ಹೊನ್ನಾವರ : ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ವತಿಯಿಂದ ಮಾರ್ಚ್ 16ರಿಂದ 20ರವರೆಗೆ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ-14 ಅನ್ನು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಗುಣವಂತೆಯ ಯಕ್ಷಾಂಗಣದಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮದ ಭಾಗವಾಗಿ ʼಕೆರೆಮನೆ ಶಿವರಾಮ ಹೆಗಡೆ ರಾಷ್ಟ್ರೀಯ ಪ್ರಶಸ್ತಿ ಪ್ರದಾನʼ, ʼಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿ ಪ್ರದಾನʼ, ʼಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಸನ್ಮಾನʼ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಮಾ.16ರಂದು ಸಂಜೆ ಉದ್ಘಾಟನಾ ಸಮಾರಂಭ ನೆರವೇರಲಿದೆ. ವಿಧಾನ ಪರಿಷತ್ ಸಭಾಧ್ಯಕ್ಷ ಬಸವರಾಜ ಹೊರಟ್ಟಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಮೀನುಗಾರಿಕೆ ಹಾಗೂ ಬಂದರು, ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಉದ್ಘಾಟನೆ ನೆರವೇರಿಸಲಿದ್ದಾರೆ. ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಸಮಿತಿ ಕಾರ್ಯಾಧ್ಯಕ್ಷ ಶಿವಮೊಗ್ಗದ ಲಕ್ಷ್ಮೀನಾರಾಯಣ ಕಾಶಿ ಸ್ವಾಗತ ಭಾಷಣ ಮಾಡಲಿದ್ದಾರೆ. ಖ್ಯಾತ ಅಂಕಣಕಾರ ಹಾಗೂ ಕಲಾಚಿಂತಕ ನಾರಾಯಣ ಯಾಜಿ ಸಾಲೇಬೈಲು ಆಶಯ ನುಡಿಗಳನ್ನು ಆಡಲಿದ್ದಾರೆ.
ಕೆರೆಮನೆ ಶಿವರಾಮ ಹೆಗಡೆ ರಾಷ್ಟ್ರೀಯ ಪ್ರಶಸ್ತಿ-2022 ಪ್ರದಾನ :
ಬೆಂಗಳೂರಿನ ಶತಾವಧಾನಿ ಡಾ. ಆರ್. ಗಣೇಶ್ ಅವರಿಗೆ ಕೆರೆಮನೆ ಶಿವರಾಮ ಹೆಗಡೆ ರಾಷ್ಟ್ರೀಯ ಪ್ರಶಸ್ತಿ-2022 ಪ್ರದಾನ ಮಾಡಲಾಗುತ್ತದೆ. ಈ ವೇಳೆ ಅರ್ಥದಾರಿ, ಕಲಾಚಿಂತಕ ದಿವಾಕರ ಹೆಗಡೆ ಕೆರೆಹೊಂಡ ಅವರು ಅಭಿನಂದನಾ ನುಡಿಗಳನ್ನಾಡಲಿದ್ದಾರೆ. ಮುಖ್ಯ ಅಭ್ಯಾಗತರಾಗಿ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ, ಕೇರಳದ ಫೋಕ್ ಲ್ಯಾಂಡ್ ಅಧ್ಯಕ್ಷ ಡಾ. ಜಯರಾಜನ್, ಶಿರಸಿಯ ಯಕ್ಷಗಾನ ಕಲಾ ಪೋಷಕ, ಉದ್ಯಮಿ ಉಪೇಂದ್ರ ಪೈ, ಮೈಸೂರಿನ ರಾಜಶೇಖರ ಆಸ್ಪತ್ರೆ ಹಿರಿಯ ಸರ್ಜನ್, ಬರಹಗಾರ ಡಾ. ಸಂಜಯ ಎಚ್.ಆರ್. ಭಾಗವಹಿಸಲಿದ್ದಾರೆ.
