ಬೆಳಗಾವಿ : ಖಾನಾಪುರ ಶಾಸಕ ವಿಠ್ಠಲ ಹಲಗೇಕರ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಅತ್ಯಂತ ಸರಳ- ಸಜ್ಜನ ಹಾಗೂ ಮೃದು ಮಾತಿನ ವ್ಯಕ್ತಿತ್ವ ಹೊಂದಿರುವ ವಿಠ್ಠಲ ಹಲಗೇಕರ ಅವರನ್ನು ಹತ್ತಿರದಿಂದ ಗಮನಿಸಿದರೆ ಅವರಲ್ಲಿರುವ ಜನಪರ ಕಾಳಜಿ ಎದ್ದು ಕಾಣುತ್ತದೆ.

ರಾಜ್ಯದಲ್ಲೇ ಅತ್ಯಂತ ಹಿಂದುಳಿದಿರುವ ಖಾನಾಪುರ ತಾಲೂಕನ್ನು ಅಭಿವೃದ್ಧಿ ಪಥದತ್ತ ಒಯ್ಯಬೇಕು ಎಂಬ ಕನಸು ಕಂಡಿರುವ ವಿಠ್ಠಲ ಹಲಗೇಕರ ಅವರು, ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ ಶಾಸಕರಾಗಿ ಸಾಕಷ್ಟು ಕೆಲಸ ಮಾಡಿ ಇಡೀ ತಾಲೂಕಿಗೆ ತಮ್ಮದೇ ಆದ ಕೊಡುಗೆ ನೀಡುವಲ್ಲಿ ಕಾರಣರಾಗಿದ್ದಾರೆ.

ಡಿಸೆಂಬರ್ ನಲ್ಲಿ ನಡೆದ ಬೆಳಗಾವಿ ವಿಧಾನ ಮಂಡಲದ ಅಧಿವೇಶನದಲ್ಲಿ ಈ ಬಗ್ಗೆ ರಾಜ್ಯ ಸರಕಾರಕ್ಕೆ ವಿಶೇಷ ಮನವಿ ಮಾಡಿಕೊಂಡಿದ್ದರು. ಖಾನಾಪುರ ತಾಲೂಕು ರಾಜ್ಯದಲ್ಲಿಯೇ ಅತ್ಯಂತ ಹಿಂದುಳಿದ ತಾಲೂಕು ಎಂದು ಗುರುತಿಸಿಕೊಂಡಿದೆ. ತಾಲೂಕಿನ ಸಮಗ್ರ ಅಭಿವೃದ್ಧಿಗಾಗಿ ರಾಜ್ಯ ಸರಕಾರ ತಕ್ಷಣ 500 ಕೋಟಿಗಳನ್ನು ಬಿಡುಗಡೆ ಮಾಡುವ ಮೂಲಕ ತಾಲೂಕಿನ ಸರ್ವಾಂಗೀಣ ಪ್ರಗತಿಗೆ ನಾಂದಿ ಹಾಡಬೇಕು ಎಂದು ಅವರು ಹಕ್ಕೋತ್ತಾಯ ಮಂಡಿಸಿದ್ದರು.

 


ಮರಾಠಿ ಭಾಷಿಕರಾದರು ಅವರು ಕನ್ನಡ ಹಾಗೂ ಮರಾಠಿ ಭಾಷೆಗಳಿಗೆ ಜೋತು ಬೀಳದೆ ಉಭಯ ಭಾಷಿಕಾರ ನಡುವೆ ಸ್ನೇಹಸೇತುವಿನಂತೆ ಗುರುತಿಸಿಕೊಂಡಿದ್ದಾರೆ. ಮರಾಠಿ ಭಾಷಿಕರ ಜೊತೆ ಮರಾಠಿಯಲ್ಲಿ, ಕನ್ನಡ ಭಾಷಿಕರ ಜೊತೆ ಕನ್ನಡದಲ್ಲಿ ಮಾತನಾಡುವ ಮೂಲಕ ಎಲ್ಲರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಳಗಾವಿ ವಿಧಾನ ಮಂಡಲದ ಅಧಿವೇಶನದಲ್ಲಿ ಅವರು ಇಡೀ ಸರಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಕನ್ನಡದಲ್ಲಿ ಮಾತನಾಡಿ ಎಲ್ಲರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿರುವುದು ವಿಶೇಷವಾಗಿದೆ. ಖಾನಾಪುರ ತಾಲೂಕಿನ ಗ್ರಾಮಾಂತರ ಪ್ರದೇಶದಿಂದ ಬಂದಿರುವ ವಿಠ್ಠಲ ಹಲಗೇಕರ ಅವರು ಹುಟ್ಟು ಹೋರಾಟಗಾರರು. ರೈತಾಪಿ ಜನರ ದುಃಖ: ದುಃಮಾನಗಳನ್ನು ತೀರಾ ಹತ್ತಿರದಿಂದ ಕಂಡಿರುವ ಅವರು ಈಗ ಶಾಸಕರಾಗಿದ್ದಾರೆ. ಶಾಸಕರಾಗುವ ಅವರ ಹಾದಿ ಹೂವಿನ ಹಾಸಿಗೆ ಆಗಿರಲಿಲ್ಲ. ಅತ್ಯಂತ ಕಠಿಣ ಪರಿಶ್ರಮದಿಂದ ಮೇಲೆ ಬಂದಿರುವ ಅವರು ಕಳೆದ ಒಂದೂವರೆ ವರ್ಷಗಳಿಂದ ಆಹರ್ನಿಶಿಯಾಗಿ ಖಾನಾಪುರ ತಾಲೂಕಿನ ಜನರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ.

