
ಪುತ್ತೂರು:ಕಾಂಞಂಗಾಡ್‌ನಿಂದ ಕಾಣಿಯೂರುಗೆ ಸಂಪರ್ಕ ಕಲ್ಪಿಸುವ ರೈಲ್ವೇ ಮಾರ್ಗ ಯೋಜನೆಯು ಅಂದಿನಿಂದ ಇಂದಿನ ತನಕ ಅಭಿವೃದ್ದಿ ಕಾಣದೆ ನನೆಗುದಿಗೆ ಬಿದ್ದಿದ್ದು ಈ ವಿಚಾರದಲ್ಲಿ ಕರ್ನಾಟಕ ಸರಕಾರದ ಜೊತೆ ಮಾತುಕತೆ ನಡೆಸುವ ಉದ್ದೇಶದಿಂದ ರೈಲ್ವೇ ಹೋರಾಟ ಸಮಿತಿ ನಿಯೋಗವೊಂದು ಪುತ್ತೂರು ಶಾಸಕ ಅಶೋಕ್ ರೈ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಈ ವಿಚಾರದಲ್ಲಿ ಚರ್ಚೆ ನಡೆಸುವ ಸಲುವಾಗಿ ಶಾಸಕರಿಗೆ ಮನವಿ ಸಲ್ಲಿಸಿದರು.
೨೦೦೮ ರಲ್ಲಿ ಕಾಂಞಂಗಾಡ್- ಕಾಣಿಯೂರು ರೈಲ್ವೇ ಹೊಸ ಮಾರ್ಗಕ್ಕೆ ಕೇಂದ್ರ ರೈಲ್ವೇ ಇಲಾಖೆ ಅನುಮೋದನೆಯನ್ನು ನೀಡಿದೆ. ಕಾಮಗಾರಿಗೆ ಡಿಪಿಆರ್ ಸಿದ್ದಪಡಿಸಿ ಆ ಬಳಿಕ ಕೇಂದ್ರ ಸರಕಾರ ೧೩೫೦ ಕೋಟಿ ರೂ ಯೋಜನೆಯನ್ನು ಸಿದ್ದಪಡಿಸಬೇಕಿದೆ. ಇದರಲ್ಲಿ ೬೫೦ ಕೋಟಿ ರೂ ಕೇರಳ ಮತ್ತು ಕರ್ನಾಟಕ ರಾಜ್ಯ ಫಿಫ್ಟಿ ಫಿಫ್ಟಿ ಅನುದಾನವನ್ನು ನೀಡಬೇಕಿದೆ. ಕೇರಳ ಸರಕಾರ ಈಗಾಗಲೇ ೩೨೦ ಕೋಟಿ ರೂ ಅನುದಾನವನ್ನು ನೀಡಲು ಒಪ್ಪಿದ್ದು ಆದರೆ ಕರ್ನಾಟಕ ಸರಕಾರದಿಂದ ಸಿಗಬೇಕಾದ ೩೨೫ ಕೋಟಿ ರೂ ಅನುದಾನದ ಬಗ್ಗೆ ಇನ್ನೂ ಕರ್ನಾಟಕ ಸರಕಾರದ ಜೊತೆ ಮಾತುಕತೆ ನಡೆದಿಲ್ಲ. ಕರ್ನಾಟಕ ಸರಕಾರದ ಜೊತೆ ಮಾತುಕತೆಯು ಮುಂದಿನ ವಾರ ನಡೆಯಲಿದ್ದು ರೈಲ್ವೇ ಹೋರಾಟ ಸಮಿತಿ ಮತ್ತು ಶಾಸಕ ಅಶೋಕ್ ರೈ ಅವರು ಜಂಟಿಯಾಗಿ ಸಿ ಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಚರ್ಚೆ ನಡೆಸಲಿದೆ.