ಸಂಜೆ 4.30ರಿಂದ ಸುಕನ್ಯಾ ರಾಮಗೋಪಾಲ ತಂಡದಿಂದ ʼಸ್ತ್ರೀ ತಾಳ ಘಟ ತರಂಗʼ, ಕೇರಳದ ಫೋಕ್ ಲ್ಯಾಂಡ್ ತಂಡದಿಂದ ಕೇರಳ ನಟನಂ ಮತ್ತು ಮೋಹಿನಿ ಆಟ್ಟಂ ನೃತ್ಯಗಳು ಹಾಗೂ ಬೆಂಗಳೂರಿನ ಲಿಂಗಯ್ಯ ಮತ್ತು ತಂಡದಿಂದ ಬೀಸು ಕಂಸಾಳೆ ನೃತ್ಯ ಪ್ರದರ್ಶನ ನಡೆಯಲಿದೆ.
ಮಾ. 17ರಂದು ಸಂಜೆ 4.30ಕ್ಕೆ ʼಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿ – 2022 ಪ್ರದಾನ ನಡೆಯಲಿದೆ. ಮಂಗಳೂರಿನ ಕಲಾವಿದ, ವಿಮರ್ಶಕ ಡಾ. ಎಂ. ಪ್ರಭಾಕರ ಜೋಶಿ ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ಯಕ್ಷಗಾನ ಕಲಾವಿದ, ಚಿಂತಕ ಹಾಗೂ ಬರಹಗಾರ ಎಂ. ಎಲ್. ಸಾಮಗ ಮಲ್ಪೆ ಅವರನ್ನು ಸನ್ಮಾನಿಸಲಾಗುತ್ತದೆ. ಉಡುಪಿಯ ಉಪನ್ಯಾಸಕ ಹಿಂಡ್ಮನೆ ನಾರಾಯಣ ಹೆಗಡೆ ಅಭಿನಂದನಾ ನುಡಿಗಳನ್ನ ಆಡಲಿದ್ದಾರೆ. ಮುಖ್ಯ ಅಭ್ಯಾಗತರಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಡಾ. ಧರಣಿದೇವಿ, ಉದ್ಯಮಿ, ಕಲಾಪೋಷಕರಾದ ಮಾರಣಕಟ್ಟೆಯ ಕೃಷ್ಣಮೂರ್ತಿ ಮಂಜರು ಹಾಗೂ ಕವಲಕ್ಕಿಯ ವೆಂಕಟರಮಣ ಹೆಗಡೆ, ಮೈಸೂರಿನ ಅಪೋಲೋ ಆಸ್ಪತ್ರೆ ಹಿರಿಯ ಸರ್ಜನ್ ಡಾ. ನಾರಾಯಣ ಹೆಗಡೆ, ಕೆಳಗಿನೂರು ವ್ಯ.ಸೇ.ಸ.ಸಂಘದ ಅಧ್ಯಕ್ಷ ಮುಗಳಿಯ ಗಣಪಯ್ಯ ಗೌಡ ಭಾಗವಹಿಸಲಿದ್ದಾರೆ.
ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಸಮ್ಮಾನ ಪುರಸ್ಕಾರವನ್ನು ರಾಜ್ಯ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ಐರೋಡಿ ಗೋವಿಂದಪ್ಪ, ಹಿರಿಯ ಪ್ರಸಂಗಕರ್ತ, ಬರಹಗಾರ ಕಂದಾವರ ರಘುರಾಮ ಶೆಟ್ಟಿ ಮತ್ತು ಶಿಕ್ಷಣ ತಜ್ಞ, ಬರಹಗಾರ, ತೆಂಕುತಿಟ್ಟು ಹಿತರಕ್ಷಣಾ ವೇದಿಕೆ ಅಧ್ಯಕ್ಷ ಡಾ. ಚಂದ್ರಶೇಖರ ದಾಮ್ಲ ಅವರಿಗೆ ನೀಡಿ ಗೌರವಿಸಲಾಗುತ್ತದೆ.
