ಬೆಂಗಳೂರು: ರಾಜ್ಯದಲ್ಲಿ ಮೊದಲ ಹಂತದ ಲೋಕಸಭೆ ಚುನಾವಣೆ ನಡೆಯಲಿರುವ 14 ಕ್ಷೇತ್ರಗಳ ಪೈಕಿ 13 ಕ್ಷೇತ್ರಗಳ ನಾಮಪತ್ರ ಪರಿಶೀಲನೆ ಕಾರ್ಯ ಪೂರ್ಣಗೊಂಡಿದ್ದು, ಇದರಲ್ಲಿ 60 ನಾಮಪತ್ರಗಳು ತಿರಸ್ಕೃತಗೊಂಡಿವೆ.

14 ಕ್ಷೇತ್ರಗಳಲ್ಲಿ ಒಟ್ಟು 358 ಅಭ್ಯರ್ಥಿಗಳಿಂದ 492 ನಾಮಪತ್ರ ಸಲ್ಲಿಕೆಯಾಗಿದ್ದು, 13 ಕ್ಷೇತ್ರಗಳ ನಾಮಪತ್ರ ಪರಿಶೀಲನೆ ಕಾರ್ಯ ಪೂರ್ಣಗೊಂಡಿದೆ. ಅವುಗಳಲ್ಲಿ 276 ಅಭ್ಯರ್ಥಿಗಳ 384 ನಾಮಪತ್ರ ಕ್ರಮಬದ್ಧವಾಗಿವೆ ಎಂದು ಮುಖ್ಯ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ. ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಕೆ ಅವಧಿ ಗುರುವಾರ ಮುಕ್ತಾಯವಾಗಿತ್ತು. ಸೋಮವಾರ ನಾಮಪತ್ರ ಹಿಂಪಡೆದುಕೊಳ್ಳಲು ಕೊನೆಯ ದಿನವಾಗಿದೆ. ಬೆಂಗಳೂರು ದಕ್ಷಿಣ ಕ್ಷೇತ್ರದ ನಾಮಪತ್ರಗಳ ಪರಿಶೀಲನೆ ಕಾರ್ಯ ತಡರಾತ್ರಿಯವರೆಗೆ ನಡೆದಿರುವ ಹಿನ್ನೆಲೆಯಲ್ಲಿ ಆ ಒಂದು ಕ್ಷೇತ್ರದ ಅಂತಿಮ ಉಮೇದುವಾರಿಕೆಯ ಸಂಖ್ಯೆ ತಿಳಿಯಬೇಕಿದೆ.