ಕಟೀಲು: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಧ್ವಜಾರೋಹಣದೊಂದಿಗೆ ಚಾಲನೆ ನೀಡಲಾಯಿತು.

ದೇವರ ಬಲಿ ಹೊರಟು ಧ್ವಜಾರೋಹಣ, ಶಿಬರೂರು ಕೊಡಮಣಿತ್ತಾಯ ಮತ್ತು ದೇವರ ಭೇಟಿ, ಪ್ರಸಾದ ವಿತರಣೆ, ಪಲ್ಲಪೂಜೆಯ ನಂತರ ಅನ್ನಸಂತರ್ಪಣೆ ನಡೆಯಿತು.

ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವದ ದಿನ ಪಾನಕ ಸೇವೆ ವಿಶೇಷತೆಯನ್ನು ಹೊಂದಿದೆ.

ಜಾತ್ರಾ ಮಹೋತ್ಸವದ ಮೊದಲ ದಿನ ಸುಮಾರು 9 ಸಾವಿರ ಲೀಟರ್ ಪಾನಕ ವಿತರಿಸಲಾಯಿತು. ಈ ಸೇವೆಯನ್ನು ಕಟೀಲು, ಕಿನ್ನಿಗೋಳಿ ಜಿಎಸ್‌ಬಿ ಸಮಾಜದವರು ಕೈಗೊಂಡಿದ್ದರು.

ಉತ್ಸವದ ಅಂಗವಾಗಿ ದಿನಂಪ್ರತಿ ದಿನವಿಡೀ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಸರಸ್ವತೀ ಸದನದಲ್ಲಿ ನಡೆಯುತ್ತಿವೆ.

ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ, ಶ್ರೀಕರ ಆಸ್ರಣ್ಣ, ಶೈಲಜಾ ಪ್ರದ್ಯುಮ್ನ ರಾವ್ ಉಪಸ್ಥಿತಿಯಲ್ಲಿ ಉದ್ಘಾಟಿಸಲಾಯಿತು.

ಮೇಧಾ ಅವರಿಂದ ಹಾರ್ಮೋನಿಯಂ ವಾದನ, ಕಲಾತರಂಗಿಣಿ ಹೊಸಬೆಟ್ಟು ರಾಜೇಶ್ ಬಾಗಲೋಡಿ ಅವರ ಶಿಷ್ಯರಿಂದ ಕೊಳಲುವಾದನ, ಶೋಭಾ ಐತಾಳ್ ಬಳಗದವರಿಂದ ಭಕ್ತಿಗೀತೆ, ಪೆರಿಯಡ್ಕ, ಮಲ್ಲೂರು ತಂಡಗಳಿಂದ ಕುಣಿತ ಭಜನೆ, ಪುತ್ತೂರಿನ ಸ್ವರ ಮಾಧುರ್ಯ ಬಳಗದಿಂದ ಸಂಗೀತ, ನಂದಳಿಕೆ ವಿಶಾಲ ಯಕ್ಷಕಲಾ ಬಳಗದಿಂದ ತಾಳಮದ್ದಲೆ, ಬೆಂಗಳೂರಿನ ಶೈಲಶ್ರೀ ಶ್ರೀವತ್ಸ ಬಳಗದವರಿಂದ ಭರತನಾಟ್ಯ ನಡೆಯಿತು.

ಧ್ವಜಾರೋಹಣದ ದಿನ ಅಪಾರ ಸಂಖ್ಯೆಯ ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು.