Join The Telegram | Join The WhatsApp |
ಅಹಮದಾಬಾದ್ :
ಟೆಸ್ಟ್ ಕ್ರಿಕೆಟ್‌ನಲ್ಲಿ ಶತಕ ಬಾರಿಸುವ ವಿರಾಟ್ ಕೊಹ್ಲಿ ಆಸೆ ಕೊನೆಗೂ ಈಡೇರಿದೆ. ಬರೋಬ್ಬರಿ 40 ತಿಂಗಳು ಹಾಗೂ 1205 ದಿನಗಳ ಬಳಿಕ ಟೆಸ್ಟ್‌ನಲ್ಲಿ ವಿರಾಟ್ ಕೊಹ್ಲಿ ಸೆಂಚುರಿ ಸಿಡಿಸಿದ್ದಾರೆ. ಪ್ರವಾಸಿ ಆಸ್ಟ್ರೇಲಿಯಾ ತಂಡದ ವಿರುದ್ಧ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಅಹಮದಾಬಾದ್ ಟೆಸ್ಟ್ ಪಂದ್ಉದಲ್ಲಿ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ ಶತಕದ ಬರವನ್ನು ನೀಗಿಸಿಕೊಂಡರು. ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿಯ 75ನೇ ಅಂತಾರಾಷ್ಟ್ರೀಯ ಶತಕ ಇದಾಗಿದೆ. 522 ಅಂತಾರಾಷ್ಟ್ರೀಯ ಇನ್ನಿಂಗ್ಸ್‌ಗಳಿಂದ ಅವರು ಇಷ್ಟು ಶತಕ ಬಾರಿಸಿದ್ದಾರೆ. 2019ರಲ್ಲಿ ಬಾಂಗ್ಲಾದೇಶ ವಿರುದ್ಧ ಕೊನೆಯ ಬಾರಿಗೆ ಕೊಹ್ಲಿ ಟೆಸ್ಟ್ ಶತಕ ಬಾರಿಸಿದ್ದರು. ಟ್ವಿಟ್ಟರ್‌ನಲ್ಲಿ ಅಭಿಮಾನಿಗಳು ಕೊಹ್ಲಿಯ ಮೇಲೆ ಪ್ರೀತಿಯ ಸುರಿಮಳೆಯನ್ನು ಪ್ರಾರಂಭಿಸಿದ್ದಾರೆ ಮತ್ತು ಇತ್ತೀಚೆಗೆ ಉಜ್ಜಯಿನಿಯ ದೇವಸ್ಥಾನಕ್ಕೆ ಹಾಗೂ ನೀಮ್ ಕರೋಲಿ ಬಾಬಾರನ್ನು ಭೇಟಿಯಾಗಿದ್ದೇ ಬ್ಯಾಟಿಂಗ್‌ನಲ್ಲಿ ಅವರು ಉತ್ತಮ ಪ್ರದರ್ಶನ ತೋರಲು ಕಾರಣ ಎಂದಿದ್ದಾರೆ. ಭಗವಾನ್ ಮಹಾಕಾಲ ಯಾರನ್ನೂ ಕೈಬಿಡೋದಿಲ್ಲ ಎಂದು ಅಭಿಮಾನಿಗಳು ಕೊಹ್ಲಿ ಶತಕಕ್ಕೆ ಸಂಭ್ರಮ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಉಜ್ಜಯಿನಿ ದೇವಸ್ಥಾನಕ್ಕೆ ಕೊಹ್ಲಿ ಭೇಟಿ ನೀಡಿದ್ದು ಹಾಗೂ ಟೆಸ್ಟ್ ಕ್ರಿಕೆಟ್‌ನಲ್ಲಿ ಅವರ ಶತಕವನ್ನು ಅಭಿಮಾನಿಗಳು ಲಿಂಕ್ ಮಾಡಿದ ರೀತಿ ಇಲ್ಲಿದೆ:
‘ಜಯ್ ಬೋಲೇನಾಥ್, ಕೊಹ್ಲಿ 28ನೇ ಟೆಸ್ಟ್ ಶತಕ ಸಿಡಿಸಿದ್ದಾರೆ. ಇದೆಲ್ಲವೂ ಬೋಲೇನಾಥನ ಆಶೀರ್ವಾದ’ ಎಂದು ಅರ್ಜುನ್ ಎನ್ನುವವರು ಬರೆದಿದ್ದಾರೆ. ‘ವಿರಾಟ್ ಕೊಹ್ಲಿ ಅದ್ಭುತ ಶತಕ ಬಾರಿಸಿದ್ದಾರೆ. ಉಜ್ಜಯನಿಯ ಮಹಾಕಾಲ ದೇವಸ್ಥಾನಕ್ಕೆ ಭೇಟಿ ನೀಡಿದ್ದೇ ಅವರಿಗೆ ಮಹಾಶಿವನ ಆಶೀರ್ವಾದ ಹಾಗೂ ಅದೃಷ್ಟ ಸಿಕ್ಕಂತಾಗಿದೆ. ವೆಲ್ ಡನ್ ವಿರಾಟ್. ಮೈದಾನದ ಹೊರಗೂ ಮೈದಾನದ ಒಳಗೂ ಮಿಂಚುತ್ತಿರಿ’ ಎಂದು ಸಾಹಿಲ್ ಮಹಾಜನ್ ಎನ್ನುವ ವ್ಯಕ್ತಿ ಬರೆದಿದ್ದಾರೆ.
