ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಆರು ಮೇಳಗಳ ತಿರುಗಾಟ ಸೋಮವಾರದಿಂದ ಆರಂಭವಾಗಿದೆ. ಈ ವರ್ಷ ಮೇ 25ರ ತಿರುಗಾಟದವರೆಗೆ ಒಟ್ಟು 181ದಿನಗಳ ಕಾಲ ನಾನಾ ಕಡೆಗಳಲ್ಲಿ ಪ್ರದರ್ಶನ ನೀಡಲಿವೆ.

ಕಟೀಲು ಮೇಳಗಳು
ಮೇಳ ಹೊರಟ ದಿನವಾದ ಸೋಮವಾರ 16, ಕಳೆದ ಒಂದು ತಿಂಗಳಲ್ಲಿ 109, ಒಂದು ವರ್ಷದಲ್ಲಿ 909 ಸೇವೆಯಾಟಗಳು ಬುಕ್ಕಿಂಗ್ ಆಗಿವೆ. ಖಾಯಂ ಆಟಗಳೇ ಸುಮಾರು 480ರಷ್ಟು ಇವೆ. ಈ ಲೆಕ್ಕದಲ್ಲಿ ವಾರ್ಷಿಕ ಆರುನೂರರಷ್ಟು ಮಂದಿಗೆ ಮಾತ್ರ ಸೇವೆಯಾಟಗಳು ಅಂದರೆ ಮುನ್ನೂರು ಲಭ್ಯವಾಗುತ್ತವೆ. ಸೇವೆಯಾಟಗಳು ವಾರ್ಷಿಕವಾಗಿ ಬಾಕಿಯಾದಂತಾಯಿತು. ಇದಲ್ಲದೆ ಬುಕ್ಕಿಂಗ್ ಆಗಿರುವ ಏಳೆಂಟು ಸಾವಿರಕ್ಕೂ ಹೆಚ್ಚು ಬಯಲಾಟಗಳು ಈ ಮುಂಚೆಯೇ ಬಾಕಿಯಾಗಿ ಉಳಿದಿವೆ. ಹಾಗಾಗಿ ಹೆಚ್ಚಿನ ಮೇಳಗಳನ್ನು ಆರಂಭಿಸುವ ಅನಿವಾರ್ಯತೆಯೂ ಇದ್ದು ಮುಂದಿನ ವರುಷ ಏಳನೇ ಮೇಳವನ್ನು ಆರಂಭಿಸುವ ಕುರಿತು ಚರ್ಚೆಗಳು, ಚಿಂತನೆ ಆರಂಭವಾಗಿದೆ ಎನ್ನಲಾಗಿದೆ.

ಅನುಭವಿ ಕಲಾವಿದರ ಲಭ್ಯತೆ, ವ್ಯವಸ್ಥೆಗಳು ಹೀಗೆ ಹೊಸ ಮೇಳವನ್ನು ಆರಂಭಿಸುವ ಮುನ್ನ ಸಾಕಷ್ಟು ಸಿದ್ಧತೆಗಳಾಗಬೇಕು. ಪ್ರದರ್ಶನದ ಗುಣಮಟ್ಟದ ಬಗ್ಗೆ ಯೋಚಿಸಬೇಕು. ಜೊತೆಗೆ ಭಕ್ತರ, ಹರಕೆಯ ಸೇವೆಯಾಟಗಳ ಈಡೇರಿಕೆಯ ಬಗ್ಗೆಯೂ ದೇವಸ್ಥಾನ ಚಿಂತಿಸಬೇಕಾಗಿದ್ದು ಹೊಸ ಮೇಳದ ಆರಂಭದ ಬಗ್ಗೆ ಪ್ರಸ್ತಾಪ ಬಂದಿದೆ.

ಏಪ್ರಿಲ್ 20ರ ದೇಗುಲದ ಆರಾಟದ ರಜೆ, ಆರಂಭ ಹಾಗೂ ಕೊನೆಯ ದಿನದ ಒಂದೊಂದು ಪ್ರದರ್ಶನಗಳನ್ನು ಲೆಕ್ಕ ಹಾಕಿದರೆ ಒಟ್ಟು 1076 ಪ್ರದರ್ಶನಗಳನ್ನು ನೀಡಲಿವೆ.

ಈ ವರ್ಷದಿಂದ ಅನೇಕ ಸೇವಾದಾರರ ಒತ್ತಾಯದ ಮೇರೆಗೆ ಸಂಜೆ 5.45ರ ಬದಲು ಸಂಜೆ 6.15ಕ್ಕೆ ಚೌಕಿ ಪೂಜೆ, ಬಳಿಕ ಯಕ್ಷಗಾನ ಆರಂಭವಾಗಲಿದೆ. ಈ ವರ್ಷ ನಿವೃತ್ತಿ, ಬೇರೆ ಮೇಳಕ್ಕೆ ಸೇರ್ಪಡೆ ಹೀಗೆ 9 ಮಂದಿ ಮೇಳ ಬಿಟ್ಟರೆ, ಹೊಸದಾಗಿ 17 ಮಂದಿ ಸೇರ್ಪಡೆಗೊಂಡಿದ್ದಾರೆ.

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಆರೂ ಮೇಳಗಳ 2024-25ನೇ ಸಾಲಿನ ತಿರುಗಾಟದ ಹಿಮ್ಮೇಳ-ಮುಮ್ಮೇಳದಲ್ಲಿ ಪ್ರತಿಷ್ಠಿತ ಕಲಾವಿದರಿದ್ದಾರೆ. ಶ್ರೀ ದೇವೀ ಮಹಾತ್ಮೆ, ಕಟೀಲು ಕ್ಷೇತ್ರ ಮಹಾತ್ಮೆ, ಶ್ರೀ ದೇವಿ ಲಲಿತೋಪಾಖ್ಯಾನ ಪ್ರಸಂಗ ಹೆಚ್ಚಾಗಿ ಪ್ರದರ್ಶನ ನೀಡಲಾಗುತ್ತದೆ.