ನವದೆಹಲಿ: ಕರ್ನಾಟಕ ಮೂಲದ ಕೆನಡಾ ಸಂಸದ ಚಂದ್ರ ಆರ್ಯ ಅವರು ಕೆನಡಾದ ಮುಂದಿನ ಪ್ರಧಾನಿಯಾಗುವ ನಿಟ್ಟಿನಲ್ಲಿ ಅಧಿಕೃತವಾಗಿ ರೇಸ್ ಪ್ರವೇಶಿಸಿದ್ದಾರೆ. ನೇಪಿಯನ್ ಪ್ರತಿನಿಧಿಸುವ ಲಿಬರಲ್ ಸಂಸದ, ಚಂದ್ರ ಆರ್ಯ ಅವರು ಕೆನಡಾವನ್ನು “ಸಾರ್ವಭೌಮ ಗಣರಾಜ್ಯ” ಮಾಡಲು, ನಿವೃತ್ತಿ ವಯಸ್ಸನ್ನು ಹೆಚ್ಚಿಸುವ, ಪೌರತ್ವ ಆಧಾರಿತ ತೆರಿಗೆ ವ್ಯವಸ್ಥೆಯನ್ನು ಜಾರಿಗೆ ತರುವ ಮತ್ತು ಪ್ಯಾಲೆಸ್ಟೈನ್ ರಾಜ್ಯವನ್ನು ಅಧಿಕೃತವಾಗಿ ಗುರುತಿಸುವ ಯೋಜನೆಗಳನ್ನು ಬಗ್ಗೆ ತಿಳಿಸಿದ್ದಾರೆ.

ಆರ್ಯ ಅವರು X (ಹಿಂದೆ ಟ್ವಿಟರ್) ನಲ್ಲಿ, “ನಮ್ಮ ರಾಷ್ಟ್ರವನ್ನು ಪುನರ್ನಿರ್ಮಿಸಲು ಮತ್ತು ಭವಿಷ್ಯದ ಪೀಳಿಗೆಗೆ ಸಮೃದ್ಧಿಯನ್ನು ಭದ್ರಪಡಿಸಲು ಸಣ್ಣ, ಹೆಚ್ಚು ಪರಿಣಾಮಕಾರಿ ಸರ್ಕಾರವನ್ನು ಮುನ್ನಡೆಸಲು ನಾನು ಕೆನಡಾದ ಮುಂದಿನ ಪ್ರಧಾನಿಯಾಗಲು ಸ್ಪರ್ಧೆಯಲ್ಲಿದ್ದೇನೆ ಎಂದು ಬರೆದಿದ್ದಾರೆ.

 

ಉತ್ತರಾಧಿಕಾರಿಯನ್ನು ಆಯ್ಕೆ ಮಾಡಿದ ನಂತರ ಲಿಬರಲ್ ಪಕ್ಷದ ನಾಯಕತ್ವದಿಂದ ಕೆಳಗಿಳಿಯುವ ನಿರ್ಧಾರವನ್ನು ಪ್ರಸ್ತುತ ಪ್ರಧಾನಿ ಜಸ್ಟಿನ್ ಟ್ರುಡೊ ಬಹಿರಂಗಪಡಿಸಿದ ದಿನಗಳ ನಂತರ ಚಂದ್ರ ಆರ್ಯ ಅವರ ಈ ಪ್ರಕಟಣೆ ಬಂದಿದೆ.

ಕರ್ನಾಟಕದಿಂದ ಕೆನಡಾ: ಚಂದ್ರ ಆರ್ಯರ ಪಯಣ
ಚಂದ್ರ ಆರ್ಯ ಅವರು ಕರ್ನಾಟಕದ ತುಮಕೂರು ಜಿಲ್ಲೆಯ ಸಿರಾ ತಾಲೂಕಿನ ದ್ವಾರಲು ಗ್ರಾಮದವರು. ಧಾರವಾಡದ ಕೌಸಾಲಿ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್‌ನಲ್ಲಿ ಎಂಬಿಎ ಪದವಿ ಪಡೆದಿದ್ದಾರೆ.
ಅವರ ವೆಬ್‌ಸೈಟ್ ಪ್ರಕಾರ, ಅವರು 20 ವರ್ಷಗಳ ಹಿಂದೆ ಕೆನಡಾದ ಒಟ್ಟಾವಾಕ್ಕೆ ತಮ್ಮ ಪತ್ನಿ ಮತ್ತು ಮಗನೊಂದಿಗೆ ತೆರಳಿದರು. ಅವರು ಸಾಧಾರಣ ಎರಡು ಮಲಗುವ ಕೋಣೆ ಅಪಾರ್ಟ್ಮೆಂಟಿನಲ್ಲಿ ಜೀವನ ಪ್ರಾರಂಭಿಸಿದರು.

