ಬೆಂಗಳೂರು:
ಖ್ಯಾತ ನಟ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಕಾಂತಾರ ಸಿನಿಮಾದ ಪ್ರೀಕ್ವೆಲ್ Kantara A Legend Chapter-1 (ಕಾಂತಾರ–2)ನ ಫಸ್ಟ್ ಲುಕ್ ಹಾಗೂ ಟೀಸರ್ ಸೋಮವಾರ ಬಿಡುಗಡೆಯಾಗಿದೆ.
ಕನ್ನಡ, ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಮಲಯಾಳಂ, ಬಂಗಾಳಿ ಭಾಷೆಯಲ್ಲಿ ಬಿಡುಗಡೆಯಾಗಿದೆ. ಹೊಂಬಾಳೆ ಫಿಲ್ಮ್ಸ್ ತನ್ನ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಹಂಚಿಕೊಂಡಿದೆ.
ಯುಟ್ಯೂಬ್‌ನಲ್ಲಿ ಟೀಸರ್ ಬಿಡುಗಡೆಯಾಗಿದ್ದು ಕಾಂತಾರ ಪ್ರೀಕ್ವೆಲ್ ಕತೆ ಕದಂಬರ ಕಾಲಕ್ಕೆ ಕರೆದುಕೊಂಡು ಹೋಗಲಿದೆ ಎಂದು ಮಹತ್ವದ ಅಂಶ ಬಹಿರಂಗವಾಗಿದೆ.
ದೈವಿಕ ಭೂಮಿ ಕಡೆಗೆ ಹೆಜ್ಜೆ ಎಂದು ಕಾಂತಾರ ಪ್ರೀಕ್ವೆಲ್ ಅನ್ನು ಹೊಂಬಾಳೆ ಬಣ್ಣಿಸಿದೆ.
ಮೂಲಗಳ ಪ್ರಕಾರ ʼಕಾಂತಾರʼ ಪ್ರೀಕ್ವೆಲ್ ನಲ್ಲಿ ಪಂಜುರ್ಲಿ ದೈವದ ಮೂಲ ಹಾಗೂ ಹುಟ್ಟಿನ ಕಥೆ ಇರಲಿದೆ ಎನ್ನಲಾಗಿದೆ. ಕ್ರಿ.ಶ. 301-400 ಕಾಲದ ಕಥೆ ಇರಲಿದೆ ಎನ್ನಲಾಗಿದೆ.
ಮುಂದಿನ ವರ್ಷದ ಬೇಸಿಗೆಯಲ್ಲಿ ಸಿನಿಮಾ ತೆರೆ ಮೇಲೆ ಬರುವ ಸಾಧ್ಯತೆಯಿದೆ.
ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ʼಕಾಂತಾರʼ ಸಿನಿಮಾದ ಪ್ರೀಕ್ವೆಲ್ ಅಂದರೆ ಎರಡನೇ ಭಾಗದ ಮುಹೂರ್ತ ಕಾರ್ಯಕ್ರಮ ಕುಂದಾಪುರ ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ಸನ್ನಿಧಿಯಲ್ಲಿ ಸೋಮವಾರ ನೆರವೇರಿತು.
ತುಳುನಾಡಿನ ದೈವ ಹಾಗೂ ಆಚರಣೆ ಸುತ್ತ ಸಾಗಿದ ʼಕಾಂತಾರʼ ಕನ್ನಡದಲ್ಲಿ ಹಿಟ್ ಆಗಿ, ಪ್ರಾದೇಶಿಕ ಭಾಷೆಯಲ್ಲಿ ರಿಮೇಕ್ ಆಗಿ 400 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಅಂತರಾಷ್ಟ್ರೀಯ ಮಟ್ಟದಲ್ಲೂ ಗಮನ ಸೆಳೆದಿತ್ತು.
ಸಿನಿಮಾದ ಚಾಪ್ಟರ್ -1(ಪ್ರೀಕ್ವೆಲ್) ರಿಲೀಸ್ ಬರಲಿದೆ ಎಂದು ರಿಷಬ್ ಶೆಟ್ಟಿ ʼಕಾಂತಾರʼ 100 ಡೇಸ್ ಸಂಭ್ರಮದಲ್ಲಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಸಿನಿಮಾದ ಬಗ್ಗೆ ಕುತೂಹಲ ಹೆಚ್ಚಿದೆ. ಲೋಕೇಷನ್ ಹುಡುಕಾಟ, ಸ್ಕ್ರಿಪ್ಟ್ ಕೆಲಸ ಮುಗಿಸಿದ ಬಳಿಕ ಸಿನಿಮಾ ತಂಡ ಮುಹೂರ್ತವನ್ನು ನೆರವೇರಿಸಿದೆ.
ಮುಹೂರ್ತದ ಜೊತೆಗೆ ಫಸ್ಟ್ ಲುಕ್ ರಿಲೀಸ್ ಮಾಡಿ, ಸಿನಿಮಾದ ಬಗ್ಗೆ ಹೈಪ್ ಹೆಚ್ಚಿಸಿದೆ. ರಿಷಬ್ ಶೆಟ್ಟಿ ಕೈಯಲ್ಲಿ ತ್ರಿಶೂಲ ಇಟ್ಟುಕೊಂಡು, ಉದ್ದ ಗಡ್ಡವನ್ನು ಬಿಟ್ಟಿದ್ದಾರೆ. ಇನ್ನೊಂದು ಕೈಯಲ್ಲಿ ಕೊಡಲಿ ರೀತಿಯ ಆಯುಧವನ್ನು ಇಟ್ಟುಕೊಂಡು ರೌದ್ರ ಅವತಾರವನ್ನು ತಾಳಿದ್ದಾರೆ. ಯುದ್ದದಲ್ಲಿ ಹೋರಾಡುವ ರೀತಿ ತೋರಿಸಲಾಗಿದೆ.
7 ಭಾಷೆಯಲ್ಲೂ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಅಜನೀಶ್ ಅವರ ಮ್ಯೂಸಿಕ್ ಟೀಸರ್ ನಲ್ಲಿ ವೀಕ್ಷಕರನ್ನು ರೋಮಾಂಚನಗೊಳಿಸಿದೆ.
ಆನೆಗುಡ್ಡೆ ಶ್ರೀ ವಿನಾಯಕ ಸನ್ನಿಧಿಯಲ್ಲಿ ಕಾರ್ಯಕ್ರಮ ಮುಹೂರ್ತಕ್ಕೆ ಆಗಮಿಸುವ ಸಂದರ್ಭದಲ್ಲಿ ಮಾತನಾಡಿದ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಅವರು ಕಾಂತಾರ ಚಾಪ್ಟರ್-1 ಆರಂಭಿಸಿದ್ದೇವೆ. ನೀವು ನೋಡಿ ದೊಡ್ಡ ಹಿಟ್ ಮಾಡಿದ್ದೀರಿ. ಇದರ ಸಂಪೂರ್ಣ ಯಶಸ್ಸನ್ನು ಕನ್ನಡಿಗರಿಗೆ ಅರ್ಪಿಸಲು ಇಷ್ಟವಾಗುತ್ತದೆ. ಮುಂದುವರಿದ ಪಯಣದಲ್ಲಿ ಮುನ್ನುಡಿ ಅಂದರೆ ಹಿಂದೆ ಏನು ನಡೆಯಿತು ಎನ್ನುವುದನ್ನು ಹೇಳಲು ಹೊರಟಿದ್ದೇನೆ. ಆನೆಗುಡ್ಡೆ ನಮ್ಮ ಪ್ರೊಡಕ್ಷನ್ ಹೌಸ್ ಗೆ ವಿಜಯ್ ಕಿರಂಗದೂರು ನಂಬಿದ ದೇವರು. ನಮಗೆ ಆನೆಗುಡ್ಡೆ ಖಂಡಿತವಾಗಿ ಅದೃಷ್ಟ ಸ್ಥಳ. ಕಾಂತಾರ ಸಿನಿಮಾದ ಮುಹೂರ್ತ ಇಲ್ಲೇ ಮಾಡಲಾಗಿದ್ದು ಈಗ ಅದೇ ದಾರಿಯಲ್ಲಿ ನಾವು ಹೋಗುತ್ತಿದ್ದೇವೆ. ಬಹುತೇಕ ಡಿಸೆಂಬರ್ ನಲ್ಲಿ ಶೂಟ್ ಆರಂಭಿಸುತ್ತೇವೆ ಎಂದು ಹೇಳಿದರು.
ಮೊದಲ ಅಧ್ಯಾಯದ ಬಗ್ಗೆ ಈಗ ಏನು ಹೇಳಲು ಸಾಧ್ಯವಿಲ್ಲ. ಮಾತಿಗಿಂತ ಕೆಲಸ ಮುಖ್ಯ. ಸಣ್ಣದೊಂದು ಪೋಸ್ಟರ್ ಬಿಟ್ಟಿದ್ದೇವೆ. ಮುಂದೆ ಸಿನಿಮಾ ಮಾತನಾಡಿದರೆ ಚಂದ. ಇಡೀ ಸಿನಿಮಾ ಇಲ್ಲೇ ಸಾಗುವುದರಿಂದ ಸಿನಿಮಾದ ಶೂಟಿಂಗ್ ಕರಾವಳಿಯಲ್ಲಿ ಶೂಟ್ ಆಗಲಿದೆ. ಸದ್ಯಕ್ಕೆ ನಾನೇ ನಾಯಕ. ನಾಯಕಿ ಹಾಗೂ ಇತರ ಪಾತ್ರದ ಹುಡುಕಾಟ ನಡೆಯಬೇಕಾಗಿದೆ. ಕನ್ನಡ ಕಲಾವಿದರಿಗೆ ಮೊದಲ ಆದ್ಯತೆ ಇರಲಿದ್ದು ಸಿನಿಮಾದಲ್ಲಿ ನಟಿಸಲು ಹೊಸ ಕಲಾವಿದರ ಹುಡುಕಾಟ ನಡೆಯುತ್ತಿದ್ದು ಕರಾವಳಿ ಮತ್ತು ಇತರ ಭಾಗದ ಕಲಾವಿದರು ಇರಲಿದ್ದಾರೆ ಎಂದು ತಿಳಿಸಿದರು.