 

ಖಾನಾಪುರ ತಾಲೂಕು ದಟ್ಟ ಅರಣ್ಯಗಳನ್ನು ಹೊಂದಿರುವ ಪ್ರದೇಶ. ಅದರಲ್ಲೂ ಪಶ್ಚಿಮ ಘಟ್ಟಗಳಿಂದ ಆವೃತವಾಗಿರುವ ಖಾನಾಪುರ ತಾಲೂಕು ಸಮಸ್ಯೆಗಳ ಆಗರವಾಗಿದೆ. ಹೆಚ್ಚಿನ ಗ್ರಾಮಗಳು ಕಾಡಿನ ಒಳಗೆ ಇವೆ. ಅಲ್ಲಿನ ಸಮಸ್ಯೆಗಳು ಅಗಾಧ ಪ್ರಮಾಣದಲ್ಲಿವೆ. ಮಳೆಗಾಲದಲಂತೂ ಆ ಪ್ರದೇಶದಲ್ಲಿರುವ ಜನರ ಸಮಸ್ಯೆ ಹೇಳುತೀರದು. ಆರೋಗ್ಯ, ಆಹಾರ ಸೇರಿದಂತೆ ಹತ್ತು ಹಲವಾರು ಸಮಸ್ಯೆಗಳನ್ನು ಅಲ್ಲಿನ ಜನರು ಎದುರಿಸುತ್ತಿದ್ದಾರೆ. ಅವರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸದಾ ಶ್ರಮಿಸುತ್ತಿರುವುದು ಜನರ ಪಾಲಿಗೆ ಹೊಸ ಆಶಾಕಿರಣದಂತೆ ಅವರು ಗೋಚರಿಸುತ್ತಿದ್ದಾರೆ. ಖಾನಾಪುರದ ಸಮಗ್ರ ಅಭಿವೃದ್ಧಿ ನಿಟ್ಟಿನಲ್ಲಿ ಸೂಕ್ತ ವೈದ್ಯಕೀಯ, ಶಿಕ್ಷಣ ವ್ಯವಸ್ಥೆಗಳನ್ನು ನೀಡುವ ನಿಟ್ಟಿನಲ್ಲಿ ಪಣತೊಟ್ಟಿದ್ದಾರೆ. ತಮ್ಮ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ಅವರು ರಾಜ್ಯ ಸರಕಾರದ ಮೇಲೆ ಸತತವಾಗಿ ಒತ್ತಡ ಹೇರುತ್ತಿರುವುದು ಅವರ ಜನಪರ ಕಾಳಜಿಗೆ ಹಿಡಿದ ಕೈಗನ್ನಡಿಯೆನ್ನಬಹುದು.

