ಹಾಸನ : ಕರ್ನಾಟಕ ಸರ್ಕಾರದ ಬಗ್ಗೆ ಕೋಡಿಮಠ ಶ್ರೀ ಮತ್ತೊಮ್ಮೆ ಸ್ಫೋಟಕ ಭವಿಷ್ಯ ಹೇಳಿದ್ದಾರೆ.
ರಾಜ್ಯದ ಪ್ರಾಕೃತಿಕ ಸ್ಥಿತಿಗತಿ ಮತ್ತು ಸರ್ಕಾರದ ಬಗ್ಗೆ ಅವರು ಭವಿಷ್ಯ ಹೇಳಿದ್ದಾರೆ. ಮಳೆಯಿಂದ ಜಾಸ್ತಿ ತೊಂದರೆ ಇದೆ. ಪ್ರಾಕೃತಿಕ ದೋಷ ಇದೆ. ಭೂಮಿ, ಅಗ್ನಿ, ವಾಯು, ಆಕಾಶ ಎಲ್ಲಾ ಕಡೆ ತೊಂದರೆ ಆಗುತ್ತದೆ. ಐದು ಕಡೆಯೂ ತೊಂದರೆ ಇದೆ. ಇನ್ನೂ ಒಂದು ವಿಚಾರ, ಆಕಾಶದಿಂದ ಕೂಡ ದೊಡ್ಡ ಸುದ್ದಿ ಬರಬಹುದು ಎಂದು ಅವರು ಹೇಳಿದ್ದಾರೆ.

ರಾಜನ ಮೇಲೆ ಭಂಗ ಬೀರಲಿದೆ ಆ ಘಟನೆ!
ಜನ ಇದ್ದಂಗೆ ಸಾಯುತ್ತಾರೆ. ಭೂಮಿ ಬಿರುಕು ಬಿಡುತ್ತದೆ ಎಂದಿದ್ದೆ. ಗುಡ್ಡ ಹೋಗುತ್ತದೆ ಎಂದು ಹೇಳಿದ್ದೆ. ಪ್ರವಾಹದಲ್ಲಿ ಜಗತ್ತಿನಾದ್ಯಂತ ಅನೇಕ ಪ್ರದೇಶಗಳು ಮುಳುಗುತ್ತವೆ ಎಂದು ಹೇಳಿದ್ದೆ. ಇನ್ನೂ ಮಳೆ ಇದೆ, ಅದರಲ್ಲಿ ಇನ್ನೂ ಅನಾಹುತಗಳಾಗಲಿವೆ. ಒಂದು ಆಕಾಶ ತತ್ವ ಪ್ರಕಾರ ತೊಂದರೆ ಆಗಬಹುದು. ಅದು ರಾಜನ ಮೇಲೆ ಭಂಗ ಬೀರಲಿದೆ ಎಂದು ಅವರು ಹೇಳಿದ್ದಾರೆ.

ಅಭಿಮನ್ಯುವಿನ ಬಿಲ್ಲನ್ನು ಮೋಸದಿಂದ ಕರ್ಣನ ಕೈಯಲ್ಲಿ ದಾರ ಕಟ್ ಮಾಡಿಸಿದರು. ಮಹಾಭಾರತದಲ್ಲಿ ಕೃಷ್ಣ ಇದ್ದ, ಗದಾಯುದ್ಧದಲ್ಲಿ ಭೀಮ ಗೆದ್ದ. ಇದೀಗ ಕೃಷ್ಣ ಇಲ್ಲದೆ ದುರ್ಯೋಧನ ಗೆಲ್ಲುತ್ತಾನೆ ಎಂದು ಕಳೆದ ತಿಂಗಳೇ ಹೇಳಿದ್ದೆ ಎಂದು ಕೋಡಿ ಶ್ರೀ ಮತ್ತೊಮ್ಮೆ ನೆನಪಿಸಿಕೊಂಡರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡರಲ್ಲೂ ಇವೇ ಆಗುವುದು ಎಂದ ಅವರು, ಈ ಮೂಲಕ ಕೇಂದ್ರ ರಾಜ್ಯದಲ್ಲಿ ಅಧಿಕಾರ ಚುಕ್ಕಾಣಿ ಹಿಡಿದವರ ಬದಲಾವಣೆ ಸಾಧ್ಯತೆ ಇದೆ ಎಂದು ಭವಿಷ್ಯ ನುಡಿದಿದ್ದಾರೆ. ಹಾಗೆಂದು ಸರ್ಕಾರಕ್ಕೆ ಏನು ತೊಂದರೆ ಆಗಲ್ಲ ಅಂತ ಹೇಳಿದ್ದೆ ಎಂದೂ ಅವರು ಪುನರುಚ್ಚರಿಸಿದರು.

ಒಂದು ತಿಂಗಳ ಹಿಂದೆ ಕೂಡ ಕೋಡಿ ಶ್ರೀಗಳು ಪ್ರಕೃತಿ ಮತ್ತು ಸರ್ಕಾರಗಳಿಗೆ ಸಂಬಂಧಿಸಿ ಭವಿಷ್ಯ ನುಡಿದಿದ್ದರು. ದೇಶಕ್ಕೆ ದೊಡ್ಡ ಗಂಡಾಂತರ ಕಾದಿದೆ ಎಂದು ಜೂನ್​​ನಲ್ಲಿ ಭವಿಷ್ಯ ನುಡಿದಿದ್ದ ಕೋಡಿಮಠ ಶ್ರೀ, ತಮ್ಮ ಭವಿಷ್ಯ ನಿಜವಾಗಿದೆ ಎಂದು ಜುಲೈನಲ್ಲಿ ಹೇಳಿದ್ದರು. ಕರ್ನಾಟಕದ ವಿವಿಧೆಡೆ ಉಂಟಾದ ಪ್ರವಾಹ ಪರಿಸ್ಥಿತಿ ಹಾಗೂ ಕೇರಳದಲ್ಲಿ ಸಂಭವಿಸಿದ ದುರಂತದ ಬಗ್ಗೆ ಉಲ್ಲೇಖಿಸಿದ ಅವರು, ತಾವು ನುಡಿದಿದ್ದ ಭವಿಷ್ಯವನ್ನು ಸಮರ್ಥಿಸಿಕೊಂಡಿದ್ದರು. ತಮ್ಮ ಭವಿಷ್ಯ ನಿಜವಾಗಿದೆ ಎಂದಿದ್ದರು.