ಕಾಪು : ಕಾಪು ಮಾರಿಯಮ್ಮನ ಸನ್ನಿಧಾನದಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಪೂರ್ವಭಾವಿಯಾಗಿ ನವದುರ್ಗಾ ಲೇಖನವನ್ನು ಬರೆಯುವ ಮಹಾ ಸಂಕಲ್ಪವನ್ನು ಲೋಕಕಲ್ಯಾಣಾರ್ಥವಾಗಿ ಮತ್ತು ಸಾನಿಧ್ಯ ವೃದ್ಧಿಗಾಗಿ ಆಯೋಜಿಸಲಾಗಿದ್ದು ಇದರ ಪ್ರಯುಕ್ತ ಅಕ್ಟೋಬರ್ 20 ರಿಂದ ಮೊದಲ್ಗೊಂಡು 28 ರ ವರೆಗೆ ನವದಿನಗಳ ಪರ್ಯಂತ ಸೂರ್ಯೋದಯದಿಂದ ಸೂರ್ಯಾಸ್ತಮಾನದವರೆಗೆ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯನ್ನೊಳಗೊಂಡ 108 ತಂಡಗಳಿಂದ ಭಜನಾ ಸಂಕೀರ್ತನೆ ನಡೆಯಲಿದೆ ಮತ್ತು ತಾರೀಕು 26-10-2024ರ ಶನಿವಾರ ಸಾಯಂಕಾಲ 6 ಗಂಟೆಯಿಂದ ಆಹ್ವಾನಿತ ತಂಡಗಳ ರಾಜ್ಯಮಟ್ಟದ ಕುಣಿತ ಭಜನಾ ಸ್ಪರ್ಧೆ ನಡೆಯಲಿದೆ, ಅಕ್ಟೋಬರ್ 29ರ ಮಂಗಳವಾರದಂದು ವಾಗೀಶ್ವರಿ ಪೂಜೆಯ ಮೂಲಕ ಪೂಜ್ಯ ಪೇಜಾವರ ಶ್ರೀಗಳು ನವದುರ್ಗಾ ಲೇಖನವನ್ನು ಬರೆದು ಗಣ್ಯಾತಿಗಣ್ಯರ ಸಮ್ಮುಖದಲ್ಲಿ ಧಾರ್ಮಿಕ ಸಭಾಕಾರ್ಯಕ್ರಮವನ್ನು ನಡೆಸಿ ನವದುರ್ಗಾ ಲೇಖನದ ಪುಸ್ತಕವನ್ನು ಭಕ್ತಾದಿಗಳಿಗೆ ನೀಡಲಾಗುವುದು ಎಂದು ದೇವಳದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ಕಾರ್ಯಾಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ, ನವದುರ್ಗಾ ಲೇಖನ ಯಜ್ಞ ಸಮಿತಿಯ ಅಧ್ಯಕ್ಷ ಕೆ. ರಘುಪತಿ ಭಟ್ ಮತ್ತು ಪ್ರಧಾನ ಕಾರ್ಯದರ್ಶಿ ಯೋಗೀಶ್ ವಿ. ಶೆಟ್ಟಿ ತಿಳಿಸಿದ್ದಾರೆ.