ಬೆಳಗಾವಿ : ಬೆಳಗಾವಿಯ ಖ್ಯಾತ ಸಾಮಾಜಿಕ ಕಾರ್ಯಕರ್ತ ಕಿರಣ ಜಾಧವ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಸ್ವಾಮಿ ವಿವೇಕಾನಂದರ ಜನುಮದಿನದಂದೇ ಜನಿಸಿರುವ ಕಿರಣ್ ಜಾಧವ ಅವರಿಗೆ ಮೊದಲಿನಿಂದಲೂ ಸಾಮಾಜಿಕ ಸೇವೆಗಳ ಮೇಲೆ ಎಲ್ಲಿದೆ ಕಳಕಳಿ. ಸ್ವಾಮಿ ವಿವೇಕಾನಂದರ ಆದರ್ಶಗಳ ಪರಿಪಾಲನೆಯನ್ನು ಚಾಚು ತಪ್ಪದೇ ಪಾಲಿಸುತ್ತಾ ಬಂದಿರುವ ಅವರು ತಮಗಿರುವ ಸಾಮಾಜಿಕ ಕಳಕಳಿ ಹಾಗೂ ಬದ್ಧತೆಯನ್ನು ಈಗಾಗಲೇ ಬೆಳಗಾವಿ ಜನತೆಗೆ ತೋರಿಸಿ ಕೊಟ್ಟಿದ್ದಾರೆ.

ಸಕಲ ಮರಾಠಾ ಸಮಾಜದ ರಾಜ್ಯ ನಾಯಕರಾಗಿ ಗುರುತಿಸಿಕೊಂಡಿರುವ ಅವರು ಮರಾಠ ಸಮಾಜಕ್ಕೆ ಬೇಕಾಗಿರುವ ಮೀಸಲಾತಿ ಸೇರಿದಂತೆ ಇತರ ಸೌಲಭ್ಯಗಳಿಗಾಗಿ ನಿರಂತರವಾಗಿ ಹೋರಾಡುತ್ತಾ ಬಂದಿದ್ದಾರೆ. ಮರಾಠಾ ಸಮಾಜದ ಸ್ವಾಮೀಜಿಯಾಗಿರುವ ಬೆಂಗಳೂರಿನ ಗೋಸಾಯಿ ಮಠದ ಶ್ರೀ ಮಂಜುನಾಥ ಸ್ವಾಮೀಜಿ ಅವರ ಜೊತೆ ಅತ್ಯಂತ ನಿಕಟ ಸಂಪರ್ಕ ಹೊಂದಿರುವ ಕಿರಣ ಜಾಧವ ಅವರು ಮರಾಠಾ ಸಮಾಜದ ಆಗು-ಹೋಗುಗಳಿಗೆ ಸದಾ ಬೆನ್ನೆಲುಬಾಗಿ ನಿಂತಿದ್ದಾರೆ. ಈ ಮೂಲಕ ಸಮಾಜಕ್ಕೆ ನ್ಯಾಯಯುತವಾಗಿ ಸಿಗಬೇಕಾದ ರಾಜಕೀಯ, ಆರ್ಥಿಕ, ಶೈಕ್ಷಣಿಕ ಸೌಲಭ್ಯಗಳನ್ನು ನೀಡುವಲ್ಲಿ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ.

ಬೆಳಗಾವಿ ಮಹಾನಗರದ ಜನತೆಗೆ ಅಗತ್ಯವಾದ ಮೂಲಭೂತ ಸೌಲಭ್ಯ ನೀಡುವ ನಿಟ್ಟಿನಲ್ಲೂ ತಮ್ಮ “ವಿಮಲ್ ಫೌಂಡೇಶನ್” ಮೂಲಕ ಅವರು ಸೇವಾ ಹಸ್ತ ಚಾಚಿದ್ದಾರೆ. ಕುಡಿಯುವ ನೀರು, ವೈದ್ಯಕೀಯ ನೆರವು ಸೇರಿದಂತೆ ಹತ್ತು ಹಲವು ಸಾಮಾಜಿಕ ಕಾರ್ಯಗಳ ಮೂಲಕ ಜನರಿಗೆ ನೆರವಾಗುತ್ತಿದ್ದಾರೆ. ಜೊತೆಗೆ ಶಾಲಾ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಲ್ಲೂ ಅವರು ಸಹಾಯ ನೀಡಿ ಮಕ್ಕಳನ್ನು ಪ್ರೋತ್ಸಾಹಿಸುತ್ತಿದ್ದಾರೆ.

‌ ಮಕ್ಕಳಿಗೆ ಬಹುದೊಡ್ಡ ರೀತಿಯಲ್ಲಿ ಚಿತ್ರಕಲಾ ಶಿಬಿರವನ್ನು ಎರಡು ವರ್ಷದ ಹಿಂದೆ ಆಯೋಜಿಸಿ ಗಮನ ಸೆಳೆದಿದ್ದರು. ನೆರವು ಯಾಚಿಸಿ ಬರುವ ಬಡವರು ಹಾಗೂ ಆರ್ಥಿಕವಾಗಿ ಅಶಕ್ತರಿಗೆ ಸಹಾಯ ನೀಡುವುದು ಕಿರಣ ಜಾಧವ ಅವರ ಸೇವಾ ಕಾರ್ಯಗಳಲ್ಲೊಂದು. ಈ ಮೂಲಕ ಅವರು ತಮ್ಮ ಸೇವಾ ಕಾರ್ಯಗಳನ್ನು ಜನತೆಗೆ ಸಾಧ್ಯವಾದಷ್ಟು ಪ್ರಮಾಣದಲ್ಲಿ ಮಾಡುತ್ತಿದ್ದಾರೆ.

