ಇಂಫಾಲ: ಬಿರೇನ್‌ ಸಿಂಗ್‌ ರಾಜೀನಾಮೆಯಿಂದ ತೆರವಾದ ಮಣಿಪುರದ ಮುಖ್ಯಮಂತ್ರಿ ಸ್ಥಾನಕ್ಕೆ ವೈ. ಖೇಮಚಂದ್‌ ಸಿಂಗ್‌ ಹೆಸರು ಪ್ರಮುಖವಾಗಿ ಕೇಳಿಬಂದಿದೆ.ಜನಾಂಗೀಯ ಸಂಘರ್ಷದಿಂದ ಬೇಯುತ್ತಿರುವ ರಾಜ್ಯದಲ್ಲಿ ಶಾಂತಿ ಪುನರ್‌ ಸ್ಥಾಪಿಸಲು ಕುಕಿ ಹಾಗೂ ಮೈತೇಯಿ ಸಮುದಾಯ ಒಪ್ಪುವ ವ್ಯಕ್ತಿಯನ್ನು ಆಯ್ಕೆ ಮಾಡುವ ಸವಾಲನ್ನು ಬಿಜೆಪಿ ಎದುರಿಸುತ್ತಿದೆ. ಭಾನುವಾರ ಬಿರೇನ್‌ ಸಿಂಗ್‌ ರಾಜೀನಾಮೆ ನೀಡಿದ ಬಳಿಕ ಸೋಮವಾರ ರಾಜ್ಯದ ಬಿಜೆಪಿ ಮುಖಂಡರು, ಸಂಸದರು, ಶಾಸಕರೊಂದಿಗೆ ಗೌಪ್ಯ ಸಭೆ ನಡೆಸಿರುವ ರಾಜ್ಯ ಬಿಜೆಪಿ ಉಸ್ತುವಾರಿ ಸಂಬಿತ್‌ ಪಾತ್ರ ಅವರು, ಸರ್ವಸಮ್ಮತ ಅಭ್ಯರ್ಥಿ ಆಯ್ಕೆ ಮಾಡಲು ಕಸರತ್ತು ನಡೆಸಿದ್ದಾರೆ.ವಿಧಾನಸಭೆ ಸ್ಪೀಕರ್‌ ತೊಕ್ಚಂ ಸತ್ಯಬ್ರಾತ, ಬಿರೇನ್‌ ಸಂಪುಟದಲ್ಲಿ ಸಚಿವರಾಗಿದ್ದ ಖೇಮಚಂದ್‌ ಸಿಂಗ್‌, ತೌನೋಜಂ ಬಸಂತ್‌ ಕುಮಾರ್‌, ಶಾಸಕ ರಾಧೇಶ್ಯಾಮ್‌ ಅವರೊಂದಿಗೆ ಪ್ರತ್ಯೇಕ ಸಭೆ ನಡೆಸಿರುವ ಸಂಬಿತ್‌ ಪಾತ್ರ, ಮುಂದಿನ ರಾಜಕೀಯ ಕಾರ್ಯತಂತ್ರ ಕುರಿತು ಚರ್ಚೆ ನಡೆಸಿದ್ದಾರೆ.

ಬಿಜೆಪಿ ಶಾಸಕರ ಸಭೆ ಕರೆದು ಮುಂದಿನ ಮುಖ್ಯಮಂತ್ರಿ ಆಯ್ಕೆ ಮಾಡಲು ಚಿಂತನೆ ನಡೆಸಲಾಗಿದೆ.’ರಾಜ್ಯದ ಸಿಎಂ ಆಯ್ಕೆ ವಿಚಾರದಲ್ಲಿ ಹೈಕಮಾಂಡ್‌ ತೆಗೆದುಕೊಳ್ಳುವ ನಿರ್ಧಾರಕ್ಕೆ ಶಾಸಕರು ಬದ್ಧರಾಗಿರುತ್ತಾರೆ. ರಾಜ್ಯದಲ್ಲಿ ಎರಡು ವರ್ಷದಿಂದ ನಡೆಯುತ್ತಿರುವ ಸಂಘರ್ಷ ತಣಿಸುವುದು ನಮ್ಮ ಮುಂದಿನ ಗುರಿ,’ ಎಂದು ಸಂಭಾವ್ಯ ಸಿಎಂ ಅಭ್ಯರ್ಥಿ ಹಾಗೂ ಶಾಸಕ ಖೇಮಚಂದ್‌ ಸಿಂಗ್‌ ಹೇಳಿದ್ದಾರೆ.
ಬಿರೇನ್‌ ಸಿಂಗ್‌ ರಾಜೀನಾಮೆ ಬಳಿಕ ಪರಿಸ್ಥಿತಿ ಮೇಲೆ ಹದ್ದಿನ ಕಣ್ಣಿಡಲು ರಾಜ್ಯದಲ್ಲಿ ಹೈ ಅಲರ್ಟ್‌ ಘೋಷಣೆ ಮಾಡಲಾಗಿದೆ. ರಾಜಧಾನಿ ಇಂಫಾಲ ಸೇರಿದಂತೆ ರಾಜ್ಯದೆಲ್ಲೆಡೆ ಪೊಲೀಸ್‌ ಭದ್ರತೆ ಹೆಚ್ಚಿಸಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ಬಿರೇನ್‌ ಸಿಂಗ್‌ ಸರಕಾರಕ್ಕೆ ನೀಡಿದ್ದ ಬೆಂಬಲ ಹಿಂಪಡೆದಿದ್ದ ನ್ಯಾಷನಲ್‌ ಪೀಪಲ್ಸ್‌ ಪಕ್ಷ (ಎನ್‌ಪಿಪಿ) ಸಿಂಗ್‌ ರಾಜೀನಾಮೆ ಬೆನ್ನಲ್ಲೆ ಮತ್ತೆ ಎನ್‌ಡಿಎಗೆ ಬೆಂಬಲ ನೀಡುವುದಾಗಿ ಘೋಷಣೆ ಮಾಡಿದೆ. ಸಿಂಗ್‌ ರಾಜೀನಾಮೆ ಸ್ವಾಗತಿಸಿರುವ ಪಕ್ಷದ ಮುಖಂಡ ಶೇಖ್‌ ನೂರುಲ್ಲಹಸನ್‌, ‘ಮಣಿಪುರದಲ್ಲಿ ಮರಳಿ ಶಾಂತಿ ಸ್ಥಾಪನೆ ಮಾಡುವ ಯಾವುದೇ ಕ್ರಮ ಬೆಂಬಲಿಸುವೆ,’ ಎಂದು ಹೇಳಿದ್ದಾರೆ.’ಕಾಂಗ್ರೆಸ್‌ನ ಅವಿಶ್ವಾಸ ನಿರ್ಣಯ ಮಂಡನೆಗೆ ಹೆದರಿ ಬಿರೇನ್‌ ಸಿಂಗ್‌ ರಾಜೀನಾಮೆ ನೀಡಿದ್ದಾರೆ.