ಬೆಳಗಾವಿ- ಕರ್ನಾಟಕ ಸರ್ಕಾರದ ಅನುದಾನವನ್ನು ಖರ್ಚುಮಾಡಿ, ಕನ್ನಡದ ನೆಲದಲ್ಲಿ ಧರ್ಮವೀರ ಸಂಬಾಜಿ ಮಹಾರಾಜರ ಮೂರ್ತಿ ನಿರ್ಮಿಸಿ,ಕನ್ನಡ ನೆಲದ ಗಣ್ಯರನ್ನು ಕಡೆಗಣಿಸಿ,ಮಹಾರಾಷ್ಟ್ರದಿಂದ ಅತಿಥಿಯನ್ನು ಕರೆಯಿಸಿ ಕನ್ನಡ ನೆಲದಲ್ಲಿ ಅವರಿಂದ ನಾಡವಿರೋಧಿ ಘೋಷಣೆಯನ್ನು ಕೂಗಿಸಿ, ಕನ್ನಡಿಗರನ್ನು ಅವಮಾನಿಸಿದ ಕಾರ್ಯಕ್ರಮದ ಆಯೋಜಕ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ವಿರುದ್ಧ ನಾಡದ್ರೋಹದ ದೂರು ದಾಖಲಿಸಲು ಕರ್ನಾಟಕ ರಕ್ಷಣಾ ವೇದಿಕೆ ನಿರ್ಧರಿಸಿದೆ ಎಂದು ಬೆಳಗಾವಿ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ತಿಳಿಸಿದ್ದಾರೆ.
ಬೆಳಗಾವಿಯ ಅನಗೋಳ ಪ್ರದೇಶದಲ್ಲಿ ಬೆಳಗಾವಿ ಮಹಾನಗರ ಪಾಲಿಕೆಯ ಅನುದಾನದಿಂದ ಧರ್ಮವೀರ ಸಂಭಾಜಿ ಮಹಾರಾಜರ ಮೂರ್ತಿಯನ್ನು ಅನಾವರಣ ಮಾಡಲು ಛತ್ರಪತಿ ಶಿವಾಜಿ ಮಹಾರಾಜರ ವಂಶಜ ಶಿವೇಂದ್ರರಾಜೆ ಭೋಸಲೇ
ಅವರನ್ನು ಆಮಂತ್ರಿಸಿದ್ದು ಅವರು ಕನ್ನಡದ ನೆಲದಲ್ಲಿ ಜೈ ಮಹಾರಾಷ್ಟ್ರ ಎಂದು ಘೋಷಣೆ ಕೂಗುವ ಮೂಲಕ ಕನ್ನಡ ನಾಡಿಗೆ ದ್ರೋಹ ಬಗೆದಿದ್ದು ಈ ಕಾರ್ಯಕ್ರಮವನ್ನು ಆಯೋಜಿಸಿದ ಶಾಸಕ ಅಭಯ ಪಾಟೀಲ ಕನ್ನಡದ ನೆಲಕ್ಕೆ ಅಪಮಾನ ಮಾಡಿದ್ದಾರೆ. ಜಿಲ್ಲಾಡಳಿತದಿಂದ ಅಧಿಕೃತವಾಗಿ ಅನುಮತಿ ಪಡೆಯದೇ ಕಾರ್ಯಕ್ರಮ ನಡೆಸಿ ಈ ಕಾರ್ಯಕ್ರಮದಲ್ಲೇ ಪುಂಡಾಟಿಕೆ ಪ್ರದರ್ಶಿಸಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ದೀಪಕ ಗುಡಗನಟ್ಟಿ ಆಕ್ರೋಶವ್ಯಕ್ತಪಡಿಸಿದ್ದಾರೆ.
