಕ್ಷ ಮುದ್ದೂರು ಶ್ರೀನಿವಾಸ ಭಂಡಾರಿ ಅವರು ವಹಿಸಿದ್ದರು. ಮುನಿಯಾಲಿನ ಉದ್ಯಮಿ ದಿನೇಶ ಪೈಯವರು ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪುಪ್ಪ ನಮನ ಸಲ್ಲಿಸುವುದರ ಮೂಲಕ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಉದ್ಯಮಿ ಗೋಪಿನಾಥ ಭಟ್ ಸಂಪನ್ಮೂಲ ವ್ಯಕ್ತಿ ಹೆಬ್ರಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ| ವಿದ್ಯಾಧರ ಹೆಗ್ಡೆ ಎಸ್., ಮುನಿಯಾಲು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಸುಧಾಕರ ಕೆ.ಜಿ ಉಪಸ್ಥಿತರಿದ್ದರು. ಕ.ಸಾ.ಪ ಗೌರವ ಕಾರ್ಯದರ್ಶಿ ಡಾ| ಪ್ರವೀಣ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆ ಮತ್ತು ಕಾರ್ಯ ಸಾಧನೆಗಳ ಬಗ್ಗೆ ತಿಳಿಸಿದರು.
ಕ.ಸಾ.ಪ ಪದಾಧಿಕಾರಿ ವೀಣಾ ಆರ್ ಭಟ್ ಸ್ವಾಗತಿಸಿದರು. ಮಹೇಶ ಹೈಕಾಡಿ ವಂದಿಸಿದರು. ಕ.ಸಾ.ಪ ಗೌರವ ಕಾರ್ಯದರ್ಶಿ ಮಂಜುನಾಥ ಕೆ ಶಿವಪುರ ಕಾರ್ಯಕ್ರಮ ನಿರೂಪಿಸಿ ಕನ್ನಡ ರಸಪ್ರಶ್ನೆ ಸ್ಪರ್ಧೆಯನ್ನು ನಡೆಸಿದರು.
ಕಾಲೇಜಿನ ಬೋಧಕ ಮತ್ತು ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮ ಉದ್ಘಾಟಿಸಿದ ದಿನೇಶ ಪೈಯವರು ಮಾತನಾಡಿ, ಸ್ವಭಾಷೆಯನ್ನು ಪ್ರೀತಿಸಬೇಕು. ಕಲಿಯಬೇಕು ಹಾಗೆಂದು ಬೇರೆ ಭಾಷೆಗಳನ್ನು ಕಲಿಯಲು ಯಾವುದೇ ಅಡೆತಡೆ ಇಲ್ಲ. ಎಷ್ಟು ಭಾಷೆಯನ್ನಾದರೂ ಕಲಿಯಬಹುದು. ಸ್ಪಭಾಷೆ ಬಳಕೆಯ ಬಗ್ಗೆ ಯಾವುದೇ ಮುಜುಗರ ಇರಬಾರದು. ಕನ್ನಡ ಮಾಧ್ಯಮದಲ್ಲಿ ಕಲಿತು ಇಂದು ದೇಶದಾದ್ಯಂತ ವ್ಯವಹಾರ ಮಾಡಬಲ್ಲ ಸಾಮಥ್ಯ ತನಗಿದೆ. ನಮ್ಮ ಸಾಧನೆಗಳಿಗೆ ಕೇವಲ ಭಾಷಾ ಮಾಧ್ಯಮ ಅಡ್ಡಿಯಾಗುವುದಿಲ್ಲ ಎಂದರು.
ಗೋಪಿನಾಥ ಭಟ್ ಅವರು ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಹೆಬ್ರಿ ಘಟಕವು ಕನ್ನಡಕ್ಕಾಗಿ ಹತ್ತು ಹಲವು ಕನ್ನಡದ ಕೆಲಸಗಳನ್ನು ಮಾಡುತ್ತಿರುವುದನ್ನು ಗಮನಿಸಿದ್ದೇನೆ. ಇದನ್ನು ಆಸಕ್ತಿ ಮತ್ತು ಕಾಳಜಿಯಿಂದ ನಡೆಸುವುದರ ಬಗ್ಗೆ ಹೆಮ್ಮೆ ಇದೆ. ವಿದ್ಯಾರ್ಥಿಗಳಲ್ಲಿ ಕನ್ನಡದ ಬಗ್ಗೆ ಜ್ಞಾನ ಮತ್ತು ಆಸಕ್ತಿ ಹೆಚ್ಚಿಸಲು ಇಂತಹ ಕಾರ್ಯಕ್ರಮಗಳು ಅಗತ್ಯ ಎಂದರು.
ಸಂಪನ್ಮೂಲ ವ್ಯಕ್ತಿ ಡಾ| ವಿದ್ಯಾಧರ ಹೆಗ್ಡೆ ಮಾತನಾಡಿ, ಕನ್ನಡ ಹೃದಯದ ಭಾಷೆಯಾಗಬೇಕು. ಅದನ್ನು ಎಂದೂ ಮರೆಯುವಂತಿಲ್ಲ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದಬೇಕು. ವೃತ್ತಪತ್ರಿಕೆಗಳನ್ನು ಓದಬೇಕು. ಕೇವಲ ಹೊತ್ತು ಕಳೆಯದೆ ಅಧ್ಯಯನ ನಿರತನಾದರೆ ಉತ್ತಮವಾದುದುನ್ನು ಸಾಧಿಸಬಹುದು. ಸ್ಪರ್ಧೆಯಿದೆ; ಅವಕಾಶಗಳೂ ಇವೆ. ಗುರಿಯ ಕಡೆ ಏಕಾಗ್ರಚಿತ್ತನಾಗಿ ಸಾಗಿದರೆ ಯಶಸ್ಸು ಖಂಡಿತ ಎಂದು ವಿದ್ಯಾರ್ಥಿಗಳಿಗೆ ಪದವಿಯ ನಂತರ ಉನ್ನತ ಅಧ್ಯಯನದ ಅವಕಾಶಗಳ ಬಗ್ಗೆ ಪ್ರೇರಣೆಯ ಮಾತುಗಳನ್ನು ಆಡಿದರು.
ವಿದ್ಯಾರ್ಥಿಗಳಿಗೆ ಕನ್ನಡ ರಸಪ್ರಶ್ನೆ ಸ್ಪರ್ಧೆ ನಡೆಸಿ ಬಹುಮಾನ ವಿತರಿಸಲಾಯಿತು.