ಸಂಜೆ 6.30ರಿಂದ ಬೆಂಗಳೂರಿನ ಧಾತು ಗೊಂಬೆಯಾಟ ತಂಡದಿಂದ ಅನುಪಮಾ ಹೊಸಕೆರೆ ನಿರ್ದೇಶನದಲ್ಲಿ “ಅಷ್ಟಾವಕ್ರ” ಗೊಂಬೆಯಾಟ ಪ್ರದರ್ಶನ ನಡೆಯಲಿದೆ. ನಂತರ ಬೆಂಗಳೂರಿನ ಕಲಾಗಂಗೋತ್ರಿ ತಂಟದಿಂದ ʼಮುಖ್ಯಮಂತ್ರಿʼ ನಾಟಕ ಪ್ರದರ್ಶನವಿರಲಿದೆ. ಪ್ರಧಾನ ಪಾತ್ರದಲ್ಲಿ ಡಾ. ಮುಖ್ಯಮಂತ್ರಿ ಚಂದ್ರು ಭಾಗವಹಿಸಲಿದ್ದಾರೆ. ಡಾ. ಬಿ. ವಿ ರಾಜಾರಾಮ ನಿರ್ದೇಶಿಸಿದ್ದು, ಟಿ.ಎಸ್ ಲೋಹಿತಾಶ್ವ ಕನ್ನಡ ರೂಪಾಂತರ ಮಾಡಿದ್ದಾರೆ.
ಮಾರ್ಚ್ ೧೮ರಂದು ಬೆಳಿಗ್ಗೆ ೧೧ರಿಂದ ಕಿನ್ನರ ಮೇಳ ತುಮರಿ ಇವರಿಂದ ಶಾಲಾ ಮಕ್ಕಳಿಗಾಗಿ ‘ಅನ್ಯಾಳ ಡೈರಿ’ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ. ನಾಟಕ ರೂಪ ಎಚ್. ಕೆ. ರಾಮಚಂದ್ರ ಮೂರ್ತಿ ಮತ್ತು ನಿರ್ದೇಶನ
ಸಾಲಿಯಾನ್ ಉಮೇಶ ನಾರಾಯಣ್ ಅವರದ್ದಾಗಿದೆ.
ಸಂಜೆ ೪.೩೦ರಿಂದ “ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಟೋತ್ಸವ ಸಂಮಾನ” ನೆರವೇರಲಿದೆ. ಅಧ್ಯಕ್ಷತೆಯನ್ನು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಡಾ. ನಿರಂಜನ ವಾನಳ್ಳಿ ವಹಿಸುವರು. ಮುಖ್ಯ ಅಭ್ಯಾಗತರಾಗಿ ಕಾರವಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಕೆ.ಎಂ.ರಾಮಚಂದ್ರಪ್ಪ, ಬೆಂಗಳೂರು ಭಾರತೀಯ ವಿದ್ಯಾಭವನದ ಎಚ್.ಎನ್.ಸುರೇಶ, ಕಲಾಚಿಂತಕ-ಅಂಕಣಕಾರ ಬೆಂಗಳೂರಿನ ರಾಜು ಅಡಕಳ್ಳಿ ಉಪಸ್ಥಿತರಿರುವರು. ಹಿರಿಯ ಯಕ್ಷಗಾನ ಕಲಾವಿದ- ಸಾಹಿತಿ ಡಾ.ರಾಮಕೃಷ್ಣ ಗುಂದಿ, ಸಾಹಿತಿ-ಶಿಕ್ಷಣ ತಜ್ಞ ಬೆಂಗಳೂರಿನ ಪ್ರೊ.ಕೆ.ಈ.ರಾಧಾಕೃಷ್ಣ, ಸಾಹಿತಿ-ಕಾದಂಬರಿಕಾರ ಬೆಂಗಳೂರಿನ ಡಾ. ಗಜಾನನ ಶರ್ಮಾ ಹುಕ್ಕಲು ಸನ್ಮಾನಿತಗೊಳ್ಳುವರು.