‘ನನಗೆ ಈಗ ಅರ್ಥವಾಗುತ್ತಿದೆ. ಪೂಜೆಯನ್ನು ಮಾಡೋದರಿಂದ ಏನೆಲ್ಲಾ ಲಾಭವಿದೆ ಅನ್ನೋದು ಗೊತ್ತಾಗುತ್ತಿದೆ’ ಜೈ ಮಹಾಕಾಲ ಹರ ಹರ ಮಹಾದೇವ’ ಎಂದು ಹರ್ಷವರ್ಧನ್ ಸಿಂಗ್ ಎನ್ನುವವರು ಕೊಹ್ಲಿಯ ಶತಕದ ಚಿತ್ರದೊಂದಿಗೆ ಟ್ವೀಟ್ ಮಾಡಿದ್ದಾರೆ. ‘ಜೈ ಮಹಾಕಾಲ ಜೈ ಮಹಾಕಾಲ. ವಿರಾಟ್ ಕೊಹ್ಲಿಯ 75ನೇ ಶತಕ. ನಿಮ್ಮ ಕೆಲಸವನ್ನು ನೀನು ಚಾಚೂ ತಪ್ಪದೆ ಮಾಡು ಮಹಾಕಾಲನಲ್ಲಿ ನಂಬಿಕೆ ಇಡು. ಕಂಡಿತ ಇದು ನಿನಗೆ ಉತ್ತಮ ಫಲಿತಾಂಶವನ್ನೇ ನೀಡುತ್ತದೆ’ ಎಂದು ಅಕ್ಷತ್ ಎನ್ನುವವರು ಕೊಹ್ಲಿಯ ಚಿತ್ರದೊಂದಿಗೆ ಪೋಸ್ಟ್ ಮಾಡಿದ್ದಾರೆ.
ಇಂದೋರ್ ಟೆಸ್ಟ್ ಮುಕ್ತಾಯವಾದ ನಂತರ ಅಹಮದಾಬಾದ್‌ಗೆ ತೆರಳುವ ಮುನ್ನ ವಿರಾಟ್ ಕೊಹ್ಲಿ ಉಜ್ಜಯನಿಯ ಮಹಾಕಾಳ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ಅವರೊಂದಿಗೆ ಪತ್ನಿ ಅನುಷ್ಕಾ ಶರ್ಮ ಹಾಗೂ ಮಗಳು ವಮಿಕಾ ಕೂಡ ಇದ್ದರು. ಉಜ್ಜಯನಿಯಲ್ಲಿ ಕೊಹ್ಲಿ ಮಹಾರುದ್ರಾಭಿಷೇಕ ಪೂಜೆ ಸಲ್ಲಿಕೆ ಮಾಡಿದ್ದಲ್ಲದೆ, ಮಹಾಕಾಲನ ಮುಂದೆ ಸಾಕಷ್ಟು ಹೊತ್ತು ಕುಳಿತು ಧ್ಯಾನವನ್ನೂ ಮಾಡಿದ್ದರು. ಅನುಷ್ಕಾ ಶರ್ಮ ಮಹಾಕಾಲನ ಬಾಗಿಲ ಬುಡದಲ್ಲಿ ನಿಂತ ಚಿತ್ರಗಳು ವೈರಲ್ ಆಗಿದ್ದವು. ಉಜ್ಜಯನಿಯಲ್ಲಿ ಮಹಾಶಿವನ ಆಶೀರ್ವಾದ ಪಡೆದುಕೊಂಡ ಬೆನ್ನಲ್ಲಿಯೇ ಆಡಿದ ಇನ್ನಿಂಗ್ಸ್‌ನಲ್ಲಿ ಕೊಹ್ಲಿ ಅದ್ಭುತ ಶತಕ ಬಾರಿಸಿದ್ದಾರೆ. ಈಗ ದ್ವಿಶತಕ ಬಾರಿಸುವ ಹಾದಿಯಲ್ಲೂ ಇದ್ದಾರೆ. ಇದು ಬೋಲೇನಾಥನ ಅಶೀರ್ವಾದದಿಂದಲೇ ಸಾಧ್ಯವಾಗಿದೆ ಎಂದು ಕೊಹ್ಲಿಯ ಅಭಿಮಾನಿಗಳು ಹಾಗೂ ಭಕ್ತರು ಹೇಳುತ್ತಿದ್ದಾರೆ.
ಅಹಮದಾಬಾದ್‌ನಲ್ಲಿ ಕೊಹ್ಲಿ ಸಿಂಹ ಘರ್ಜನೆ, ಕೊನೆಗೂ ಟೆಸ್ಟ್‌ನಲ್ಲೂ ಬಂತು ವಿರಾಟ್ ಶತಕ..!
ಕಳೆದ ಕೆಲವು ತಿಂಗಳುಗಳಿಂದ ವಿರಾಟ್ ಕೊಹ್ಲಿ ಹೆಚ್ಚು ಧಾರ್ಮಿಕ ವ್ಯಕ್ತಿಯಾಗಿ ಕಾಣಲು ಆರಂಭಿಸಿದ್ದಾರೆ. ಬಿಡುವಿನ ಸಮಯದಲ್ಲಿ ದೇವಸ್ಥಾನಕ್ಕೆ ತೆರಳು ಪೂಜೆ ಸಲ್ಲಿಸುವ ಅಭ್ಯಾಸ ಮಾಡಿಕೊಂಡಿದ್ದಾರೆ. ಕಳೆದ ವರ್ಷದ ಕೊನೆಯಲ್ಲಿ ವಿರಾಟ್ ಕೊಹ್ಲಿ ಉತ್ತರಾಖಂಡದ ಆಶ್ರಮಕ್ಕೆ ಭೇಟಿ ನೀಡಿದ್ದರು. ಅಲ್ಲಿಂದ ಬಂದ ಬಳಿಕ ಟಿ20 ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ಶತಕ ಬಾರಿಸುವ ಮೂಲಕ ಮಿಂಚಿದ್ದರು.
Join The Telegram | Join The WhatsApp |