ಧರ್ಮವೀರ ಸಂಬಾಜಿ ಮಹಾರಾಜರ ಮೂರ್ತಿ ಉದ್ಘಾಟನೆಯ ಪರವಾಗಿ ಬಿಜೆಪಿ ಮುಖಂಡರಾದ ಸಿಟಿ ರವಿ ಮತ್ತು ಚಂದ್ರಕಾಂತ ಬೆಲ್ಲದ ಹೇಳಿಕೆ ಕೊಟ್ಟಿದ್ದರು,ಈಗ ಕನ್ನಡದ ನೆಲದಲ್ಲೇ ಕನ್ನಡಿಗರನ್ನು ಅವಮಾನಿಸಿದ್ದು ಈ ಕುರಿತು ಸಿಟಿ ರವಿ ಮತ್ತು ಚಂದ್ರಕಾಂತ ಬೆಲ್ಲದ ನಿಲುವು ಏನು ಎಂಬುದನ್ನು ಸ್ಪಷ್ಟಪಡಿಸಲಿ ಇಲ್ಲವಾದಲ್ಲಿ ನಾಡದ್ರೋಹಿ ಕೃತ್ಯವೆಸಗಲು ಅವಕಾಶ ಮಾಡಿಕೊಟ್ಟಿರುವ ಶಾಸಕ ಅಭಯ ಪಾಟೀಲರನ್ನು ಬಿಜೆಪಿಯಿಂದ ಉಚ್ಛಾಟನೆ ಮಾಡಲಿ ಎಂದು ದೀಪಕ ಗುಡಗನಟ್ಟಿ ಒತ್ತಾಯಿಸಿದ್ದಾರೆ.
ಬೆಳಗಾವಿ ಮಹಾನಗರ ಪಾಲಿಕೆ ಕೇವಲ ಧರ್ಮವೀರ ಸಂಬಾಜಿ ಮಹಾರಾಜರ ಮತ್ತು ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಗಳ ನಿರ್ಮಾಣಕ್ಕೆ ಅನುದಾನ ನೀಡುತ್ತಿದೆ.ಈ ಇಬ್ಬರು ಮಹಾಪುರುಷರ ವೃತ್ತಗಳ ಅಭಿವೃದ್ಧಿಗೆ ಒತ್ತು ನೀಡಿ ಕೋಟ್ಯಾಂತರ ರೂ ಅನುದಾನ ನೀಡುತ್ತಿದ್ದು ಕನ್ನಡ ನಾಡಿನ ಮಹಾಪುರುಷರಾದ ವೀರರಾಣಿ ಕಿತ್ತೂರು ಚನ್ನಮ್ಮಾಜಿ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ , ಮತ್ತು ಜಗಜ್ಯೋತಿ ಬಸವೇಶ್ವರ ವೃತ್ತಗಳನ್ನು ಅಭಿವೃದ್ಧಿಪಡಿಸದೇ ಕಡೆಗಣಿಸಿರುವ ಬೆಳಗಾವಿ ಮಹಾನಗರ ಪಾಲಿಕೆಯನ್ನು ಸರ್ಕಾರ ತಕ್ಷಣ ಸೂಪರ್ ಸೀಡ್ ಮಾಡಬೇಕು ಎಂದು ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಒತ್ತಾಯಿಸಿದ್ದಾರೆ.
ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಬುಡಾದಿಂದ ಕೋಟ್ಯಾಂತರ ರೂ ಖರ್ಚು ಮಾಡಿ ಶಿವಚರಿತ್ರೆ ಶಿವ ಸೃಷ್ಟಿಯನ್ನು ನಿರ್ಮಿಸಲಾಗಿತ್ತು ಈಗ ಅದರ ಪರಿಸ್ಥಿತಿ ಏನಾಗಿದೆ ಎನ್ನುವದನ್ನು ಬೆಳಗಾವಿ ಜಿಲ್ಲಾಡಳಿತ ತನಿಖೆ ಮಾಡಬೇಕು,ರಾಜಕೀಯ ಲಾಭಕ್ಕಾಗಿ ನಮ್ಮ ಅನುದಾನವನ್ನು ಖರ್ಚು ಮಾಡಿಸಿ ನಮ್ಮ ನೆಲಕ್ಕೆ ಅವಮಾನ ಮಾಡಿದ ಶಾಸಕ ಅಭಯ ಪಾಟೀಲ ವಿರುದ್ಧ ಹಾಗು ನಮ್ಮ ನೆಲದಲ್ಲಿ ನಾವು ನಿರ್ಮಿಸಿದ ಮೂರ್ತಿಯನ್ನು ಉದ್ಘಾಟಿಸಿ ನಮ್ಮ ವಿರುದ್ಧವೇ ಘೋಷಣೆ ಕೂಗಿದವರ ವಿರುದ್ಧ ಹಾಗೂ ಅವರನ್ನು ಆಹ್ವಾನಿಸಿದ ಇನ್ನಿತರ ವಿರುದ್ಧ ಕರವೇ ಬೆಳಗಾವಿಯ ಟಿಳಕವಾಡಿ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಲಿದೆ ಎಂದು ದೀಪಕ ಗುಡಗನಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.