ಜನರ ನಾಡಿಮಿಡಿತವನ್ನು ಅರಿತಿರುವ ಅವರು ಒಬ್ಬ ನೈಜ ಸಮಾಜ ಸೇವಕನಿಗೆ ಇರಬೇಕಾದ ಎಲ್ಲಾ ಗುಣಗಳನ್ನು ಬಾಲ್ಯದಿಂದಲೇ ಅಳವಡಿಸಿಕೊಂಡಿರುವುದು ವಿಶೇಷವಾಗಿದೆ. ಜನಪ್ರತಿನಿಧಿಯಾಗಿ ಜನತೆಗೆ ಸೇವೆ ಸಲ್ಲಿಸಬೇಕು ಎಂಬ ಆದಮ್ಯ ಆಸೆಯಿಂದ ಅವರು ಬೆಳಗಾವಿ ಉತ್ತರ ಮತಕ್ಷೇತ್ರದಿಂದ ಚುನಾವಣೆಗೆ ನಿಂತು ಸೋಲು ಅನುಭವಿಸಿದರು. ಆನಂತರ ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲೂ ಸ್ಪರ್ಧಿಸಲು ಮುಂದಾಗಿದ್ದರೂ ಹಾಲಿ ಶಾಸಕರಿಗೆ ಟಿಕೆಟ್ ನೀಡಬೇಕು ಎಂಬ ಅನಿವಾರ್ಯತೆಯಿಂದಾಗಿ ಟಿಕೆಟ್ ವಂಚಿತರಾಗಬೇಕಾಯಿತು. ಆದರೆ, ಅವರು ಬಿಜೆಪಿ ಜೊತೆ ಇರುವ ತಮ್ಮ ನಿಷ್ಠೆಯನ್ನು ಯಾವ ಕಾರಣಕ್ಕೂ ಬಿಡಲಿಲ್ಲ. ಚುನಾವಣೆಯ ಸೋಲು ಹಾಗೂ ಟಿಕೆಟ್ ಸಿಗದೇ ಇದ್ದರೂ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಸತತ ಪ್ರಯತ್ನದ ಮೂಲಕ ಅಭ್ಯರ್ಥಿಗಳ ಗೆಲುವಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಜೊತೆಗೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚಿನ ಮತ ಬರಲು ಶಕ್ತಿಮೀರಿ ಪ್ರಯತ್ನಿಸಿದ್ದು ಅವರಿಗೆ ಮಾತೃ ಪಕ್ಷದ ಮೇಲೆ ಇರುವ ಪ್ರೀತಿ ಹಾಗೂ ನಿಷ್ಠೆಗೆ ಸಾಕ್ಷಿಯಾಗಿದೆ.

ಬಿಜೆಪಿ ತಮಗೆ ನೀಡಿರುವ ಜವಾಬ್ದಾರಿಗಳನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿಕೊಂಡು ಬಂದಿರುವ ಅವರಿಗೆ ಪಕ್ಷ ಈಗಾಗಲೇ ಕೆಲ ಹುದ್ದೆಗಳನ್ನು ನೀಡಿದೆ. ಜೊತೆಗೆ ಮರಾಠಾ ಸಮುದಾಯದ ಪ್ರಬಲ ನಾಯಕರಾಗಿ ಹೊರಹೊಮ್ಮಿದ್ದು, ಮುಂದಿನ ದಿನಗಳಲ್ಲಿ ರಾಜಕೀಯ ಹಾಗೂ ಮರಾಠಾ ಸಮಾಜದಿಂದ ಹೆಚ್ಚಿನ ಜವಾಬ್ದಾರಿಗಳು ಅವರನ್ನು ಹುಡುಕಿಕೊಂಡು ಬರುವುದರಲ್ಲಿ ಯಾವ ಸಂದೇಹವೂ ಇಲ್ಲ.

ಜನರ ಪ್ರೀತಿ ಗಳಿಸಿರುವ ಕಿರಣ ಜಾಧವ ಅವರು ಜನರೊಂದಿಗೆ ಅತ್ಯಂತ ಸ್ನೇಹಪೂರ್ವಕ ನಂಟು ಇಟ್ಟುಕೊಂಡಿದ್ದಾರೆ. ಬರುವ ದಿನಗಳಲ್ಲಿ ಪಕ್ಷ ಹಾಗೂ ಮರಾಠಾ ಸಮಾಜ ಅವರಿಗೆ ಇನ್ನಷ್ಟು ಜವಾಬ್ದಾರಿಗಳನ್ನು ನೀಡಲಿ ಎನ್ನುವುದು ಅವರ ಅಭಿಮಾನಿಗಳ ಒತ್ತಾಸೆಯಾಗಿದೆ.