Join The Telegram | Join The WhatsApp |
ಕುಮಟಾ:
ಕಳೆದ ಮೂರು ದಶಕಗಳಿಗೂ ಹೆಚ್ಚು ಕಾಲ ಯಕ್ಷಗಾನ ಕಲಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಮುಮ್ಮೇಳದ ಮೂವರು ಹಿರಿಯ ಕಲಾವಿದರಿಗೆ ಹಾಗೂ ಹಿಮ್ಮೇಳದ ಇಬ್ಬರು ಹಿರಿಯ ಕಲಾವಿದರಿಗೆ ಬೆಂಗಳೂರು ಹಾಗೂ ಕುಮಟಾದ ಶ್ರೀ ಮಹಾಬಲ ಶೋಧ ಸಂಸ್ಥಾನಮ್ ವತಿಯಿಂದ ಯಕ್ಷಗಾನದ ಭೀಷ್ಮ ಎಂದೇ ಹೆಸರಾಗಿದ್ದ ಮೇರು ಕಲಾವಿದ ಡಾ. ಮಹಾಬಲ ಹೆಗಡೆ ಕೆರೆಮನೆ ಹೆಸರಿನ ಪ್ರಶಸ್ತಿ ಪ್ರಕಟಿಸಿದೆ.
ಸೆಲ್ಕೋದ ಸಿಇಒ ಹಾಗೂ ಶ್ರೀ ಮಹಾಬಲ ಶೋಧ ಸಂಸ್ಥಾನಮ್ ಮುಖ್ಯಸ್ಥ ಮೋಹನ ಭಾಸ್ಕರ ಹೆಗಡೆ ಈ ವಿಷಯ ತಿಳಿಸಿದ್ದು, ಮುಮ್ಮೇಳದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹೆಸರಾಂತ ಯಕ್ಷಗಾನ ಕಲಾವಿದ ಬಳ್ಕೂರು ಕೃಷ್ಣ ಯಾಜಿ, ಮತ್ತೋರ್ವ ಹೆಸರಾಂತ ಕಲಾವಿದ ಕೊಂಡದಕುಳಿ ರಾಮಚಂದ್ರ ಹೆಗಡೆ, ಸಿದ್ದಾಪುರದ ವಿನಾಯಕ ಹೆಗಡೆ ಕಲಗದ್ದೆ ಅವರಿಗೆ ರಂಗ ಮಹಾಬಲ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.
ಹಿಮ್ಮೇಳದಲ್ಲಿ ನಾಲ್ಕು ದಶಕಗಳಿಂದ ಅನೇಕ ಹಿರಿಯ, ಕಿರಿಯರನ್ನು ರಂಗಸ್ಥಳದಲ್ಲಿ ಕುಣಿಸುತ್ತಿರುವ ಭಾಗವತ ಕೊಳಗಿ ಕೇಶವ ಹೆಗಡೆ ಹಾಗೂ ಕಡತೋಕ ಜೋಗಿಮನೆ ಗೋಪಾಲಕೃಷ್ಣ ಭಟ್ಟ ಅವರಿಗೆ ಗಾನ ಮಹಾಬಲ ಹೆಸರಿನ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಡಿಸೆಂಬರ್ ಮೊದಲ ವಾರ ಕುಮಟಾದ ಹೊಸಹೆರವಟ್ಟಾದಲ್ಲಿ ಡಿಸೆಂಬರ್ 3 ರಂದು ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಸಾವಿರಾರು ಮಕ್ಕಳಿಗೆ ನಿಸ್ಪ್ರಹವಾಗಿ ವಿದ್ಯಾದಾನ ಮಾಡಿದ್ದ ಶಿಕ್ಷಕ ಭಾಸ್ಕರ ಎಲ್.ಹೆಗಡೆ ಸಂಸ್ಮರಣೆ ಸಮಾರಂಭದಲ್ಲಿ ರಾಮಚಂದ್ರಾಪುರ ಮಠದ ಮಠಾಧೀಶರಾದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಸಾನಿಧ್ಯದಲ್ಲಿ ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಸಲು ಯೋಜಿಸಲಾಗಿದೆ ಮೋಹನ ಭಾಸ್ಕರ ಹೆಗಡೆ ತಿಳಿಸಿದ್ದಾರೆ.
Join The Telegram | Join The WhatsApp |