
ಕಾಪು (ಪಡುಬಿದ್ರಿ): ತುಳುನಾಡಿನ ಸಪ್ತ ಜಾತ್ರೆಗಳಲ್ಲಿ ಒಂದಾದ ಕಾಪುವಿನ ಮೂರು ಮಾರಿಗುಡಿಗಳಲ್ಲಿ ಏಕಕಾಲದಲ್ಲಿ ನಡೆಯಲಿರುವ ಕಾಲಾವಧಿ ಸುಗ್ಗಿ ಮಾರಿಪೂಜೆ ಜಾತ್ರೆಗೆ ಮಂಗಳವಾರ ಸಂಜೆ ವೈಭವದ ಚಾಲನೆ ದೊರಕಿದೆ.
ಶ್ರೀ ಹಳೇ ಮಾರಿಗುಡಿ ದೇವಸ್ಥಾನ, ಶ್ರೀಹೊಸ ಮಾರಿಗುಡಿ ದೇವಸ್ಥಾನ ಮತ್ತು ಶ್ರೀಮೂರನೇ (ಕಲ್ಯ) ಮಾರಿಗುಡಿ ದೇವಸ್ಥಾನಗಳಿಗೆ ಕ್ರಮವಾಗಿ ಕಾಪು ಶ್ರೀವೆಂಕಟರಮಣ ದೇವಸ್ಥಾನ ಮತ್ತು ಕಾಪು ಶ್ರೀಲಕ್ಷ್ಮಿಜನಾರ್ದನ ದೇವಸ್ಥಾನದಿಂದ ಮೆರವಣಿಗೆ ಮೂಲಕ ತರಲಾದ ಆಭರಣ ಮತ್ತು ಮಾರಿಯಮ್ಮ ದೇವಿಯ ಬಿಂಬವನ್ನು ಗದ್ದಿಗೆಯಲ್ಲಿ ಪ್ರತಿಷ್ಠಾಪಿಸಿದ ಬಳಿಕ ಸುಗ್ಗಿ ಮಾರಿಪೂಜೆಗೆ
ಚಾಲನೆ ನೀಡಲಾಯಿತು.
ಕಾಪು ಸುಗ್ಗಿ ಮಾರಿಪೂಜೆಯ ಪ್ರಯುಕ್ತ ಮೂರು ಮಾರಿಗುಡಿಗಳನ್ನೂ ವಿದ್ಯುತ್ ದೀಪ ಮತ್ತು ಪುಷ್ಪಗಳಿಂದ ಅಲಂಕಾರಗೊಳಿಸಲಾಗಿದ್ದು, ವಿವಿಧ ಬಗೆಯ ಮಾರಾಟ ಮಳಿಗೆಗಳು ಸಾರ್ವಜನಿಕರನ್ನು ಆಕರ್ಷಿಸಿತು.
ಮಾರಿಪೂಜೆ ಪ್ರಯುಕ್ತ ಮೂರು ಮಾರಿಗುಡಿಗಳ ಪರಿಸರದಲ್ಲೂ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.
ಹಿರಿಯ ಅಧಿಕಾರಿಗಳ ಸಹಿತ 100ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿತ್ತು.
ಸುಗ್ಗಿ ಹಾಗೂ ಆಷಾಢ ತಿಂಗಳ ಮಾರಿಪೂಜೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಮಾರಿಗುಡಿಗಳಿಗೆ ಬರುತ್ತಿದ್ದು, ಜಾರ್ದೆ ಮಾರಿಪೂಜೆಯಲ್ಲಿ ಭಕ್ತಾದಿಗಳ ಸಂಖ್ಯೆ ಇಳಿಮುಖವಾಗುತ್ತದೆ.
ವರ್ಷಕ್ಕೆ ಮೂರು ಮಾರಿಪೂಜೆ: ಕಾಪು ಮಾರಿಯಮ್ಮ
ದೇವಿಯ ಸನ್ನಿಧಾನದಲ್ಲಿ ವರ್ಷಕ್ಕೆ ಮೂರು ಬಾರಿ ತುಳುವರ ಆಟಿ, ಜಾರ್ದೆ ಮತ್ತು ಸುಗ್ಗಿ ಮಾರಿಪೂಜೆ ನಡೆಯುತ್ತದೆ. ಇದರಲ್ಲಿ ಸುಗ್ಗಿ ಮಾರಿಪೂಜೆಯ ಸಂದರ್ಭ ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ಮಾತ್ರವಲ್ಲದೇ ಉತ್ತರ ಕನ್ನಡ, ಘಟ್ಟ ಪ್ರದೇಶ ಹಾಗೂ ಕೇರಳ, ಮುಂಬೈ ಸಹಿತ ವಿದೇಶಗಳಿಂದಲೂ ಲಕ್ಷಾಂತರ ಮಂದಿ ಭಕ್ತಾದಿಗಳು ಭಾಗವಹಿಸುತ್ತಾರೆ.
ಸಿಡುಬು, ಸಂತಾನ ಫಲ, ಮುತ್ತೈದೆ ಭಾಗ್ಯಗಳಿಗಾಗಿ ಪ್ರಸಿದ್ಧಿ ಪಡೆದ ಕಾಪುವಿನ ಮೂರೂ ಮಾರಿಗುಡಿಗಳಲ್ಲಿ ಮಾರ್ಚ್ ತಿಂಗಳ ಅಂತ್ಯಕ್ಕೆ ಸುಗ್ಗಿ ಮಾರಿಪೂಜೆ, ಜುಲೈ
ತಿಂಗಳ ಅಂತ್ಯಕ್ಕೆ ಆಷಾಢ ಮಾರಿಪೂಜೆ ಹಾಗೂ ನವಂಬರ್ ತಿಂಗಳಾಂತ್ಯದಲ್ಲಿ ಜಾರ್ದೆ ತಿಂಗಳ ಮಾರಿಪೂಜೆ ನಡೆಯುತ್ತದೆ.