ಕಟೀಲು : ದಕ್ಷಿಣ ಕನ್ನಡ ಜಿಲ್ಲೆಯ ಸುಪ್ರಸಿದ್ಧ ಶ್ರೀ ಕಟೀಲು ದುರ್ಗಾಪರಮೇಶ್ವರಿ ಕ್ಷೇತ್ರದ ಅದ್ಭುತ ದೃಶ್ಯವನ್ನು ಇದೀಗ ಡ್ರೊಣ್ ಕ್ಯಾಮರಾ ಮತ್ತು ಮೊಬೈಲ್ ನಲ್ಲಿ ಸೆರೆಹಿಡಿಯಲಾಗುತ್ತಿದೆ. ಜೊತೆಗೆ ಕ್ಷೇತ್ರಕ್ಕೆ ಪ್ರತಿದಿನ ಆಗಮಿಸುವ ಸಾವಿರಾರು ಭಕ್ತರು ಸಹಾ ಸುಂದರ ನಂದಿನಿ ನದಿಯ ದೃಶ್ಯವನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದಾರೆ. ನಂದಿನಿ ನದಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಅದ್ಭುತ ಪೌರಾಣಿಕ ಹಾಗೂ ಸುಂದರ ಕಥೆಯನ್ನು ಹೊಂದಿದೆ. ಮಳೆಗಾಲದಲ್ಲಿ ಕಟೀಲು ಕ್ಷೇತ್ರಕ್ಕೆ ಬರುವ ಭಕ್ತರ ಪಾಲಿಗೆ ಅತ್ಯಾಕರ್ಷಕ, ಮನೋಹರವಾಗಿ ಹರಿಯುವ ನಂದಿನಿ ನದಿಯ ದೃಶ್ಯ ಪುಳಕಿತರನ್ನಾಗಿ ಮಾಡುತ್ತಿದೆ. ಈ ವರ್ಷ ಯಥೇಚ್ಛವಾಗಿ ಸುರಿಯುತ್ತಿರುವ ಭಾರಿ ಮಳೆಗೆ ನಂದಿನಿ ನದಿ ಜೀವಕಳೆ ಪಡೆದುಕೊಂಡು ಸಮುದ್ರ ರಾಜನತ್ತ ವೇಗವಾಗಿ ಭೋರ್ಗೆರೆಯುತ್ತ, ಧುಮ್ಮಿಕ್ಕುವ ಸನ್ನಿವೇಶ ಎಂಥವರಿಗೂ ಸಂತಸ ನೀಡುತ್ತದೆ ಮಾತ್ರವಲ್ಲ ತಾವಿರುವ ಜಗತ್ತನ್ನೇ ಮರೆಯುವಂತೆ ಮಾಡುತ್ತದೆ.