ಸುಬ್ರಹ್ಮಣ್ಯ:
ಲೋಕಸಭೆಯ ಕಲಾಪದಲ್ಲಿ ಆಗುವ ಚರ್ಚೆಗಳನ್ನು ಇಂಗ್ಲಿಷ್ ಹಾಗೂ ಪ್ರಾದೇಶಿಕ ಭಾಷೆಗೆ ಭಾಷಾಂತರ ಮಾಡುವ ಕನ್ಸಲ್ಟಂಟ್ ಇಂಟಪ್ರಿಟರ್‌ಹುದ್ದೆಗೆ ಸುಬ್ರಹ್ಮಣ್ಯ ಸಮೀಪದ ಸುಳ್ಯ ತಾಲೂಕಿನ ಹರಿಹರ ಪಲ್ಲತ್ತಡ್ಕ ಗ್ರಾಮದ ಗುಂಡಿಹಿಷ್ಣುವಿನ ಡಾ. ಗೋವಿಂದ ಎನ್.ಎಸ್. ನೇಮಕಗೊಂಡಿದ್ದಾರೆ.

ಲೋಕಸಭೆಯ ಅಧಿವೇಶನದಲ್ಲಿನ ಕಾರ್ಯಕಲಾಪಗಳನ್ನು ಭಾರತೀಯ ವ್ಯವಸ್ಥೆಗೆ ಭಾಷಾಂತರ ಮಾಡಿಸುವ ಸಲುವಾಗಿ ಹೊಸ ಸಂಸತ್ ಭವನದಲ್ಲಿ ವ್ಯವಸ್ಥೆ ಮಾಡಲಾಗಿತ್ತು, ಅದಕ್ಕಾಗಿ 8ನೇ ಪರಿಚ್ಛೇದಕ್ಕೆ ಸೇರ್ಪಡೆಯಾಗಿರುವ ಎಲ್ಲಾ ಭಾಷೆಗಳಲ್ಲೂ ತಲಾ ಐದು ಕನ್ಸಲ್ಟಂಟ್ ಹುದ್ದೆಗಳನ್ನು
ಸೃಷ್ಟಿಸಲಾಗಿದೆ.

ಭಾಷೆಯ ಭಾಷಾಂತರಕ್ಕಾಗಿ 15 ಮಂದಿ ಅರ್ಜಿ ಸಲ್ಲಿಸಿದ್ದು, 10 ಮಂದಿಯನ್ನು ಆಯ್ಕೆ ಮಾಡಲಾಗಿತ್ತು, ಇದರಲ್ಲಿ ನಾಲ್ವರು ಇದೀಗ ನೇಮಕಗೊಂಡಿದ್ದಾರೆ. ಇದರಲ್ಲಿ ಮೂವರು ದೆಹಲಿಯ ಕನ್ನಡಿಗರಾಗಿದ್ದು, ಗೋವಿಂದ ಎನ್.ಎಸ್. ಕರ್ನಾಟಕದವರಾಗಿದ್ದಾರೆ. ಈ ಮೊದಲೇ ಓರ್ವರು ಪೂರ್ಣಕಾಲಿಕವಾಗಿ ಕಾರ್ಯನಿರ್ವಹಿಸುತ್ತಿದ್ದರು. ಐವರು ಕನ್ನಡ ಭಾಷಾಂತರದ ಕೆಲಸ ನಿರ್ವಹಿಸಲಿದ್ದಾರೆ.

ಸಂಸತ್‌ನಲ್ಲಿ ನಡೆಯುವ ಕಾರ್ಯಕಲಾಪದಲ್ಲಿ ಕನ್ನಡ ಭಾಷೆಯಲ್ಲಿ ಮಾತನಾಡುವುದನ್ನು ಇಂಗ್ಲಿಷ್‌ಗೆ ಹಾಗೂ ಇಂಗ್ಲಿಷ್ ನಲ್ಲಿ ಮಾತನಾಡುವುದನ್ನು ಕನ್ನಡಕ್ಕೆ ಭಾಷಾಂತರ ಮಾಡುವುದು ಇವರ ಕೆಲಸವಾಗಿರುತ್ತದೆ. ನಾಲ್ವರು ಸಂಸತ್‌ನಿಂದಲೇ ಕಾರ್ಯನಿರ್ವಹಿಸಲಿದ್ದು, ಸಂಸತ್ ಕಲಾಪ ಸಮಯದಲ್ಲಿ ಮಾತ್ರವೇ ಇವರಿಗೆ ಕಾರ್ಯ ನಿರ್ವಹಿಸಲು ಇರಲಿದೆ.

ಡಾ.ಗೋವಿಂದ ಎನ್‌.ಎಸ್. ಅವರು ಸುಳ್ಯ ತಾಲೂಕಿನ ಹರಿಹರ ಪಲ್ಲತ್ತಡ್ಕದ ನಿವಾಸಿಯಾಗಿದ್ದು, ಕಡಬ ತಾಲೂಕಿನ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತಕ್ಕೊಳಪಟ್ಟ ಸುಬ್ರಹ್ಮಣ್ಯದ ಕುಕ್ಕೆ ಶ್ರೀ ಸುಬ್ರಹ್ಮಣೇಶ್ವರ ಮಹಾವಿದ್ಯಾಲಯದಲ್ಲಿ ఇంಗ್ಲಿಷ್ ಉಪನ್ಯಾಸಕರಾಗಿ, ಕಾರ್ಯನಿರ್ವಹಿಸಿದ್ದರು. ನಾಟಕ ಕಲಾವಿದರಾಗಿಯೂ ಪ್ರಸಿದ್ದರು. ಪ್ರಾಂಶುಪಾಲರಾಗಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.