ನವದೆಹಲಿ:
ಲೋಕಸಭಾ ಚುನಾವಣೆಗೂ ಮುನ್ನ ಪಿ.ಸಿ.ಜಾರ್ಜ್ ನೇತೃತ್ವದ ಕೇರಳ ಜನಪಕ್ಷಂ(ಜಾತ್ಯಾತೀತ) ಬಿಜೆಪಿಯೊಂದಿಗೆ ವಿಲೀನಗೊಂಡಿದೆ.

ಕೇಂದ್ರ ಸಚಿವ ಪ್ರಕಾಶ್‌ ಜಾವೇಡಕರ್ ಅವರ ಸಮ್ಮುಖದಲ್ಲಿ ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಿ.ಸಿ ಜಾರ್ಜ್, ಮಗ ಶಾನ್‌ ಮತ್ತು ಪಕ್ಷದ ಇತರ ಮುಖಂಡರೊಂದಿಗೆ ಬಿಜೆಪಿಗೆ ಸೇರಿದ್ದಾರೆ.

ಇಂದು ಪಿ. ಸಿ. ಜಾರ್ಜ್ ನೇತೃತ್ವದ ಕೇರಳ ಜನಪಕ್ಷಂ (ಜಾತ್ಯಾತೀತ) ಬಿಜೆಪಿಯೊಂದಿಗೆ ವಿಲೀನಗೊಂಡಿದೆ. 2047ರ ವೇಳೆಗೆ ಭಾರತವನ್ನು ‘ವಿಕಸಿತ ಭಾರತ’ ಆಗಿ ಪರಿವರ್ತಿಸುವ ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯಲ್ಲಿ ವಿಶ್ವಾಸವಿಟ್ಟು ಈ ನಿರ್ಧಾರ ತೆಗೆದುಕೊಂಡಿದೆ’ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಅನಿಲ್ ಆಂಟೋನಿ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.

ಜನಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸುವ ಮೂಲಕ ಕೇರಳದಲ್ಲಿ ಐತಿಹಾಸಿಕ ಬದಲಾವಣೆಗೆ ಮುನ್ನುಡಿ ಹಾಡಿದ್ದೇವೆ. ರಾಜ್ಯದಲ್ಲಿ ಬಿಜೆಪಿ ಇನ್ನಷ್ಟು ಬೆಳೆಯಲು ಇದು ಸಹಕಾರಿಯಾಗಲಿದೆ ಎಂದು ಹೇಳಿದರು.