ಬೆಂಗಳೂರು: ತಿಂಗಳಾಂತ್ಯಕ್ಕೆ ಕೇರಳಕ್ಕೆ ಮುಂಗಾರು ಆಗಮನವಾಗಲಿದ್ದು, ಜೂನ್ ಮೊದಲ ವಾರದಲ್ಲಿ ರಾಜ್ಯ ಪ್ರವೇಶಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ನೈಋುತ್ಯ ಮಾನ್ಸೂನ್ ಕುರಿತು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಸೋಮವಾರ ಅಂತಿಮ ವರದಿ ಬಿಡುಗಡೆ ಮಾಡಿದೆ. ಜೂನ್ನಿಂದ ಸೆಪ್ಟೆಂಬರ್ವರೆಗೆ ವಾಡಿಕೆಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆಯಿದ್ದು, ಕರ್ನಾಟಕದಲ್ಲಿ ವಾಡಿಕೆಗಿಂತ ತುಸು ಹೆಚ್ಚು ಮಳೆ ಸುರಿಯಲಿದೆ ಎಂದು ಅದು ತಿಳಿಸಿದೆ.
ಜೂನ್ನಲ್ಲಿ ದೇಶಾದ್ಯಂತ ವಾಡಿಕೆಯಷ್ಟೇ ಮಳೆ ಬೀಳಲಿದೆ. ಜುಲೈನಲ್ಲಿ ಬೀಳುವ ಮಳೆ ವರದಿಯನ್ನು ಜೂನ್ ಕೊನೆ ವಾರದಲ್ಲಿ ಐಎಂಡಿ ಬಿಡುಗಡೆ ಮಾಡಲಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಮೇ 19ರಿಂದಲೇ ಮಾನ್ಸೂನ್ ಆರಂಭವಾಗಿದ್ದು, ಸದ್ಯ ಬಂಗಾಳ ಕೊಲ್ಲಿಯ ಮಧ್ಯ, ಈಶಾನ್ಯ ಭಾಗದಿಂದ ಮಾನ್ಸೂನ್ ಇನ್ನಷ್ಟು ವ್ಯಾಪಿಸಲು ಬೇಕಾದ ಪೂರಕ ವಾತಾವರಣ ಇದೆ. ಮುಂದಿನ 4 ದಿನಗಳಲ್ಲಿ ಕೇರಳಕ್ಕೆ ಆಗಮಿಸುವ ಸಾಧ್ಯತೆ ಇದೆ.
ಪೂರ್ವ ಮುಂಗಾರು ಮಳೆ ಅಧಿಕ
ಮೇ 1ರಿಂದ 27ರ ವರೆಗೆ ರಾಜ್ಯದಲ್ಲಿ ವಾಡಿಕೆಯಂತೆ 60 ಮಿ.ಮೀ. ಮಳೆ ಆಗಬೇಕಿತ್ತು. ಆದರೆ, ಈ ವರ್ಷ 127 ಮಿ.ಮೀ. ಆಗಿದ್ದು, ವಾಡಿಕೆಗಿಂತ ಶೇ. 110ರಷ್ಟು ಹೆಚ್ಚು ಮಳೆಯಾಗಿದೆ. ದಕ್ಷಿಣ ಕರ್ನಾಟಕದಲ್ಲಿ ಶೇ. 118, ಉತ್ತರ ಕರ್ನಾಟಕದಲ್ಲಿ ಶೇ. 45, ಮಲೆನಾಡಿನಲ್ಲಿ ಶೇ. 64, ಕರಾವಳಿಯಲ್ಲಿ ಶೇ. 55ರಷ್ಟು ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ.
ಜೂನ್ 1ರಿಂದ 3ರವರೆಗೆ ಕರಾವಳಿಯ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬಳ್ಳಾರಿ, ಚಿತ್ರದುರ್ಗ, ವಿಜಯನಗರ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಚಾಮರಾಜನಗರ, ಮಂಡ್ಯ, ಮೈಸೂರು, ಹಾಸನ, ಕೊಡಗು, ಶಿವಮೊಗ್ಗ, ತುಮಕೂರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಲಿದೆ. ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಹಗುರದಿಂದ ಕೂಡಿದ ಸಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.