ಬೆಂಗಳೂರು:ಆರು ಮಂದಿ ನಕ್ಸಲರು ಶರಣಾಗುವುದರ ಮೂಲಕ ಕರ್ನಾಟಕ ಕಾಂಗ್ರೆಸ್ ಆಡಳಿತದಲ್ಲಿ ನಕ್ಸಲ್ ಮುಕ್ತವಾಗಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಮುಂಡಗಾರು ಲತಾ ಸೇರಿದಂತೆ ಆರು ಮಂದಿ ನಕ್ಸಲರ ಶರಣಾಗತಿಯಾದ ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು.
“ಸರ್ಕಾರ, ಪೊಲೀಸ್ ಅಧಿಕಾರಿಗಳ ಹಾಗೂ ಸರ್ಕಾರ ರಚನೆ ಮಾಡಿದ್ದ ಶಾಂತಿ ಪಾಲನ ಸಮಿತಿಯ ಫಲದಿಂದ ಈ ಕಾರ್ಯ ಯಶಸ್ವಿಯಾಗಿದೆ. ತಮಿಳುನಾಡಿನ ಮತ್ತು ಕೇರಳ ರಾಜ್ಯದಿಂದ ಇಬ್ಬರು, ಕರ್ನಾಟಕದ ನಾಲ್ಕು ಮಂದಿ ಒಂದಷ್ಟು ಬೇಡಿಕೆಗಳನ್ನು ಮುಂದಿಟ್ಟು ಶರಣಾಗಿರುವುದು ಸಂತಸ ತಂದಿದೆ. ಎಲ್ಲರ ಪರಿಶ್ರಮದಿಂದ ಅವರೆಲ್ಲಾ ಮುಂದೆ ಬಂದು ಶರಣಾಗಿದ್ದಾರೆ” ಎಂದು ಹೇಳಿದರು.
“ನಾವು ಶರಣಾದ ನಕ್ಸಲರ ಎಲ್ಲಾ ಬೇಡಿಕೆಗಳನ್ನು ಗೌರವಿಸುತ್ತೇವೆ. ತಮಿಳುನಾಡಿನ ಒಬ್ಬರು ಬಿ. ಟೆಕ್ ಪದವಿ ಪಡೆದಿದ್ದಾರೆ” ಎಂದರು.
ಬಿಜೆಪಿ ಸರ್ಕಾರದ ಈ ನಡೆಯನ್ನು ಟೀಕಿಸಿದೆ ಎಂದು ಕೇಳಿದಾಗ, “ಕೇವಲ ಟೀಕೆ ಮಾಡುವುದೇ ಅವರ ಕೆಲಸ. ಪರಿಸ್ಥಿತಿಯ ಲಾಭ ಪಡೆಯುವುದೇ ಅವರು ಯಾವಾಗಲೂ ಮಾಡುವ ಕೆಲಸ. ನಾವು ಹೃದಯದಿಂದ ಅವರ ಬಳಿ ಶರಣಾಗಿ ಎಂದು ಕೇಳಿಕೊಂಡೆವು. ನಮ್ಮ ಮುಖ್ಯಮಂತ್ರಿಗಳು ಸಹ ಅವರ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ ಕಾರಣಕ್ಕೆ ಶರಣಾಗಿದ್ದಾರೆ. ಮಹಾತ್ಮಾ ಗಾಂಧಿ ಅವರು ಒಂದು ಮಾತು ಹೇಳಿದ್ದಾರೆ. ‘ನೀನು ನಿನ್ನನ್ನೇ ನಿಯಂತ್ರಣ ಮಾಡಿಕೊಳ್ಳಲು ಮಿದುಳನ್ನು ಉಪಯೋಗಿಸು. ಇತರರ ಮನಸ್ಸು ಗೆಲ್ಲಬೇಕಾದರೆ ಹೃದಯದಿಂದ ಕೆಲಸ ಮಾಡು’ ಎಂದಿದ್ದಾರೆ. ನಮ್ಮ ಸರ್ಕಾರ ಹೃದಯದಿಂದ ಕೆಲಸ ಮಾಡಿದೆ” ಎಂದರು.
“ನಮ್ಮ ಸರ್ಕಾರ ಸಂವಿಧಾನತ್ಮಕವಾಗಿ ನಡೆದುಕೊಂಡಿದೆ. ಕಾನೂನಿನ ಅಡಿಯಲ್ಲಿಯೇ ನಾವು ಕೆಲಸ ಮಾಡಿದ್ದೇವೆ. ನಮ್ಮ ಮುಖ್ಯಮಂತ್ರಿಗಳು ಶರಣಾದ ನಕ್ಸಲರಿಗೆ ಸಂವಿಧಾನದ ಪುಸ್ತಕದ ಪ್ರತಿಯನ್ನು ನೀಡಿದ್ದಾರೆ” ಎಂದು ಹೇಳಿದರು.