ಬೆಂಗಳೂರು: ಕಾರ್ಕಳ ತಾಲ್ಲೂಕಿನ ಉಮಿಕಲ್ ಬೆಟ್ಟದ ಮೇಲೆ ಪರಶುರಾಮನ ಕಂಚಿನ ಪ್ರತಿಮೆ ನಿರ್ಮಾಣ ಕಾಮಗಾರಿಯಲ್ಲಿ ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಿ ಶಿಲ್ಪ ಕಲಾವಿದ ಹಾಗೂ ಕ್ರಿಷ್ ಆರ್ಟ್ ವರ್ಲ್ಡ್ ಮುಖ್ಯಸ್ಥ ಕೃಷ್ಣ ನಾಯಕ್ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣದ ವಿಚಾರಣೆಯನ್ನು ಪೂರೈಸಿದ ಹೈಕೋರ್ಟ್, ಈ ಸಂಬಂಧದ ಆದೇಶ ಕಾಯ್ದಿರಿಸಿದೆ.
ನನ್ನ ವಿರುದ್ಧ ಕಾರ್ಕಳ ಟೌನ್ ಪೊಲೀಸರು ದಾಖಲಿಸಿರುವ ಎಫ್‌ಐಆರ್ ಹಾಗೂ ಕಾರ್ಕಳ ಜೆಎಂಎಫ್‌ಸಿ ನ್ಯಾಯಾಲಯದಲ್ಲಿನ ನ್ಯಾಯಿಕ ವಿಚಾರಣೆ ರದ್ದುಪಡಿಸಬೇಕು ಎಂದು ಕೋರಿ ಬೆಂಗಳೂರಿನ ವಿಶ್ವೇಶ್ವರಯ್ಯ ಲೇ ಔಟ್ ನಿವಾಸಿಯಾದ ಕೃಷ್ಣ ನಾಯಕ್ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ಪೂರ್ಣಗೊಳಿಸಿದೆ.
ಅರ್ಜಿದಾರರ ವಿರುದ್ಧದ ಪ್ರಕರಣಕ್ಕೆ ಈ ಮೊದಲು ನೀಡಿದ್ದ ಮಧ್ಯಂತರ ತಡೆ ಆದೇಶವನ್ನು ವಿಸ್ತರಿಸಿತು. ಅರ್ಜಿದಾರರ ಪರ ಹಿರಿಯ ವಕೀಲ ಎಂ.ಅರುಣ್ ಶ್ಯಾಮ್, ರಾಜ್ಯ ಪ್ರಾಸಿಕ್ಯೂಷನ್ ಪರ ಬಿ.ಎನ್.ಜಗದೀಶ್, ದೂರುದಾರರ ಪರ ವಿ.ಕೆ.ಶ್ರೀಕಾಂತ್ ಹಾಗೂ ನಿರ್ಮಿತಿ ಕೇಂದ್ರದ ಪರ ದಿನೇಶ್ ಹೆಗಡೆ ಉಳ್ಳಿಪಾಡಿ ವಾದ ಮಂಡಿಸಿದರು.