ಬೆಳಗಾವಿ: ಪ್ರತಿಯೊಬ್ಬರ ಜೀವನದಲ್ಲಿ ಜ್ಞಾನ ಮತ್ತು ಭಕ್ತಿ ಅವಶ್ಯಕತೆ ಇದೆ. ರಾಮ ಹಾಗೂ ರಾವಣನಲ್ಲಿ ಜ್ಞಾನವಿತ್ತು. ಆದರೆ, ರಾಮನಲ್ಲಿ ಭಕ್ತಿ ಇತ್ತು. ಆದ್ದರಿಂದ ರಾಮನನ್ನು ಮಾತ್ರ ಪೂಜೆ ಮಾಡುತ್ತೇವೆ. ಭಕ್ತಿ ಇಲ್ಲದ ಜ್ಞಾನ ಅಹಂಕಾರ ತರುತ್ತದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ ಎಸ್ ಎಸ್) ಸರಸಂಘಚಾಲಕ ಮೋಹನ ಭಾಗವತ್ ಹೇಳಿದರು.
ಬೆಳಗಾವಿಯ ಅಕಾಡೆಮಿ ಆಫ್ ಕಂಪೆರೆಟಿವ್ ಫಿಲಾಸಫಿ ಅಂಡ್ ರಿಲಿಜನ್ ಶತಮಾನೋತ್ಸವ ವರ್ಷಾಚರಣೆಗೆ ಗುರುವಾರ ಚಾಲನೆ ನೀಡಿ ಮತ್ತು ಗುರುದೇವ ರಾನಡೆ ರಚಿಸಿದ ಪುಸ್ತಕ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು. ಸಂಪ್ರದಾಯ ಸರಿಯಾದ ಮಾರ್ಗದಲ್ಲಿ ಕೊಂಡೊಯ್ಯತ್ತದೆ. ಇದು ಸಾಧನೆಯ ದಾರಿಯೂ ಹೌದು. ಮಹಾತ್ಮರ ಪ್ರವಚನಗಳು ನಮ್ಮ ಗುರಿ ತಲುಪಲು ಸಹಕಾರ ಆಗುತ್ತದೆ. ನಾವು ತಲುಪಬೇಕಾದ ಗುರಿ ಮರೆತರೆ ನಮ್ಮನ್ನೇ ಕಳೆದುಕೊಳ್ಳಬೇಕಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಸಂಪ್ರದಾಯ ಪಾಲಿಸಿ ಸಾಧನೆ ಮಾಡಬೇಕು ಎಂದು ಅವರು ಹೇಳಿದರು.
ಸನಾತನ ಧರ್ಮದಲ್ಲಿ ಜಗತ್ತಿನ ಎಲ್ಲಾ ಸಮಸ್ಯೆಗಳಿಗೂ ಪರಿಹಾರವಿದೆ. ಪ್ರತಿಯೊಬ್ಬರು ತಮ್ಮ ಅಂತರಂಗದ ಸತ್ಯ ಗುರುತಿಸಬೇಕು. ಆಗ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಕ್ಕೇ ಸಿಗುತ್ತದೆ. ಬದುಕಿನಲ್ಲಿ ಯಶಸ್ಸು ಸಾಧಿಸಲು ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ಮಾಡಬೇಕು ಎಂದು ಅವರು ಹೇಳಿದರು.
ಫೂಟ್ ಪ್ರಿಂಟ್ಸ್ ಆನ್ ದಿ ಸ್ಯಾಂಡ್ಸ್ ಆಫ್ ಟೈಮ್ ಕೃತಿ ಬಿಡುಗಡೆಗೊಳಿಸಿದ ಹೈದರಾಬಾದ್ ರಾಮಚಂದ್ರ ಕಮಲೇಶ್ ಪಟೇಲ್ (ದಾಜಿ)ಮಾತನಾಡಿ, ನಾವು ಭಾರತೀಯರು. ಹೀಗಾಗಿ ಮಾನವೀಯತೆ, ವಿನಯತೆಯನ್ನು ಎಂದಿಗೂ ಮರೆಯಬಾರದು. ದೇಶದ ಸರ್ವ ತ್ಯಾಗಕ್ಕೂ ಸಿದ್ಧವಿರಬೇಕು. ದೇಶಕ್ಕೆ ಅವಮಾನ ಮಾಡುವ ಶಕ್ತಿಗಳನ್ನು ಯಾವುದೇ ಕಾರಣಕ್ಕೂ ಸಹಿಸಬಾರದು ಎಂದು ಹೇಳಿದರು.
ಮೋಹನ ಭಾಗವತ ಮತ್ತು ಕಮಲೇಶ್ ಪಟೇಲ್ ಸಸಿ ನೆಟ್ಟರು. ಎಸಿಪಿಆರ್ ಅಧ್ಯಕ್ಷ ಅಶೋಕ ಪೋತದಾರ, ಕಾರ್ಯದರ್ಶಿ ಎಂ.ಬಿ. ಜಿರಲಿ ಸೇರಿದಂತೆ ಇತರರು ಇದ್ದರು.