
ಕಾರ್ಕಳ : ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶದಲ್ಲಿ ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರ ಪುತ್ರಿ ಅಮೋಘ ಸಾಧನೆ ಮಾಡಿದ್ದಾರೆ. ಈ ಬಗ್ಗೆ ಸುನಿಲ್ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು ವೈರಲ್ ಆಗಿದೆ. ಶಾಸಕ ಸುನಿಲ್ ಕುಮಾರ್ ಅವರು ಜನರ ನಡುವೆ ಇದ್ದು ದಿನದ 24 ಗಂಟೆ ಬ್ಯುಸಿ ಆಗಿದ್ದಾರೆ. ಈ ನಡುವೆ ಅವರು ಪುತ್ರಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಈಗ ಸಾಧನೆ ಮಾಡುವ ಮೂಲಕ ತಂದೆಗೆ ತಕ್ಕ ಮಗಳು ಎನಿಸಿಕೊಂಡಿದ್ದಾರೆ.
ಮಗಳ ಸಾಧನೆಗೆ ಶಾಸಕ ಸುನಿಲ್ ಕುಮಾರ್ ಅವರು ಹೆಮ್ಮೆಯ ನುಡಿ ಬರೆದುಕೊಂಡಿದ್ದಾರೆ.
ಬರೆದದ್ದು ಏನು ?
ಮಗಳೇ ಓದಿಯಾಯ್ತಾ ಎಂದು ಪ್ರಶ್ನಿಸಿದಾಗಲೆಲ್ಲ ” ಒಳ್ಳೆ ಮಾರ್ಕ್ಸ್ ತೆಗೆದರೆ ಆಯ್ತಲ್ವಾ ಈಗ ಕಿರಿಕಿರಿ ಮಾಡಬೇಡಿ” ಎಂದು ಹುಸಿಕೋಪ ಪ್ರದರ್ಶಿಸುತ್ತಿದ್ದ ಮುದ್ದಿನ ಮಗಳು ಪ್ರೇರಣಾ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಶೇ.97 ರಷ್ಟು ಅಂಕ ಪಡೆದು ಉತ್ತೀರ್ಣಳಾಗಿದ್ದಾಳೆ. ಪರೀಕ್ಷೆಯೆಂದರೆ ಮಕ್ಕಳಿಗಿಂತ ಹೆತ್ತವರಿಗೆ ಕಾಳಜಿ ಹೆಚ್ಚು. ಆದರೆ ನಾವೆಂದೂ ಅಂಕ ಗಳಿಕೆಯ ಒತ್ತಡವನ್ನು ಅವಳ ಮೇಲೆ ಹೇರಿರಲಿಲ್ಲ. ಆದರೆ ತನ್ನ ಜವಾಬ್ದಾರಿಯನ್ನು ಅರಿತು ಪರಿಶ್ರಮದಿಂದ ಓದಿದಳು. ಜ್ಞಾನಸುಧಾದ ಉಪನ್ಯಾಸಕರ ತಂಡ ಸೂಕ್ತ ಮಾರ್ಗದರ್ಶನ ಮಾಡಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳಲೇಬೇಕು.
ಒಬ್ಬ ವಿಧೇಯ ವಿದ್ಯಾರ್ಥಿನಿಯಾಗಿ ಓದು ಹಾಗೂ ಮುಂದಿನ ಗುರಿಯೆಡೆಗಿನ ನಿನ್ನ ಸ್ಪಷ್ಟತೆಯ ಬಗ್ಗೆ ನಾನು ಹೆಮ್ಮೆ ಪಡುತ್ತೇನೆ. ವಿದ್ಯಾರ್ಥಿ ಜೀವನದಲ್ಲಿ ಸುಖಕ್ಕಿಂತ ಪರಿಶ್ರಮದ ಹಾದಿ ಮುಖ್ಯ ಎಂಬ ನಮ್ಮ ಕಿವಿ ಮಾತನ್ನು ಸದಾ ಮನಸಿನಲ್ಲಿಟ್ಟುಕೊಂಡಿದ್ದ ಮಗಳು ಆರು ಬಾರಿ ಪೂರ್ವಸಿದ್ಧತಾ ಪರೀಕ್ಷೆ ಬರೆದು ನಿರಂತರ ಶ್ರಮ ವಹಿಸಿದ್ದಳು. ತನ್ನ ನಿರೀಕ್ಷೆಯಷ್ಟು ಅಂಕ ಬಂದಿಲ್ಲ ಎಂಬ ಬೇಸರ ಅವಳಿಗಿದ್ದರೂ ತಂದೆಯಾಗಿ ಅವಳ ಈ ಸಾಧನೆ ಸಂತೋಷ ನೀಡಿದೆ. ಮತ್ತೊಮ್ಮೆ ಅಭಿನಂದನೆಗಳು ಮಗನೆ…
ಪುಸ್ತಕದ ಪಾಠದಷ್ಟೆ ಜೀವನದ ಪಾಠವೂ ಮುಖ್ಯ. ಆ ಸವಾಲನ್ನು ಅರ್ಥ ಮಾಡಿಕೊಳ್ಳುವುದೇ ನಿಜವಾದ ಭವಿಷ್ಯ.