ಸಂಜೆ ೬.೩೦ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ನಿವೃತ್ತ ಐಎಎಸ್ ಅಧಿಕಾರಿ, ಕಲಾಶ್ರೀ ಪಂ. ಮುದ್ದು ಮೋಹನ್ ಹಿಂದೂಸ್ಥಾನಿ ಶಾಸ್ತ್ರೀಯ ಗಾಯನ ಪ್ರಸ್ತುತ ಪಡಿಸುವರು. ತಬಲಾದಲ್ಲಿ ಪ್ರೊ. ಗೋಪಾಲಕೃಷ್ಣ ಹೆಗಡೆ ಕಲಭಾಗ, ಹಾರ್ಮೋನಿಯಂನಲ್ಲಿ ಭರತ ಹೆಗಡೆ ಸಾಥ್ ನೀಡುವರು. ನಂತರ ಬೆಂಗಳೂರಿನ ನೂಪೂರ ಸಂಸ್ಥೆಯ ಕಲಾವಿದರಿಂದ ಭರತನಾಟ್ಯ ಪ್ರದರ್ಶನ ಜರುಗುವುದು. ಗುರು ಡಾ. ಲಲಿತಾ ಶ್ರೀನಿವಾಸನ್ ನಿರ್ದೇಶಿಸಿದ್ದಾರೆ.
ಮಾರ್ಚ್ ೧೯ರಂದು ಸಂಜೆ ೪.೩೦ ರಿಂದ “ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ರೋತ್ಸವ ಸಂಮಾನ” ಜರುಗಲಿದೆ. ಅಧ್ಯಕ್ಷತೆಯನ್ನು ಉ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎನ್.ವಾಸರೆ ವಹಿಸಲಿದ್ದಾರೆ. ಮುಖ್ಯ ಅಭ್ಯಾಗತರಾಗಿ ಸಿದ್ದಾಪುರ ಟಿ.ಎಂ.ಎಸ್. ಅಧ್ಯಕ್ಷ
ಆರ್.ಎಂ. ಹೆಗಡೆ ಬಾಳೇಸರ, ಮೈಸೂರಿನ ಬರಹಗಾರ- ವಿಮರ್ಶಕ ವಿದ್ವಾನ್ ಗ. ನಾ. ಭಟ್ಟ, ಕೆಳಗಿನೂರು ಗ್ರಾಪಂ ಅಧ್ಯಕ್ಷೆ ಚಿತ್ರಾಕ್ಷಿ ಗೌಡ ನಾಜಗಾರ, ಉದ್ಯಮಿ-ಕಲಾಪೋಷಕ ನಾಗರಾಜ ಭಟ್ಟ ಬೇಂದ್ರೆ ಉಪಸ್ಥಿತರಿರುವರು. ಮಹಾರಾಷ್ಟ್ರ ಸಾವಂತವಾಡಿಯ ಕಲಾ ತಜ್ಞ ವಿಜಯ ಪಾತ್ರಪೇಕರ್, ಬೆಂಗಳೂರಿನ ಶಿಲ್ಪಿಗಳಾದ ಸೂರಾಲು ವೆಂಕಟರಮಣ ಭಟ್ಟ ಮತ್ತು ರತ್ನಾ ಟಿ.ಎಸ್., ಕೃಷಿ-ಪರಿಸರ ತಜ್ಞ ಶಿವಾನಂದ ಕಳವೆ ಸನ್ಮಾನಿತಗೊಳ್ಳುವರು.
ಸಂಜೆ ೬.೩೦ರಿಂದ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹೈದರಾಬಾದಿನ ಅಮೃತಾ ಸಿಂಗ್ ಅವರಿಂದ ಕುಚಿಪುಡಿ, ನಂತರ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಗರ್ತಿಕೆರೆ ರಾಘಣ್ಣ ಇವರ ತಂಡದಿಂದ ಸುಗಮ ಸಂಗೀತ ಇರುವುದು. ತಬಲಾದಲ್ಲಿ ಅನಂತಮೂರ್ತಿ ಶಾಸ್ತ್ರೀ ನೀಲೇಕೇರಿ, ಸಂವಾದಿನಿಯಲ್ಲಿ ಹರಿಶ್ಚಂದ್ರ ನಾಯ್ಕ ಇಡಗುಂಜಿ ಸಾಥ್ ನೀಡುವರು. ಬೆಂಗಳೂರಿನ ಸೋನಾಲಿಕಾ ನೃತ್ಯ ತಂಡದಿಂದ ಓಡಿಸ್ಸಿ ನೃತ್ಯ ಪ್ರದರ್ಶನ ಇರುವುದು.
