ಉಳ್ಳಾಲ :
ಕಲ್ಲಾಪು ಬುರ್ದುಗೋಳಿ ಶ್ರೀ ಗುಳಿಗ ಕೊರಗಜ್ಜ ಉದ್ಭವಶಿಲೆ ಆದಿಸ್ಥಳಕ್ಕೆ ಕ್ಷೇತ್ರಕ್ಕೆ ‘ಕೊರಗಜ್ಜ’ ಸಿನಿಮಾದ ಯಶಸ್ಸಿಗೆ ಚಿತ್ರತಂಡವು ಹರಕೆಯ ಕೋಲದಲ್ಲಿ ಭಾಗವಹಿಸಿತು.

ಹಿರಿಯ ಸ್ಯಾಂಡಲ್ ವುಡ್ ನಟಿಯರಾದ ಶೃತಿ ಮತ್ತು ಭವ್ಯ ಭಾಗಿಯಾಗಿ ಅಜ್ಜನ ಕೋಲ ವೀಕ್ಷಿಸಿದರು.

ನಟಿ ಭವ್ಯ ಮಾತನಾಡಿ, ಕಳೆದ ಹುಟ್ಟುಹಬ್ಬದ ಸಂದರ್ಭದಲ್ಲೂ ಕ್ಷೇತ್ರಕ್ಕೆ ಭೇಟಿ ನೀಡಿರುವೆ. ಈ ಬಾರಿಯೂ ದೈವ ಇಚ್ಛೆಯಂತೆ ಅದೇ ದಿನ ಭೇಟಿ ನೀಡಿದ್ದೇನೆ. ಕೊರಗಜ್ಜನ ಆಶೀರ್ವಾದ ಮತ್ತು ಪವಾಡದಿಂದ ಇದು ಸಾಧ್ಯವಾಗಿದೆ, ಕೊರಗಜ್ಜ ಚಿತ್ರದಲ್ಲಿ ಪಂಜಂದಾಯ ಪಾತ್ರ ನಿರ್ವಹಿಸಿರುವೆ ಎಂದರು.

ನಟಿ ಶೃತಿ ಮಾತನಾಡಿ, ಹಣ ಇದ್ದವರು ಸಿನೆಮಾ ಮಾಡಲು ಸಾಧ್ಯವಿಲ್ಲ. ದೇವರ ಅನುಗ್ರಹದಿಂದಷ್ಟೇ ಕೊರಗಜ್ಜ ಸಿನಿಮಾ ಮಾಡಿರುವುದು ಅನುಭವದಿಂದ ಕಂಡು ಬಂದ ಸತ್ಯ. ಚಿತ್ರದ ಶೂಟಿಂಗ್ ಉದ್ದಕ್ಕೂ ಒಳ್ಳೆ ವಿಚಾರಗಳೇ ತುಂಬಿರುವುದು ದೈವದ ಅನುಗ್ರಹ ಎಂದರು.

ನಿರ್ದೇಶಕ ಸುಧೀರ್‌ರಾಜ್ ಅತ್ತಾವರ ಮಾತನಾಡಿ, ತುಳುನಾಡಿನ ದೈವಾರಾಧನೆಯ ವೇಷಭೂಷಣಗಳು ಉತ್ತರ ಸೈಬೀರಿಯಾದ ಷಮನಿಸಂನಲ್ಲೂ ಇದೆ. ಚಿತ್ರದ ಶೂಟಿಂಗ್ ಸಂದರ್ಭ ತೊಂದರೆಗಳಾಗದಂತೆ ಗುಳಿಗ, ಕಲ್ಲುರ್ಟಿಗೆ ಗುಡಿ ಕಟ್ಟಿಯೇ ಮುಂದುವರಿದಿದ್ದೇವೆ. ವಿದ್ಯೆ ತಿಳಿದವರಲ್ಲಿ ಕೇಳಿಕೊಂಡು ಶೂಟಿಂಗ್ ನಡೆಸಲಾಗಿದೆ. ಮಾರ್ಚ್ ಕೊನೆಗೆ ಚಿತ್ರ ತೆರೆಕಾಣಲಿದೆ.

ಪ್ಯಾನ್ ಇಂಡಿಯಾ ರೀತಿಯಲ್ಲಿ ಸಿನೆಮಾ ತಯಾರಾಗುತ್ತಿದ್ದು, ಹಿಂದಿ, ತೆಲುಗು, ತಮಿಳು, ಮಲಯಾಳಂ, ಕನ್ನಡ ಹಾಗೂ ತುಳು ಭಾಷೆಯಲ್ಲಿಯೂ ಚಿತ್ರ ತೆರೆಕಾಣಲಿದೆ.ನಿರ್ಮಾಪಕ ತ್ರಿವಿಕ್ರಮ ಸಪಲ್ಯ ವಿದ್ಯಾಧರ್‌ಶೆಟ್ಟಿ, ಸಹ ನಿರ್ಮಾಪಕ, ನಟಿ ಭವ್ಯ ಪುತ್ರಿ ಅದಿತಿ, ನಟಿ ಶ್ರುತಿ ಪುತ್ರಿ ಗೌರಿ, ನಾಯಕ ನಟ ಭರತ್ ಸೂರ್ಯ, ನಾಯಕ ನಟಿ ರಿತಿಕ, ಬಾಲ ನಟರುಗಳಾದ ಸುಧಾ, ನವನೀತ, ಶ್ರೀಹರಿ, ಬುರ್ದುಗೋಳಿ ಕ್ಷೇತ್ರದ ಅಧ್ಯಕ್ಷ ವಿಶ್ವನಾಥ್ ನಾಯಕ್‌, ಉಪಾಧ್ಯಕ್ಷ ದೇವದಾಸ್ ಗಟ್ಟಿ ಕಾಯಂಗಳ, ಬಿಜೆಪಿ ಕ್ಷೇತ್ರ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್, ವಕೀಲ ಗಂಗಾಧರ್ ಉಳ್ಳಾಲ್, ಪುರುಷೋತ್ತಮ್ ಕಲ್ಲಾಪು ಇದ್ದರು.