
ಕುಂದಾಪುರ: ಕೊಲ್ಲೂರಿನ ಮೂಕಾಂಬಿಕಾ ದೇವಸ್ಥಾನದ ಮನ್ಮಹಾರಥೋತ್ಸವ ಶನಿವಾರ ವೈಭವದಿಂದ ಸಂಪನ್ನಗೊಂಡಿತು. ದೇವಿಯ ವಿಜೃಂಭಣೆಯ ಉತ್ಸವಕ್ಕೆ ಆಸುಪಾಸಿನ ಗ್ರಾಮಗಳು, ರಾಜ್ಯ, ಹೊರ ರಾಜ್ಯ, ವಿದೇಶದಿಂದ ಬಂದಿದ್ದ ಸಾವಿರಾರು ಭಕ್ತರು ಸಾಕ್ಷಿಯಾದರು.
ವ್ಯವಸ್ಥಾಪನಾ ಸಮಿತಿ ಸದಸ್ಯ, ದೇಗುಲದ ಪ್ರಧಾನ ತಂತ್ರಿ ನಿತ್ಯಾನಂದ ಅಡಿಗ ನೇತೃತ್ವದಲ್ಲಿ ಬೆಳಿಗ್ಗೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಮುಹೂರ್ತ ಬಲಿ, ಕ್ಷಿಪ್ರ ಬಲಿ, ರಥಬಲಿಯ ಬಳಿಕ ಮಧ್ಯಾಹ್ನ 12.30ರ ವೇಳೆಗೆ ಜೋಡಿ ಉತ್ಸವಮೂರ್ತಿಗಳನ್ನು ಗರ್ಭಗುಡಿಯಿಂದ ಹೊರತಂದು, ಸುತ್ತ ಪೌಳಿಯಲ್ಲಿ ಮೂರು ಸುತ್ತು ಉತ್ಸವ ನಡೆಸಿ, ಬಳಿಕ ಓಡ ಬಲಿ ಸೇವೆಗಾಗಿ ಸೌಪರ್ಣಿಕಾ ನದಿ ತೀರಕ್ಕೆ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು.
ಕೊಲ್ಲೂರಿನ ರಥೋತ್ಸವದ ಪರಂಪರೆಯಂತೆ ಗರ್ಭಗುಡಿಯಿಂದ ತರಲಾದ ಜೋಡಿ ಉತ್ಸವ ಮೂರ್ತಿಗಳನ್ನು ಬ್ರಹ್ಮರಥದಲ್ಲಿ ಕುಳ್ಳಿರಿಸಿ ರಥಪೂಜೆ ನಡೆಸಿದ ಬಳಿಕ, ಸಾವಿರಾರು ಭಕ್ತರ ಜಯಘೋಷದ ನಡುವೆ ಬೀದಿ ಗಣಪತಿ ದೇವಸ್ಥಾನದವರೆಗೆ ರಥೋತ್ಸವ ನಡೆಸಲಾಯಿತು. ಸಂಜೆ ಬ್ರಹ್ಮರಥದಲ್ಲಿ ದೇವರನ್ನು ತೂಗಿಸಿ ರಥಬೀದಿಯಲ್ಲಿ ಶಂಕರಾಶ್ರಮರವರೆಗೆ
ಕೊಂಡೊಯ್ಯಲಾಯಿತು. ರಥಬೀದಿಯ ಉತ್ಸವಾಚರಣೆಯ ಬಳಿಕ ದೇವರನ್ನು ರಥದಿಂದ ಇಳಿಸಿ ದೇವಸ್ಥಾನದ ಒಳಗೆ ಕೊಂಡೊಯ್ಯಲಾಯಿತು. ಚೆಂಡೆ ವಾದನ, ತಟ್ಟಿರಾಯ ಸೇರಿದಂತೆ ವಿವಿಧ ಸಾಂಸ್ಕೃತಿಕ ತಂಡಗಳು ಮೆರುಗು ನೀಡಿದವು. ದೇವಸ್ಥಾನದ ಹೊರ, ಒಳ ಆವರಣವನ್ನು ಹೂವು, ಹಣ್ಣುಗಳಿಂದ ಅಲಂಕರಿಸಲಾಗಿತ್ತು.
ಶ್ರೀಧರ ಅಡಿಗ, ಕೆ.ಎನ್. ಗೋವಿಂದ ಅಡಿಗ, ರಾಮಚಂದ್ರ ಅಡಿಗ, ಸುಬ್ರಹ್ಮಣ್ಯ ಅಡಿಗ, ವಿಶ್ಲೇಶ್ ಅಡಿಗ, ಗಜಾನನ ಜೋಯಿಸ್, ಸುದರ್ಶನ್ ಜೋಯಿಸ್, ಕಾಳಿದಾಸ ಭಟ್, ಸುರೇಶ್ ಭಟ್, ಶಿವಾನಂದ ಜೋಯಿಸ್, ಅಶ್ವಿನ್ ಭಟ್ ದಳಿ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿಕೊಟ್ಟರು.