ಕಳೆದ 3 ದಶಕಗಳಿಂದ ಇವರು ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಖಾನಾಪುರದ ಶಾಸಕರಾಗಿ ಕ್ಷೇತ್ರಕ್ಕೆ ಅಭಿವೃದ್ಧಿ ಕೆಲಸಗಳನ್ನು ಮಾಡಿಕೊಡುವ ಹಂಬಲ ಹೊತ್ತರೂ ಆರಂಭಿಕ ಚುನಾವಣೆಗಳಲ್ಲಿ ಅವರು ಹಿನ್ನಡೆ ಅನುಭವಿಸಬೇಕಾಯಿತು. ಇದೇ ಮೊದಲ ಬಾರಿಗೆ ಶಾಸಕರಾಗಿರುವ ಅವರು, ತಮ್ಮ ಪಕ್ಷದ ಸರಕಾರ ಇಲ್ಲವಾದರೂ ಸರಕಾರದ ಮೇಲೆ ಒತ್ತಡ ಹೇರಿ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಕಾಡಂಚಿನ ಗ್ರಾಮಗಳ ಜನತೆ ಮುಖ್ಯವಾಗಿ ಇತರ ಊರುಗಳನ್ನು ಸಂಪರ್ಕಿಸುವ ದೆಸೆಯಲ್ಲಿ ಸಮಸ್ಯೆ ಎದುರಿಸುತ್ತಿದ್ದರು. ಅವರಿಗೆ ಅನುಕೂಲ ಒದಗಿಸಲು ಕಿರು ಸೇತುವೆಗಳನ್ನು ನಿರ್ಮಿಸಿ ಕೊಟ್ಟಿದ್ದಾರೆ. ನೀರಾವರಿ ಸಮಸ್ಯೆಗಳಿಗೆ ಸ್ಪಂದಿಸಿ ನೀರಾವರಿ ಯೋಜನೆಗಳನ್ನು ತಂದುಕೊಟ್ಟಿದ್ದಾರೆ. ಅರಣ್ಯದಂಚಿನ ಜನ ಹೆಚ್ಚಾಗಿ ಹುಲಿ, ಕರಡಿ, ಆನೆ ಹಾವಳಿಯಿಂದ ತತ್ತರಿಸುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಕರಡಿ ಹಾವಳಿಗೆ ಖಾನಾಪುರ ತಾಲೂಕಿನ ರೈತರು ಹೆಚ್ಚಿನ ಪ್ರಮಾಣದಲ್ಲಿ ಸಿಲುಕುತ್ತಿದ್ದಾರೆ. ಕೆಲವರು ಮಾರಣಾಂತಿಕ ಗಾಯಗೊಂಡು ಜೀವನವಿಡೀ ಕೊಳೆಯುವಂತಾಗಿದೆ. ಅವರಿಗೆ ಸೂಕ್ತ ಚಿಕಿತ್ಸೆ ಹಾಗೂ ಸರಕಾರದ ಮಟ್ಟದಲ್ಲಿ ಪರಿಹಾರ ಒದಗಿಸಲು ವಿಠ್ಠಲ ಹಲಗೇಕರ ಅವರು ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದಾರೆ.

ಕ್ಷೇತ್ರದ ಜನರು ತಮ್ಮ ಅಚ್ಚುಮೆಚ್ಚಿನ ಶಾಸಕರು ತಮ್ಮ ಮನೆಗಳಲ್ಲಿ ನಡೆಯುವ ಮದುವೆ ಸೇರಿದಂತೆ ಇತರ ವಿಶೇಷ ಕಾರ್ಯಕ್ರಮಗಳಲ್ಲಿ ಭಾಗವಹಿಸುವಲ್ಲಿ ಎಂದು ಪ್ರೀತಿಯಿಂದ ಆಹ್ವಾನಿಸುತ್ತಾರೆ. ಶಾಸಕರು ಅಂತಹ ಕರೆಯೋಲೆಗಳಿಗೆ ಮನ್ನಣೆ ನೀಡಿ ಜನರು ಆಹ್ವಾನಿಸುವ ಪ್ರತಿಯೊಂದು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಜನರ ಮನ ಗೆಲ್ಲುತ್ತಿರುವುದು ಅವರ ಸರಳತೆಗೆ ಸಾಕ್ಷಿ ಎನ್ನಬಹುದು.

ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ವಿಠ್ಠಲ ಹಲಗೇಕರ ಅವರು ಇಡೀ ತಾಲೂಕಿನ ಜನತೆಗೆ ಅನುಕೂಲವಾಗುವ ನಿಟ್ಟಿನಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡು ಜನ ಸೇವೆಗೆ ಮುಂದಾಗಿದ್ದಾರೆ. ಈ ಮೂಲಕ ತಮ್ಮ ಹುಟ್ಟುಹಬ್ಬವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲು ಮುಂದಾಗಿರುವುದು ಈ ಸಲದ ವಿಶೇಷವಾಗಿದೆ.

ಒಟ್ಟಾರೆ, ಚೊಚ್ಚಲ ಸಲ ಖಾನಾಪುರ ಶಾಸಕರಾಗಿ ಇಡೀ ಕ್ಷೇತ್ರದ ಅಭಿವೃದ್ಧಿಗೆ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಿಕೊಟ್ಟಿರುವ ಅವರ ಸೇವೆ ಜನರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಮುಂದಿನ ದಿನಗಳಲ್ಲೂ ಅವರು ಕ್ಷೇತ್ರಕ್ಕೆ ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಿಕೊಡುವ ಮೂಲಕ ಖಾನಾಪುರದ ಅಭಿವೃದ್ಧಿಯ ಹರಿಕಾರರಾಗಿ ಅವರು ಸೇವೆ ಸಲ್ಲಿಸುವಂತಾಗಲಿ ಎನ್ನುವುದು ಅವರ ಅಭಿಮಾನಿಗಳ ಹಾರೈಕೆ.