ನವದೆಹಲಿ: ಭಾರತೀಯ ರೈಲ್ವೆಯೊಂದಿಗೆ ಕೊಂಕಣ ರೈಲ್ವೆಯನ್ನು ವಿಲೀನಗೊಳಿಸುವ ಪ್ರಸ್ತಾವನೆಗೆ ಕರ್ನಾಟಕ ಸರ್ಕಾರ ಒಪ್ಪಿಗೆ ನೀಡಿಲ್ಲ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಲೋಕಸಭೆಯಲ್ಲಿ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಕೇಳಿದ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಸಚಿವರು, ಗೋವಾ ರಾಜ್ಯ ಸರ್ಕಾರ ಮಾತ್ರ ತನ್ನ ಪಾಲನ್ನು ಬಿಟ್ಟುಕೊಡಲು ಇಚ್ಛೆ ವ್ಯಕ್ತಪಡಿಸಿದೆ ಎಂದು ಮಾಹಿತಿ ನೀಡಿದ್ದಾರೆ.
ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್‌ನಲ್ಲಿ ರೈಲ್ವೆ ಸಚಿವಾಲಯ, ಮಹಾರಾಷ್ಟ್ರ ಸರ್ಕಾರ, ಕರ್ನಾಟಕ ಸರ್ಕಾರ, ಗೋವಾ ಸರ್ಕಾರ ಮತ್ತು ಕೇರಳ ಸರ್ಕಾರ ಪಾಲುದಾರಿಕೆ ಹೊಂದಿವೆ. ಕೊಂಕಣ ರೈಲ್ವೆಯ ಮೂಲಸೌಕರ್ಯ 25 ವರ್ಷಗಳಿಗಿಂತ ಹೆಚ್ಚು ಹಳೆಯದಾಗಿದೆ. ಸುರಂಗಗಳ ಡಬಲಿಂಗ್ ಮತ್ತು ದುರಸ್ತಿ, ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮೂಲಸೌಕರ್ಯಗಳ ಹೆಚ್ಚಳ ಮತ್ತು ದುರಸ್ತಿಗೆ ಬಂಡವಾಳದ ಅಗತ್ಯ ಇದೆ. ತಮ್ಮ ಪಾಲಿನ ಬಂಡವಾಳ ವೆಚ್ಚ ನೀಡಲು ಅಥವಾ ರೈಲ್ವೆ ಸಚಿವಾಲಯದ ಪರವಾಗಿ ತಮ್ಮ ಪಾಲನ್ನು ತ್ಯಜಿಸಲು ಎಲ್ಲ ಷೇರುದಾರರನ್ನು ರೈಲ್ವೆ ಸಚಿವಾಲಯ ಸಂಪರ್ಕಿಸಿದೆ. ಇದಕ್ಕೆ ಗೋವಾ ಸರ್ಕಾರ ಮಾತ್ರ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ಅವರು ವಿವರ ನೀಡಿದ್ದಾರೆ.