ಶಿರೂರು: ತಮ್ಮ ರಾಜ್ಯದ ಲಾರಿ ಡ್ರೈವರ್ ಅರ್ಜುನ್ ಶಿರೂರಿನಲ್ಲಿ ಸಂಭವಿಸಿದ ಗುಡ್ಡ ಕುಸಿತದಲ್ಲಿ ಸಿಲುಕಿಕೊಂಡಿದ್ದಾರೆ ಎಂಬ ಕಾರಣಕ್ಕೆ ಕೇರಳದ ಶಾಸಕ ಮತ್ತು ಮಾಧ್ಯಮಗಳು ಎರಡು ದಿನಗಳಿಂದ ಸ್ಥಳದಲ್ಲೇ ಬೀಡುಬಿಟ್ಟಿದ್ದಾರೆ. ಅರ್ಜುನ್ ಕುಟುಂಬಸ್ಥರು ಶಿರೂರಿನಲ್ಲಿ ತಮ್ಮ ಮಗನ ಹುಡುಕಾಟಕ್ಕೆ ಸೇನೆ ಕರೆಸಬೇಕು ಎಂದು ಪಟ್ಟು ಹಿಡಿದಿದ್ದಾರೆ. ಕುಟುಂಬಸ್ಥರ ಮನವಿಗೆ ರಾಜ್ಯ ಸರ್ಕಾರ ಸ್ಪಂದಿಸಿ ಕರ್ನಾಟಕ ಸರಕಾರ ಜೊತೆ ಮಾತುಕತೆ ನಡೆಸಿದೆ. ಮಂಜೇಶ್ವರ ಶಾಸಕ ಆಶ್ರಫ್ ಮತ್ತು ಅಲ್ಲಿನ ಮಾಧ್ಯಮಗಳು ಗುಡ್ಡ ಕುಸಿತವಾದ ಸ್ಥಳದಲ್ಲೇ ಎರಡು ದಿನಗಳಿಂದ ಮೊಕ್ಕಾಂ ಹೂಡಿದ್ದಾರೆ. ಕೇರಳದ ಮಾಧ್ಯಮಗಳು ನಿರಂತರವಾಗಿ ಎರಡು ದಿನದಿಂದ ಶಿರೂರು ಗುಡ್ಡ ಕುಸಿತದ ಪ್ರಕರಣವನ್ನು ವರದಿ ಮಾಡುತ್ತಿವೆ. ಕೇರಳದ ರಕ್ಷಣಾ ಕಾರ್ಯಕರ್ತರು ಸೇರಿದಂತೆ ಇತರರು ಕಾರ್ಯಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮ ರಾಜ್ಯದ ಒಬ್ಬ ವ್ಯಕ್ತಿ ಸಿಲುಕಿಕೊಂಡಿದ್ದಾನೆ ಎಂಬ ಕಾರಣಕ್ಕೆ ಒಗ್ಗಟ್ಟಾಗಿ ಬಂದು ಮೊಕ್ಕಾಂ ಹೂಡಿರುವುದನ್ನು ಎಲ್ಲರೂ ಮೆಚ್ಚಲೇಬೇಕು. ಗುಡ್ಡ ಕುಸಿತದ ಸಂದರ್ಭದಲ್ಲಿ ಒಟ್ಟು 10 ಜನ ಸಿಲುಕಿಕೊಂಡಿದ್ದಾರೆ ಎನ್ನಲಾಗಿತ್ತು. ಈ ಪೈಕಿ ಅರ್ಜುನ್ ಒಬ್ಬರು. ಈಗಾಗಲೇ ಏಳು ಜನರ ಮೃತರ ಶವ ಸಿಕ್ಕಿದೆ. ಕಾರ್ಯಾಚರಣೆ ಮುಂದುವರಿದಿದೆ. ಅರ್ಜುನ್ ಮೊಬೈಲ್ ರಿಂಗ್ ಆಗುತ್ತಿದ್ದರಿಂದ ಅವರು ಬದುಕಿರಬಹುದು ಎಂಬ ಆಶಾಭಾವನೆ ಕುಟುಂಬದವರದ್ದು.