ಎಲ್ಲಿಂದ ಹಾದು ಹೋಗುತ್ತದೆ
ಕಾಂಞಂಗಾಡ್- ಮೀನೋತ್- ಕೊಟ್ಟೋಡಿ-ಬಳತ್ತೋಡು- ಪಾಣಣತ್ತೂರು ಮೂಲಕ ಕರ್ನಾಟಕದ ಕಲ್ಲಪಳ್ಳಿ- ಸುಳ್ಯ-ಬೆಳ್ಳಾರೆ- ಕಾಣಿಯೂರುಗೆ ಈ ರೈಲ್ವೇ ಮಾರ್ಗ ಸಂಪರ್ಕವನ್ನು ಕಲ್ಪಿಸಲಿದೆ. ಸುಮಾರು ೯೧ ಕಿ ಮೀ ಉದ್ದದ ಈ ರೈಲ್ವೇ ಮಾರ್ಗಕ್ಕೆ ೧೩೫೦ ಕೋಟಿ ಅನುದಾನ ಬೇಕಾಗುತ್ತದೆ. ಕೇಂದ್ರ ಸರಕಾರ, ಕೇರಳ ಮತ್ತು ಕರ್ನಾಟಕ ಸರಕಾರ ಜಂಟಿಯಾಗಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಿದೆ. ನಿಯೋಗದಲ್ಲಿ ಹೋರಾಟ ಸಮಿತಿಯ ಬೆಟ್ಟ ಜಯರಾಂ, ನ್ಯಾಯವಾದಿ ಎಂ ಸಿ ಜೋಶ್, ಎ ಹಮೀದ್ ಹಾಜಿ, ಸೂರ್ಯ ನಾರಾಯಣ ಭಟ್, ಕುಂಞಿ ಕಣ್ಣನ್, ಮೊಹಮ್ಮದ್ ಉಪಸ್ಥಿತರಿದ್ದರು.
ಕಾಂಞಂಗಾಡ್- ಕಾಣಿಯೂರು ಯೋಜನೆಗೆ ೨೦೧೫ ರಲ್ಲಿ ಕೇಂದ್ರ ಅನುಮತಿಯನ್ನು ನೀಡಿದೆ. ಆದರೆ ಆ ಬಳಿಕ ಸರ್ವೆ ನಡೆಸಿದೆ ವಿನಾ ಡಿಪಿಆರ್ ಸಿದ್ದಪಡಿಸಿಲ್ಲ. ಕೇರಳ ಮತ್ತು ಕರ್ನಾಟಕದ ಮೂಲಕ ಹಾದು ಹೋಗುವ ಈ ರೈಲು ಮಾರ್ಗಕ್ಕೆ ಕೇಂದ್ರದ ಜೊತೆ ಎರಡು ಸರಕಾರಗಳು ಕೈಜೋಡಿಸಬೇಕಿದೆ. ಈ ಯೋಜನೆ ಜಾರಿಯಾದಲ್ಲಿ ಕೇರಳ ಮತ್ತುಕರ್ನಾಟಕಕ್ಕೆ ಕೊಂಡಿಯಾಗಿ ಕೆಲಸ ಮಾಡಲಿದೆ. ಸುಬ್ರಹ್ಮಣ್ಯ ಮತ್ತು ಬೆಂಗಳೂರಿಗೆ ತೆರಳುವ ಪ್ರಯಾಣಿಕರಿಗೆ ಇದು ಪ್ರಯೋಜನವನ್ನು ನೀಡಲಿದೆ. ಈ ವಿಚಾರದಲ್ಲಿ ಕೇರಳದ ನಿಯೋಗವೊಂದು ನನ್ನನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದು ಮುಂದಿನ ವಾರ ಬೆಂಗಳೂರಿನಲ್ಲಿ ಈ ಬಗ್ಗೆ ಚರ್ಚೆ ನಡೆಯಲಿದೆ.-ಅಶೋಕ್ ರೈ, ಶಾಸಕರು ಪುತ್ತೂರು