ಬೆಳಗಾವಿ : ಸ್ವಾತಂತ್ರ್ಯ ದಿನದಂದೇ ಜನಿಸಿರುವ ಸಂಗೊಳ್ಳಿ ರಾಯಣ್ಣ ಅವರ ನಾಮಫಲಕ ಮತ್ತು ಪ್ರತಿಮೆ ಅನಾವರಣ ಮಾಡುವಂತೆ ಒತ್ತಾಯಿಸಿ ಕನ್ನಡ ಪರ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಬುಧವಾರ ಬೆಳಗಾವಿ ತಾಲೂಕು ಉಚಗಾವಿ ಗ್ರಾಮಕ್ಕೆ ನುಗ್ಗಲು ಪ್ರಯತ್ನಿಸಿದರು. ಆದರೆ, ಪೊಲೀಸರು ಅವರನ್ನು ಗ್ರಾಮದ ಹೊರವಲಯದಲ್ಲೇ ತಡೆದರು. ಇದರಿಂದ ಕನ್ನಡಪರ ಮುಖಂಡರಿಗೆ ಗ್ರಾಮ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಸ್ವಾತಂತ್ರ ದಿನದಂದೇ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಜನ್ಮವಾಗಿದೆ. ಈ ಹಿನ್ನೆಲೆಯಲ್ಲಿ ಬುಧವಾರದಂದು ಕನ್ನಡಿಗರು ಈ ಸ್ವಾತಂತ್ರ್ಯ ಹೋರಾಟಗಾರನ ಪ್ರತಿಮೆಯನ್ನು ಗ್ರಾಮದಲ್ಲಿ ಪ್ರತಿಷ್ಠಾಪನೆ ಮಾಡಬೇಕು ಎಂದು ಒತ್ತಾಯ ಮಾಡಿ, ಇದು ಹಲವು ದಿನಗಳಿಂದ ಬೇಡಿಕೆ ಎಂದು ತಿಳಿಸಿದರು.

ಹೀಗಾಗಿ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಹಾಗೂ ಅವರ ಹೆಸರಿನ ನಾಮಫಲಕ ಅನಾವರಣ ಮಾಡುವಂತೆ ಒತ್ತಾಯಿಸಿ ಕನ್ನಡಿಗರು ಉಚಗಾವಿಗೆ ಪ್ರವೇಶಿಸಲು ಮುಂದಾದರು. ಆದರೆ ಪೊಲೀಸರು ಈ ಬಗ್ಗೆ ಸ್ಥಳೀಯ ಆಡಳಿತ ಮತ್ತು ಜಿಲ್ಲಾಡಳಿತದ ಅನುಮತಿ ಅವಶ್ಯಕತೆ ಇದೆ ಎಂದು ಮನವರಿಕೆ ಮಾಡಿದರು. ಆದರೂ ಗ್ರಾಮ ಪ್ರವೇಶ ಮಾಡಲು ಮುಂದಾದ ಹೋರಾಟಗಾರರನ್ನು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಗ್ರಾಮ ಪ್ರವೇಶ ಮಾಡಲು ಬಿಡಲಿಲ್ಲ. ಸದ್ಯ ಗ್ರಾಮದಲ್ಲಿ ಒಂದು ಕೆ ಎಸ್ ಆರ್ ಪಿ ಹಾಗೂ ಎರಡು ಡಿಆರ್ ತುಕಡಿಗಳು ಸ್ಥಳದಲ್ಲೇ ಬೀಡು ಬಿಟ್ಟಿದ್ದು, ನೂರಕ್ಕೂ ಹೆಚ್ಚು ಪೊಲೀಸರು ಉಚಗಾವಿಯಲ್ಲಿ
ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟಿದ್ದಾರೆ.