ಪಾಲ್ಘರ್: ದೇಶದಾದ್ಯಂತ 20ಕ್ಕೂ ಹೆಚ್ಚು ಮಹಿಳೆಯರನ್ನು ಮದುವೆಯಾಗಿ ಅವರ ಬೆಲೆಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗುತ್ತಿದ್ದ 43 ವರ್ಷದ ವ್ಯಕ್ತಿಯನ್ನು ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಲ್ಲ ಸೋಪಾರ ಮೂಲದ ಮಹಿಳೆ ನೀಡಿದ ದೂರಿನ ಮೇರೆಗೆ ಎಂಬಿವಿವಿ ಪೊಲೀಸರು ತನಿಖೆ ನಡೆಸಿದ್ದು, ಜುಲೈ 23 ರಂದು ಥಾಣೆ ಜಿಲ್ಲೆಯ ಕಲ್ಯಾಣದಿಂದ ಆರೋಪಿ ಫಿರೋಜ್ ನಿಯಾಜ್ ಶೇಖ್‌ನನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದೂರುದಾರರ ಪ್ರಕಾರ, ಆರೋಪಿಯು ಮ್ಯಾಟ್ರಿಮೋನಿಯಲ್ ವೆಬ್‌ಸೈಟ್ ಮೂಲಕ ಮಹಿಳೆಯೊಂದಿಗೆ ಸ್ನೇಹ ಬೆಳೆಸಿ ಮದುವೆಯಾಗಿದ್ದಾನೆ ಎಂದು ಹಿರಿಯ ಇನ್ಸ್‌ಪೆಕ್ಟರ್ ವಿಜಯಸಿಂಗ್ ಭಾಗಲ್ ತಿಳಿಸಿದ್ದಾರೆ.
ಶೇಖ್ 2023ರ ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಮಹಿಳೆಯಿಂದ ₹ 6.5 ಲಕ್ಷ ಮೌಲ್ಯದ ನಗದು, ಲ್ಯಾಪ್‌ಟಾಪ್ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಂಡು ಪರಾರಿಯಾಗಿದ್ದ. ಭಾರತೀಯ ದಂಡ ಸಂಹಿತೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅವರು ಹೇಳಿದರು.ಪೊಲೀಸರು ಆರೋಪಿಯನ್ನು ಹಿಡಿದಿದ್ದು ಹೇಗೆ?
ಪೊಲೀಸರು ಮೊದಲು ತನಿಖೆಯನ್ನು ಪ್ರಾರಂಭಿಸಿದಾಗ, ಆರೋಪಿಯ ಯಾವುದೇ ಫೋಟೋಗಳು ಅಥವಾ ಸಂಪರ್ಕ ಸಂಖ್ಯೆಗಳು ಇರಲಿಲ್ಲ, ಏಕೆಂದರೆ ಆತ ತನ್ನ ಫೋನ್ ಸಂಖ್ಯೆಯನ್ನು ಆಗಾಗ್ಗೆ ಬದಲಾಯಿಸುತ್ತಿದ್ದ. ಆದರೆ, ಪೊಲೀಸರು ಆರೋಪಿಯ ತಂತ್ರಗಾರಿಕೆಯನ್ನೇ ಬಳಸಿ ಆತನನ್ನು ಬಂಧಿಸಿದ್ದಾರೆ.
ಅಧಿಕಾರಿಗಳ ಪ್ರಕಾರ, ಅವರು ಆನ್‌ಲೈನ್ ಪ್ಲಾಟ್‌ಫಾರ್ಮ್‌ನಲ್ಲಿ ನಕಲಿ ಮಹಿಳೆಯ ಪ್ರೊಫೈಲ್ ಮಾಡಿ ಶೇಖ್‌ನನ್ನು ಸಂಪರ್ಕಿಸಿದ್ದಾರೆ. ಆತನೊಂದಿಗೆ ಆನ್‌ಲೈನ್ ಸಂಭಾಷಣೆ ನಡೆಸಿದ ನಂತರ, ಪೊಲೀಸರು ಮಹಿಳೆ ಹೆಸರಲ್ಲಿ ಆತನನ್ನು ಸಂಪರ್ಕಿಸಿ ಕಲ್ಯಾಣದಲ್ಲಿ ಭೇಟಿಯಾಗುವಂತೆ ತಿಳಿಸಿದ್ದಾರೆ. ನಂತರ ಅಲ್ಲಿಗೆ ಬಂದ ಆತನನ್ನು ಬಂಧಿಸಿದ್ದಾರೆ.ಆರೋಪಿಯಿಂದ ಮೂರು ಲಕ್ಷ ರೂಪಾಯಿ ವಶಪಡಿಸಿಕೊಂಡಿದ್ದಾರೆ. ಅಲ್ಲದೆ, ಆತನಿಂದ ಮಹಿಳೆಯರ ಎಟಿಎಂಗಳು, ಚೆಕ್‌ಬುಕ್‌ಗಳು, ಆರು ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ದಾಖಲೆಗಳು ಹಾಗೂ ಅವರ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಶನಿವಾರ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಎರಡು ದಿನಗಳ ಕಾಲ ಕಸ್ಟಡಿಗೆ ನೀಡಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ.
ಶೇಖ್ ಮ್ಯಾಟ್ರಿಮೋನಿಯಲ್ ಸೈಟ್‌ಗಳ ಮೂಲಕ ವಿಚ್ಛೇದಿತರು ಮತ್ತು ವಿಧವೆಯರನ್ನು ಗುರಿಯಾಗಿಸಿ ಸಂಪರ್ಕಿಸುತ್ತಿದ್ದ, ನಂತರ ಅವರನ್ನು ಮದುವೆಯಾಗಿ ಅವರ ಬೆಲೆಬಾಳುವ ವಸ್ತುಗಳನ್ನು ದೋಚಿ ವಂಚಿಸುತ್ತಿದ್ದ ಎಂಬುದು ತನಿಖೆಯಿಂದ ತಿಳಿದುಬಂದಿದೆ ಎಂದು ಅವರು ಹೇಳಿದರು.
ಆರೋಪಿಯು ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರ ಪ್ರದೇಶ, ದೆಹಲಿ ಮತ್ತು ಗುಜರಾತ್ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ 2015 ರಿಂದ 20 ಕ್ಕೂ ಹೆಚ್ಚು ಮಹಿಳೆಯರಿಗೆ ವಂಚಿಸಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ.