Join The Telegram | Join The WhatsApp |
ಬೆಳಗಾವಿ :
ಇದೇ ಶನಿವಾರ ಡಿಸೆಂಬರ್ 3 ರಂದು ಬೆಳಗಾವಿಗೆ ಆಗಮಿಸಲಿರುವ ಮಹಾರಾಷ್ಟ್ರದ ಗಡಿ ಉಸ್ತುವಾರಿ ಸಚಿವರಾದ ಚಂದ್ರಕಾಂತ ಪಾಟೀಲ ಮತ್ತು ಶಂಭುರಾಜೆ ದೇಸಾಯಿ ಅವರು ಬೆಳಗಾವಿ ಹಾಗೂ ಸುತ್ತಮುತ್ತಲಿನ 20ಕ್ಕೂ ಹೆಚ್ಚು ಪ್ರದೇಶಗಳಿಗೆ ಭೆಟ್ಟಿ ನೀಡಲಿದ್ದಾರೆ !
ಶಹಾಪುರದ ಶಿವಾಜಿ ಉದ್ಯಾನದ ಶಿವಾಜಿ ಮಹಾರಾಜರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಕಾರ್ಯಕ್ರಮ ಶನಿವಾರ ಮುಂಜಾನೆ 11ಗಂಟೆಗೆ ನಿಗದಿಯಾಗಿದ್ದು 11.25 ಕ್ಕೆ ಹಿಂಡಲಗಾದ ಹುತಾತ್ಮರ ಸ್ಮಾರಕಕ್ಕೆ ಭೆಟ್ಟಿ ನೀಡುತ್ತಾರೆ.
ಸಂಜೆ 6 ರವರೆಗೂ 20 ಕ್ಕೂ ಅಧಿಕ ಸ್ಥಳಗಳಿಗೆ ಭೆಟ್ಟಿ ನೀಡಿ ಎಮ್.ಇ.ಎಸ್.ಮತ್ತು ಶಿವಸೇನೆಯ ನೂರಾರು ಪ್ರಮುಖರು ಮತ್ತು ಸಾವಿರಾರು ಕಾರ್ಯಕರ್ತರ ಜೊತೆಗೆ ಚರ್ಚಿಸಲಿದ್ದಾರೆ.
ಈ ಸಚಿವದ್ವಯರು ಹೀಗೆ ಬೆಳಗಾವಿಯಲ್ಲಿ ರಾಜಾರೋಷವಾಗಿ ತಿರುಗಾಡಿ ನಾಡದ್ರೋಹಿ ಸಂಘಟನೆಗಳ ಜೊತೆ ಚರ್ಚಿಸಲು ನಮ್ಮ ಘನಸರ್ಕಾರ ಅವಕಾಶ ನೀಡುತ್ತಿದೆ!!
ಮಹಾರಾಷ್ಟ್ರ ಸರಕಾರವೇ ಅಧಿಕೃತವಾಗಿ ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸಚಿವದ್ವಯರ ಪ್ರವಾಸ ಪಟ್ಟಿಯನ್ನು ಕಳಿಸಿದೆ. ಈ ಸಚಿವರಿಗೆ “ವೈ”ದರ್ಜೆಯ ಭದ್ರತೆಯನ್ನು ಒದಗಿಸಲಾಗುತ್ತಿದೆ.
ಮಹಾರಾಷ್ಟ್ರದ ಸಚಿವದ್ವಯರು ಬೆಳಗಾವಿಗೆ ಏಕೆ ಭೆಟ್ಟಿ ನೀಡುತ್ತಿದ್ದಾರೆ? ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ! ಮಹಾರಾಷ್ಟ್ರದ ಸಚಿವರು ಬೆಳಗಾವಿಗೆ ಪ್ರವೇಶಿಸದಂತೆ ನಿರ್ಬಂಧ ವಿಧಿಸಬೇಕೆಂದು ಬೆಳಗಾವಿ ಕನ್ನಡಪರ ಸಂಘಟನೆಗಳು ಈಗಾಗಲೇ ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಶಿವಸೇನೆ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ನಂತರ ಕರ್ನಾಟಕದ ಗಡಿಯಲ್ಲಿ ಮಹಾರಾಷ್ಟ್ರ ಪರ ಚಟುವಟಿಕೆಗಳು ತೀವ್ರಗೊಂಡಿವೆ. ಈ ಬಗ್ಗೆ ಬೊಮ್ಮಾಯಿ ಸರಕಾರದ ಗಮನ ಸೆಳೆಯುತ್ತಲೇ ಬರಲಾಗಿದೆ. ಈ ಬಗ್ಗೆ ಗಡಿ ಭಾಗದ ಜನಪ್ರತಿನಿಧಿಗಳೂ ಸಹ ಮೌನ ವಹಿಸಿರುವದು ಕನ್ನಡಿಗರಿಗೆ ಆತಂಕ, ಕಲವಳ ಉಂಟು ಮಾಡಿದೆ. ಇದೇ ಡಿಸೆಂಬರ್ 19 ರಿಂದ ಬೆಳಗಾವಿಯಲ್ಲಿ ವಿಧಾನ ಮಂಡಲ ಅಧಿವೇಶನ ನಡೆಯಲಿದ್ದು ರಾಜ್ಯ ಸರಕಾರ ಹೆಚ್ಚಿನ ಮುಂಜಾಗ್ರತೆ ಕ್ರಮಗಳನ್ನು ಕೈಕೊಳ್ಳಬೇಕಾಗಿದೆ ಎಂದು ಇಲ್ಲಿನ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಒತ್ತಾಯಿಸಿದ್ದಾರೆ.
Join The Telegram | Join The WhatsApp |