ಆರು ಯಕ್ಷಗಾನ ಮೇಳಗಳನ್ನೊಳಗೊಂಡ ದಕ್ಷಿಣ ಕನ್ನಡ ಜಿಲ್ಲೆಯ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದ ಯಕ್ಷಗಾನ ಮೇಳಗಳ ತಿರುಗಾಟ ಆರಂಭವಾದ ಒಂದು ತಿಂಗಳ ಬಳಿಕ, ಇಂದಿನಿಂದ (ಜ.14) ಕಾಲಮಿತಿಯ ಬದಲಾಗಿ ಬೆಳಿಗ್ಗಿನವರೆಗೆ ಯಕ್ಷಗಾನ ನಡೆಯಲಿದೆ ಎಂದು ಹೇಳಿಕೆ ನೀಡಿದ್ದ ಕಟೀಲು ದೇಗುಲದ ಆಡಳಿತ ಮಂಡಳಿ ಸ್ಪಷ್ಟ ನಿರ್ಧಾರವನ್ನು ಇನ್ನೂ ಪ್ರಕಟಿಸಿಲ್ಲ. ಆಡಳಿತ ಮಂಡಳಿಯ ಹೇಳಿಕೆ ಪ್ರಕಾರ ಭಾನುವಾರದಿಂದ ಬೆಳಿಗ್ಗಿನವರೆಗೆ ಯಕ್ಷಗಾನ ನಡೆಯಬೇಕಾಗಿತ್ತು, ಈ ಮಧ್ಯೆ ದ.ಕ. ಜಿಲ್ಲಾಧಿಕಾರಿ ಧ್ವನಿವರ್ಧಕ ನಿಯಮವನ್ನು ಪಾಲಿಸದಿದ್ದರೆ ಆಡಳಿತ ಮಂಡಳಿಯೇ ಹೊಣೆ ಎಂದು ಆದೇಶ ಮಾಡಿರುವ ಹಿನ್ನಲೆಯಲ್ಲಿ ಕಟೀಲು ಮೇಳದ ಆಟಗಳ ಪ್ರದರ್ಶನಗಳನ್ನು ಇಡೀ ರಾತ್ರಿಗೆ ವಿಸ್ತರಿಸಲು ಕೆಲ ತಾಂತ್ರಿಕ ತೊಂದರೆಗಳು ಇರುವುದರಿಂದ ಸದ್ಯಕ್ಕೆ ಕಾಲಮಿತಿ ಪ್ರದರ್ಶನಗಳನ್ನು ಮುಂದುವರಿಸಿ ಬಳಿಕ ವ್ಯವಸ್ಥಿತ ರೀತಿಯಲ್ಲಿ ಇಡೀ ರಾತ್ರಿಯ ಯಕ್ಷಗಾನ ಪ್ರದರ್ಶನಗಳನ್ನು ನಡೆಸಲಾಗುವುದು ಎಂದು ದೇಗುಲದ ಆಡಳಿತ ಮಂಡಳಿಯ ಮೂಲಗಳು ತಿಳಿಸಿವೆ.
ಮಂಗಳೂರು :
ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ಯಕ್ಷಗಾನ ಮಂಡಳಿಯ ಆರೂ ಮೇಳಗಳೂ ಕಾಲಮಿತಿಯಲ್ಲಿಯೇ ಸದ್ಯ ಯಕ್ಷಗಾನ ಪ್ರದರ್ಶನ ಮುಂದುವರಿಸಲಿವೆ.
ಜನವರಿ 14 ರಿಂದ ರಾತ್ರಿ ಪೂರ್ತಿ ಯಕ್ಷಗಾನ ಪ್ರದರ್ಶಿಸುವ ಪದ್ಧತಿಗೆ ಮರಳುತ್ತಿರುವುದಾಗಿ ಕೆಲವು ದಿನಗಳ ಹಿಂದೆ ದೇವಸ್ಥಾನದ ಆಡಳಿತ ಸಮಿತಿ ಪ್ರಕಟಣೆ ನೀಡಿತ್ತು. ಆದರೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಯಕ್ಷಗಾನವನ್ನು ರಾತ್ರಿ ಇಡೀ ಪ್ರದರ್ಶಿಸುವಾಗ ಶಬ್ದ ಮಾಲಿನ್ಯ ನಿಯಮಾವಳಿ ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ಆದೇಶಗಳ ಅಂಶವನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂದು ಜನವರಿ 10ರಂದು ಆದೇಶ ಹೊರಡಿಸಿದ್ದರು.
ರಾತ್ರಿ ಪೂರ್ತಿ ಯಕ್ಷಗಾನ ನಡೆಸುವ ಧ್ವನಿವರ್ಧಕ ಬಳಕೆಯಾದರೆ ಶಬ್ದ ಮಾಲಿನ್ಯ ಉಂಟಾಗುವ ಸಾಧ್ಯತೆ ಇದೆ ಎಂದು ಕಲಾವಿದರು ಯಕ್ಷಾಭಿಮಾನಿಗಳು ಭೀತಿ ವ್ಯಕ್ತಪಡಿಸಿದ್ದರು. ಮೇಳದ ಕೆಲ ಕಲಾವಿದರು ಕಾಲಮಿತಿ ಪದ್ಧತಿಯನ್ನೇ ಮುಂದುವರಿಸಬೇಕು ಎಂದು ಆಡಳಿತ ಸಮಿತಿಗೆ ಮನವಿ ಮಾಡಿದ್ದರು. ಈ ನಡುವೆ ಜನವರಿ 14 ರಿಂದ ಪೂರ್ಣ ರಾತ್ರಿ ಆಟ ನಡೆಸುವುದು ಎಂದು ನಿರ್ಧರಿಸಿದ್ದ ಆಡಳಿತ ಮಂಡಳಿ ಸದ್ಯಕ್ಕೆ ಯೋಚನೆ ಕೈ ಬಿಟ್ಟಿದೆ
ಜಿಲ್ಲಾಧಿಕಾರಿ ಆದೇಶದ ಹಿನ್ನೆಲೆಯಲ್ಲಿ ಹೈಕೋರ್ಟ್ , ಸುಪ್ರೀಂ ಕೋರ್ಟ್ ಗಳ ಆದೇಶದ ಅಂಶವನ್ನೊಳಗೊಂಡಂತೆ ಯಕ್ಷಗಾನ ಇಡೀ ರಾತ್ರಿ ಪ್ರದರ್ಶನದ ಬಗ್ಗೆ ಕಾನೂನು ಸಲಹೆಗಾರರ ಮೊರೆ ಹೋಗಲು ನಿರ್ಧರಿಸಲಾಗಿದೆ ಎಂದು ಆಡಳಿತ ಸಮಿತಿ ಅಧ್ಯಕ್ಷ ಕೊಡೆತ್ತೂರು ಗುತ್ತು ಸನತ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ. ಇನ್ನು ಒಂದು ವಾರ ಅಥವಾ 10 ದಿನಗಳಲ್ಲಿ ನಮ್ಮ ವಕೀಲರು ಕಾನೂನು ಸಲಹೆ ನೀಡುವ ನಿರೀಕ್ಷೆ ಇದೆ. ಅಲ್ಲಿಯವರೆಗೆ ಈಗಿನಂತೆ ಕಾಲಮಿತಿಯಲ್ಲಿಯೇ ಆಟಗಳು ಮುಂದುವರಿಯುತ್ತದೆ ಎಂದು ತಿಳಿಸಿದ್ದಾರೆ.