ನವದೆಹಲಿ: ಹಿರಿಯ ವಕೀಲ ಹಾಗೂ ಕೇಂದ್ರದ ಮಾಜಿ ಸಚಿವ ಕಪಿಲ್ ಸಿಬಲ್ ಸುಪ್ರೀಂಕೋರ್ಟ್ ಬಾ‌ರ್ ಅಸೋಶಿಯೇಷನ್‌ನ (SCBA) ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಅಸೋಶಿಯೇಷನ್‌ಗೆ ಗುರುವಾರ ಚುನಾವಣೆ ನಡೆಯಿತು. ಚುನಾವಣೆಯಲ್ಲಿ ಕಪಿಲ್ ಸಿಬಲ್ ಅವರು 1,000 ಮತಗಳನ್ನು ಪಡೆದರೆ, ಅವರ ಪ್ರತಿಸ್ಪರ್ಧಿ ಪ್ರದೀಪ್‌ ಕುಮಾರ್ ರಾಯ್ ಅವರು 650 ಮತಗಳನ್ನು ಪಡೆದು ಸೋಲು ಕಂಡರು.

ಹಾರ್ವರ್ಡ್ ಲಾ ಸ್ಕೂಲ್‌ನ ಪದವೀಧರರಾಗಿರುವ ಸಿಬಲ್ ಅವರು, 1983ರಿಂದ ಸುಪ್ರೀಂಕೋರ್ಟ್ ಹಿರಿಯ ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಮೊದಲು SCBA ಗೆ ಮೂರು ಬಾರಿ ಅಧ್ಯಕ್ಷರಾಗಿದ್ದರು.

ಈ ಬಾ‌ರ್ ಅಸೋಶಿಯೇಷನ್‌ನ ಕಾರ್ಯಕಾರಿ ಮಂಡಳಿಯಲ್ಲಿ ಮಹಿಳೆಯರಿಗೂ ಸ್ಥಾನಗಳನ್ನು ಮೀಸಲಿಡಬೇಕು ಎಂದು ಸುಪ್ರೀಂಕೋರ್ಟ್‌ ಇತ್ತೀಚೆಗೆ ನಿರ್ದೇಶನ ನೀಡಿತ್ತು.

ಯುಪಿಎ ಸರ್ಕಾರದ ಅವಧಿಯಲ್ಲಿ ಕಪಿಲ್ ಸಿಬಲ್ ಅವರು ಕೇಂದ್ರದಲ್ಲಿ ಸಚಿವರಾಗಿದ್ದರು. ಪ್ರಕರಣಗಳಿಗೆ ದೇಶದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಹಿರಿಯ ವಕೀಲರು ಸಹಾ ಅವರಾಗಿದ್ದಾರೆ.

ದೇಶದ ಪ್ರಮುಖ ವಕೀಲರಲ್ಲಿ ಕಪಿಲ್‌ ಸಿಬಲ್‌ ಅವರು ಒಬ್ಬರಾಗಿದ್ದಾರೆ. ಪಂಜಾಬ್‌ನ ಜಲಂಧರ್‌ನವರಾದ ಕಪಿಲ್‌ ಸಿಬಲ್‌ ಹಾರ್ವರ್ಡ್‌ ಲಾ ಸ್ಕೂಲ್‌ನಲ್ಲಿ ಪದವಿ ಪಡೆದು, ವಕೀಲಿಕೆ ಆರಂಭಿಸಿದರು. 1983ರಲ್ಲಿ ಇವರು ಹಿರಿಯ ವಕೀಲ ಎಂಬ ಖ್ಯಾತಿ ಗಳಿಸಿದರು. ಇವರು 1989ರಿಂದ 1990ರವರೆಗೆ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಆಗಿದ್ದರು. ಇವರು 1995ರಿಂದ 2002ರ ಅವಧಿಯಲ್ಲಿ ಮೂರು ಬಾರಿ ಸುಪ್ರೀಂ ಕೋರ್ಟ್‌ ಬಾರ್‌ ಅಸೋಸಿಯೇಷನ್‌ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.

ಕಾಂಗ್ರೆಸ್ ನಾಯಕರೂ ಆಗಿರುವ ಕಪಿಲ್‌ ಸಿಬಲ್‌ ಅವರು ಮನಮೋಹನ್‌ ಸಿಂಗ್‌ ಅವರು ಪ್ರಧಾನಿಯಾಗಿದ್ದಾಗ ಸಚಿವರೂ ಆಗಿದ್ದರು. ರಾಜ್ಯಸಭೆ ಸದಸ್ಯರಾಗಿ, 2004ರಲ್ಲಿ ಚಾಂದಿನಿ ಚೌಕ್‌ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸ್ಮೃತಿ ಇರಾನಿ ಅವರನ್ನು ಸೋಲಿಸಿದ್ದರು. ಇದುವರೆಗೆ ಹಿರಿಯ ವಕೀಲ ಆದಿಶ್‌ ಅಗರ್ವಾಲ ಅವರು ಸುಪ್ರೀಂ ಕೋರ್ಟ್‌ ಬಾರ್‌ ಅಸೋಸಿಯೇಷನ್‌ ಅಧ್ಯಕ್ಷರಾಗಿದ್ದರು. ಈಗ ಕಪಿಲ್‌ ಸಿಬಲ್‌ ಅವರು ಮತ್ತೆ ಗೆಲುವು ಸಾಧಿಸಿದ್ದಾರೆ.