ಮಾರ್ಚ್ ೨೦ರಂದು ಸಂಜೆ ೪.೩೦ ರಿಂದ “ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ರೋತ್ಸವ ಸಂಮಾನ” ಜರುಗಲಿದೆ. ಅಧ್ಯಕ್ಷತೆಯನ್ನು ಖ್ಯಾತ ಸಾಹಿತಿ- ಕಲಾಪೋಷಕ ಜಿ. ಎಸ್. ಭಟ್ಟ ಮೈಸೂರು ವಹಿಸುವರು. ಮುಖ್ಯ ಅಭ್ಯಾಗತರಾಗಿ ಮಾಜಿ ಶಾಸಕ ಸುನೀಲ್ ನಾಯ್ಕ, ಬಿಜೆಪಿ ಜಿಲ್ಲಾಧ್ಯಕ್ಷ ಎನ್. ಎಸ್. ಹೆಗಡೆ ಕರ್ಕಿ, ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ಪ್ರಾಧ್ಯಾಪಕ ಡಾ. ಶ್ರೀಧರ ಹೆಗಡೆ ಆಗಮಿಸುವರು. ಸಾಗರದ ಕಲಾ ಸಂಘಟಕ ಶುಂಠಿ ಸತ್ಯನಾರಾಯಣ ಭಟ್ಟ, ಸಂಶೋಧಕ-ಸಾಹಿತಿ-ಜಾನಪದ ತಜ್ಞ ಹಂಪಿಯ ಡಾ.ಮೋಹನ ಕುಂಟಾರ್, ಹಂಪಿ, ಸಂಶೋಧಕರು, ಸಾಹಿತಿಗಳು, ಜಾನಪದ ತಜ್ಞರು. ಕಣಿಪುರ ಮಾಸ ಪತ್ರಿಕೆಯ ಸಂಪಾದಕ-ಬರಹಗಾರ ನಾರಾಯಣ ಚಂಬಲ್ತಿಮಾರ ಸನ್ಮಾನಿತಗೊಳ್ಳುವರು. ಮೈಸೂರಿನ ಬರಹಗಾರ-ಸಂಸ್ಕೃತಿ ಚಿಂತಕ ವಿದ್ವಾನ್ ಗ. ನಾ. ಭಟ್ಟ ನಾಟ್ಯೋತ್ಸವ -೧೪ರ ಸಮಗ್ರ ಅವಲೋಕನ ಮಾಡಲಿದ್ದಾರೆ.
ಸಂಜೆ ೬.೩೦ರಿಂದ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹೈದರಾಬಾದಿನ ಮುಕ್ತಿಶ್ರೀ ಅವರು ಕಥಕ್ ನೃತ್ಯ ಪ್ರಸ್ತುತ ಪಡಿಸುವರು. ಗಾಯನದಲ್ಲಿ ನಾಗೇಶ ಅಡಗಾಂವಕರ್, ಪಡಂತದಲ್ಲಿ ಆಯುಶಿ ದೀಕ್ಷಿತ, ತಬಲಾದಲ್ಲಿ ಆಶಯ ಕುಲಕರ್ಣಿ, ಹಾರ್ಮೋನಿಯಂದಲ್ಲಿ ಅಭಿಷೇಕ ಕುಲಕರ್ಣಿ, ಪಕಾವಾಜ್ ಕೃಷ್ಣ ಸಾಲುಂಬೆ ಸಾಥ್ ನೀಡುವರು. ನಂತರ ಶಿವಮೊಗ್ಗದ ನಾಟ್ಯಶ್ರೀ ಕಲಾ ತಂಡದಿಂದ ವಿದ್ವಾನ್ ದತ್ತ ಮೂರ್ತಿ ಭಟ್ಟ ನೇತೃತ್ವದಲ್ಲಿ ಶರಸೇತು ಬಂಧ ಯಕ್ಷಗಾನ ಜರುಗುವುದು.