ಮುಂಬೈ: ಮಹಾರಾಷ್ಟ್ರದಲ್ಲಿ ನ್ಯಾಯಾಂಗವು ಮೂಲಸೌಕರ್ಯಗಳ ತೀವ್ರ ಕೊರತೆ ಎದುರಿಸುತ್ತಿದೆ. ಆದರೆ, ನೆರೆಯ ಕರ್ನಾಟಕದಲ್ಲಿ ಉತ್ತಮ ಮೂಲಸೌಕರ್ಯವಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅಭಯ್ ಓಕಾ ಹೇಳಿದ್ದಾರೆ.

ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಳ್ಳುವ ಮೊದಲು ಬಾಂಬೆ ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿ ಆಗಿದ್ದರು.

ಶನಿವಾರ ಇಲ್ಲಿ ‘ಕ್ರಿಮಿನಲ್ ನ್ಯಾಯಾಂಗ ವ್ಯವಸ್ಥೆಯ ತೊಡಕುಗಳು- ಕೆಲವು ಚಿಂತನೆ’ ವಿಷಯದ ಕುರಿತು ಅಶೋಕ್‌ ದೇಸಾಯಿ ಸ್ಮಾರಕ ಉಪನ್ಯಾಸವನ್ನು ಅವರು ನೀಡಿದರು.

ಮಹಾರಾಷ್ಟ್ರ ಸರ್ಕಾರದಿಂದ ಮೂಲಸೌಕರ್ಯ ಪಡೆಯಲು ಪರಿತಪಿಸಬೇಕಾಗಿದೆ. ಪುಣೆಯ ಸಿವಿಲ್ ಕೋರ್ಟ್ ಸಂಕೀರ್ಣದಲ್ಲಿ ನ್ಯಾಯಾಧೀಶರಿಗೆ ಪ್ರತ್ಯೇಕ ಕೋಣೆಯೂ ಇಲ್ಲ ಎಂದರು. ಕಳೆದ ಐದು ವರ್ಷಗಳಲ್ಲಿ ಕೆಲಮಟ್ಟಿಗೆ ಸುಧಾರಣೆ ಕಂಡಿದೆಯಷ್ಟೆ ಎಂದು ಹೇಳಿದರು.

ನೆರೆಯ ಕರ್ನಾಟಕದಲ್ಲಿ ಪರಿಸ್ಥಿತಿ ಭಿನ್ನವಾಗಿದೆ. ಕರ್ನಾಟಕ ಹೈಕೋರ್ಟ್‌ನ ಕಲಬುರಗಿ ಪೀಠದ ಸಂಕೀರ್ಣ ಪಂಚತಾರಾ ಹೋಟೆಲ್‌ನಂತಿದೆ ಎಂದು ಶ್ಲಾಘಿಸಿದರು.

ಕ್ರಿಮಿನಲ್‌ ನ್ಯಾಯಾಂಗ ವ್ಯವಸ್ಥೆಯು ಅನೇಕ ಸಮಸ್ಯೆ ಎದುರಿಸುತ್ತಿದೆ. ಆಡಳಿತ ವ್ಯವಸ್ಥೆ ಇಲ್ಲಿ ಸಾಮಾನ್ಯ ಜನರ ನಿರೀಕ್ಷೆಗಳನ್ನು ಈಡೇರಿಸಿಲ್ಲ ಎಂದು ಅಭಿಪ್ರಾಯಪಟ್ಟರು.