ಚಂದ್ರ ಆರ್ಯ ಮೊದಲು ಇಂಜಿನಿಯರ್ ಆಗಿ ಕೆಲಸ ಮಾಡಿದರು, ನಂತರ ಸಣ್ಣ ಉದ್ಯಮಕ್ಕೆ ಧನಸಹಾಯ ನೀಡುವ ಹಣಕಾಸು ಸಂಸ್ಥೆಯಲ್ಲಿ ಮತ್ತು ಉತ್ಪಾದನಾ ಕಂಪನಿಯನ್ನು ಹೊಂದಿರುವ ಉದ್ಯಮಿಯಾದರು. ಹಲವಾರು ದೇಶಗಳಲ್ಲಿ ಕೈಗಾರಿಕೀಕರಣವನ್ನು ಉತ್ತೇಜಿಸಿದರು. ಕೆನಡಾದಲ್ಲಿ, ವೆಬ್‌ಸೈಟ್‌ನಲ್ಲಿನ ಮಾಹಿತಿಯ ಪ್ರಕಾರ ಬ್ಯಾಂಕ್‌ನಲ್ಲಿ ಹೂಡಿಕೆ ಸಲಹೆಗಾರರಾಗಿಯೂ ಕಾರ್ಯನಿರ್ವಹಿಸಿದರು.
ರಾಜಕೀಯಕ್ಕೆ ಪ್ರವೇಶಿಸುವ ಮೊದಲು, ಆರ್ಯ ಸಣ್ಣ ಹೈಟೆಕ್ ರಕ್ಷಣಾ ತಂತ್ರಜ್ಞಾನ ಕಂಪನಿಯಲ್ಲಿ ಕಾರ್ಯನಿರ್ವಾಹಕರಾಗಿ ಆರು ವರ್ಷಗಳ ಕೆಲಸ ಮಾಡಿದರು.

ನಂತರ ಆರ್ಯ ಅವರು ರಾಜಕೀಯಕ್ಕೆ ಪ್ರವೇಶಿಸಿದರು ಮತ್ತು 2015 ರಲ್ಲಿ ಹೌಸ್ ಆಫ್ ಕಾಮನ್ಸ್‌ಗೆ ತಮ್ಮ ಮೊದಲ ಚುನಾವಣೆಯಲ್ಲಿ ಗೆದ್ದರು. ಅವರು 2019 ರಲ್ಲಿ ಮರು ಆಯ್ಕೆಯಾದರು.
ಕರ್ನಾಟಕ ಮೂಲದ ಸಂಸದರಾದ ಆರ್ಯ ಅವರು 2022 ರಲ್ಲಿ ಹೌಸ್ ಆಫ್ ಕಾಮನ್ಸ್‌ನಲ್ಲಿ ಕನ್ನಡದಲ್ಲಿ ಮಾತನಾಡುವ ಮೂಲಕ ಗಮನ ಸೆಳೆದರು. ಆಗ ತಮ್ಮ ಭಾಷಣದ ವೀಡಿಯೊವನ್ನು ಹಂಚಿಕೊಂಡ ಅವರು, “ನಾನು ಕೆನಡಾದ ಸಂಸತ್ತಿನಲ್ಲಿ ನನ್ನ ಮಾತೃಭಾಷೆ (ಮೊದಲ ಭಾಷೆ) ಕನ್ನಡದಲ್ಲಿ ಮಾತನಾಡಿದ್ದೇನೆ” ಎಂದು ಬರೆದರು ಮತ್ತು ಭಾರತದ ಹೊರಗಿನ ವಿಶ್ವದ ಯಾವುದೇ ಸಂಸತ್ತಿನಲ್ಲಿ ಕನ್ನಡವನ್ನು ಮಾತನಾಡುವುದು ಇದೇ ಮೊದಲು ಎಂದು ಹೇಳಿದ್ದರು.
ನವೆಂಬರ್ 2024 ರಲ್ಲಿ, ಚಂದ್ರ ಆರ್ಯ ಅವರು ಹಿಂದೂ ಪರಂಪರೆಯ ತಿಂಗಳ ಸ್ಮರಣಾರ್ಥ ಕೆನಡಾದ ಸಂಸತ್ತಿನ ಹೊರಗೆ ‘ಓಂ’ ಚಿಹ್ನೆಯನ್ನು ಹೊಂದಿರುವ ಕೇಸರಿ ತ್ರಿಕೋನ ಧ್ವಜವನ್ನು ಹಾರಿಸಿದರು. ಹಿಂದೂ ಕೆನಡಿಯನ್ನರು ರಾಜಕೀಯದಲ್ಲಿ ಹೆಚ್ಚು ಪಾಲ್ಗೊಳ್ಳಬೇಕು ಎಂದು ಒತ್ತಾಯಿಸಿದರು. ಆರ್ಯ ಅವರು ಕೆನಡಾದ ಹಿಂದೂಗಳ ಧ್ವನಿಯಾಗಿದ್ದಾರೆ.