ಬೆಳಗಾವಿ: ಬೆಳಗಾವಿಯಲ್ಲಿ ಮಂಗಳವಾರ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಗಳು ಸ್ಫೋಟಕ ಭವಿಷ್ಯವನ್ನು ನುಡಿದಿದ್ದಾರೆ.
ಮುಂದಿನ ದಿನಗಳಲ್ಲಿ ರೋಗ- ರುಜಿನಗಳು ಸ್ವಲ್ಪ ಜಾಸ್ತಿ ಆಗುವ ಲಕ್ಷಣ ಇದೆ. ಅಲ್ಪ ಆಯುಷ್ಯ ಕಡಿಮೆ ಆಗಲಿದೆ. ಮಾನಸಿಕವಾಗಿ ಗಂಡಾಗಲಿ ಅಥವಾ ಹೆಣ್ಣಾಗಲಿ ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಶುಭ ಇಲ್ಲ. ಆದರೂ ಒಳ್ಳೆಯ ದಿನಗಳು ಇವೆ. ಆದರೆ ಜಾಸ್ತಿ ಇಲ್ಲ ಎಂದು ಹೇಳಲ್ಲ. ವಿಶೇಷವಾಗಿ ಬೆಳಕಿಗಿಂತ ಕಪ್ಪು ಜಾಸ್ತಿ ಇದೆ ಎಂದು ಅವರು ಭವಿಷ್ಯ ನುಡಿದರು.ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಒಬ್ಬ ಸನ್ಯಾಸಿ ತಪಸ್ಸಿಗೆ ಕುಳಿತಿದ್ದನಂತೆ. ಅದೇ ವೇಳೆ ಒಬ್ಬ ಬೇಡ ಜಿಂಕೆಯನ್ನು ಅಟ್ಟಿಸಿಕೊಂಡು ಬಂದನಂತೆ. ಸನ್ಯಾಸಿ ಬಳಿ ಬಂದು, ಏನ್ ಸ್ವಾಮಿ ಇಲ್ಲಿ ಜಿಂಕೆ ಓಡಿಹೋಯಿತೇ ಎಂದು ಪ್ರಶ್ನಿಸಿದನಂತೆ. ಸನ್ಯಾಸಿ ಉಭಯ ಸಂಕಟಕ್ಕೆ ಬಿದ್ದ. ಹೌದು ಎಂದರೆ ಜಿಂಕೆಯನ್ನು ಕೊಲ್ಲುವಂತೆ ಮಾಡಿದ ಪಾಪ ಬರುತ್ತದೆ. ಅಲ್ಲ ಎಂದರೆ ಸುಳ್ಳಾಡಿದ ಪಾಪ ಬರುತ್ತದೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಆತ, ಯಾವುದು ನೋಡಿತೋ ಅದು ಮಾತನಾಡಲ್ಲ. ಯಾವುದು ಮಾತನಾಡುತ್ತದೆಯೋ ಅದು ನೋಡಿಲ್ಲ ಎಂದನಂತೆ. ಕಣ್ಣು ನೋಡುತ್ತದೆ ಆದರೆ ಮಾತನಾಡಲ್ಲ. ಬಾಯಿ ಮಾತನಾಡುತ್ತದೆ ಆದರೆ ನೋಡಲ ಎಂದರು.
ಇದೇ ರೀತಿ ಈ ರಾಜಕಾರಣಿಗಳ ವಿಚಾರ ಮಾತನಾಡುವಾಗಲೂ ನಾವು ಬಹಳ ಎಚ್ಚರದಿಂದ ಇರಬೇಕು ಎಂದು ಅವರು ಹೇಳಿದರು.
ರಾಷ್ಟ್ರ ರಾಜಕಾರಣದ ಬಗ್ಗೆಯೂ ತಾವು ಹಿಂದೆ ನುಡಿದಿದ್ದ ಭವಿಷ್ಯವನ್ನು ನೆಪಿಸಿಕೊಂಡರು. ಮಹಾಭಾರತದ ಚಕ್ರವ್ಯೂಹದ ಕಥೆಯನ್ನು ಉಲ್ಲೇಖಿಸಿ ಒಂದು ವಿಚಾರ ಹೇಳಿದ್ದೆ. ವೀರನಾಗಿದ್ದ ಅಭಿಮನ್ಯುವನ್ನು ಕರ್ಣ ಎಲ್ಲ ಸೇರಿ ಮೋಸದಿಂದ ಕೊಂದಿದ್ದರು. ಮಹಾಭಾರತದಲ್ಲಿ ಕೃಷ್ಣ ಇದ್ದ
ಅಂತ ಭೀಮ ಗೆದ್ದ, ದುರ್ಯೋಧನ ಸೋತ. ಇಲ್ಲಿ ಕೃಷ್ಣ ಇಲ್ಲ. ದುರ್ಯೋಧನ ಗೆಲ್ಲುತ್ತಾನೆ, ಭೀಮ ಸೋಲುತ್ತಾನೆ ಎಂದಿದ್ದೆ ಎಂದು ಅವರು ನೆನಪಿಸಿಕೊಂಡರು.ಸಿಎಂ ಬದಲಾವಣೆ ಕುರಿತ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಸದ್ಯಕ್ಕೆ ಆ ರೀತಿ ಏನೂ ಕಾಣಿಸುತ್ತಿಲ್ಲ ಎಂದರು. ಉಳಿದಂತೆ ಸನ್ಯಾಸಿಯ ಕಥೆಯನ್ನೇ ಉದಾಹರಣೆಯಾಗಿ ಹೇಳಿದರು.