ಕರಾವಳಿಯ ಸಮುದ್ರಕ್ಕೆ ಅಭಿಮುಖವಾಗಿ ಹಾದು ಹೋಗಿರುವ ಕೊಂಕಣ ರೈಲ್ವೆ ಬೈಂದೂರು, ಕುಂದಾಪುರ, ಬ್ರಹ್ಮಾವರ, ಉಡುಪಿ, ಕಾಪು, ಮೂಲ್ಕಿ, ಮಂಗಳೂರು, ಉಳ್ಳಾಲ ತಾಲೂಕಿನ ವೇಗದ ಬೆಳವಣಿಗೆಗೆ ಪ್ರಮುಖ ಕಾರಣವಾಗಿದೆ. ಗುಜರಾತ್, ಮುಂಬೈ, ಗೋವಾ, ಕೇರಳ ಜೊತೆ ಇಲ್ಲಿನ ಜನತೆ ನೇರ ಸಂಪರ್ಕ ಹೊಂದುವಂತಾಗಿದೆ. ಇದೇ ರೀತಿ ಮುಂದಿನ ದಿನಗಳಲ್ಲಿ ಪಶ್ಚಿಮ ಘಟ್ಟಕ್ಕೆ ಹೊಂದಿಕೊಂಡಂತೆ ಪ್ರಸ್ತಾಪಿತ ಹೊಸ ರೈಲ್ವೆ ಮಾರ್ಗ ನಿರ್ಮಾಣವಾದರೆ ಧಾರ್ಮಿಕ ಹಾಗೂ ಶೈಕ್ಷಣಿಕ ಕೇಂದ್ರಗಳನ್ನು ಈ ಮಾರ್ಗದುದ್ದಕ್ಕೂ ಹೊಂದಿರುವ ಬೈಂದೂರು, ಕುಂದಾಪುರ, ಹೆಬ್ರಿ, ಕಾರ್ಕಳ, ಮೂಡುಬಿದಿರೆ, ಬೆಳ್ತಂಗಡಿ, ಕಡಬ, ಸುಳ್ಯ ತಾಲೂಕಿನ ಜನರಿಗೆ ಹೆಚ್ಚಿನ ಅನುಕೂಲತೆ ಆಗಲಿದೆ. ಈ ಬಹುತೇಕ ತಾಲೂಕುಗಳು ಇಂದಿಗೂ ರೈಲ್ವೆ ಸಂಪರ್ಕದಿಂದ ವಂಚಿತವಾಗಿವೆ. ಈ ಮೂಲಕ ನಕ್ಸಲ್ ಸಮಸ್ಯೆ ಸೇರಿದಂತೆ ಇತರ ಕಾರಣಗಳಿಂದ ಹಿಂದುಳಿದಿರುವ ಈ ಭಾಗದ ಶ್ರೇಯೋಭಿವೃದ್ಧಿಗೆ ಕಾರಣವಾಗಲಿದೆ. ನಿಟ್ಟೆ, ಮೂಡುಬಿದಿರೆ,ಉಜಿರೆ, ಬೆಳ್ತಂಗಡಿ, ಕಾರ್ಕಳದ ಶಿಕ್ಷಣ ಸಂಸ್ಥೆಗಳಲ್ಲಿ ಉತ್ತರ ಕರ್ನಾಟಕ ಭಾಗದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಓದುತ್ತಿದ್ದಾರೆ.ಜತೆಗೆ ಕಾರ್ಮಿಕರಾಗಿ ಕರಾವಳಿ ಜಿಲ್ಲೆಗಳಿಗೆ ಉತ್ತರ ಕರ್ನಾಟಕ ಭಾಗಗಳಿಂದ ದಶಕದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ತೆರಳುತ್ತಿದ್ದಾರೆ. ಈ ಮಾರ್ಗದುದ್ದಕ್ಕೂ ಇರುವ ಶೈಕ್ಷಣಿಕ ಸಂಸ್ಥೆಗಳಿಗೆ ಹಾಗೂ ಊರುಗಳಿಗೆ ಬರುವ ಉತ್ತರ ಕರ್ನಾಟಕದ ಜನ ಈಗ ಕರಾವಳಿ ಕಡಲತೀರದಲ್ಲಿ ಇಳಿದು ಬಸ್ ಸೇರಿದಂತೆ ಇದರ ವಾಹನಗಳನ್ನು ಅವಲಂಬಿಸಬೇಕಾಗಿದೆ. ಹೀಗಾಗಿ ಹೊಸ ರೈಲ್ವೆ ಮಾರ್ಗವಿದ್ದರೆ ಪಯಣ ಇನ್ನಷ್ಟು ಸುಗಮವಾಗಲಿದೆ.
ಅವಿಭಜಿತ ದಕ್ಷಿಣ ಕನ್ನಡ ಸುಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳಗಳನ್ನು ಬೆಸೆಯುವ ಮಹತ್ವಾಕಾಂಕ್ಷಿ ಹೊಸ ರೈಲ್ವೆ ಮಾರ್ಗ ನಿರ್ಮಾಣವಾಗಬೇಕು ಎನ್ನುವುದು ಕರಾವಳಿ ಜನತೆಯ ಒತ್ತಾಸೆಯಾಗಿದೆ. ಕೊಲ್ಲೂರು, ಶಂಕರನಾರಾಯಣ, ಹಾಲಾಡಿ, ಹೆಬ್ರಿ, ಕಾರ್ಕಳ, ಮೂಡುಬಿದಿರೆ, ವೇಣೂರು, ಬೆಳ್ತಂಗಡಿ, ಉಜಿರೆ, ಧರ್ಮಸ್ಥಳ, ಸುಬ್ರಹ್ಮಣ್ಯ ನೂತನ ಮಾರ್ಗದ ಬಗ್ಗೆ ಕೇಂದ್ರ ರೈಲ್ವೆ ಇಲಾಖೆ ಚಿಂತನೆ ನಡೆಸಬೇಕು. ಈ ನಿಟ್ಟಿನಲ್ಲಿ ಹೊಸ ಮಾರ್ಗ ರಚನೆ ಬಗ್ಗೆ ಕೇಂದ್ರ ಸರಕಾರ ಬಜೆಟ್ ನಲ್ಲಿ ಘೋಷಣೆ ಮಾಡಬೇಕು ಎನ್ನುವ ಆಗ್ರಹ ವ್ಯಕ್ತವಾಗಿದೆ.
ಆದಿ ಶಂಕರಾಚಾರ್ಯರಿಂದ ಪ್ರತಿಷ್ಠಾಪಿತ ಕೊಡಚಾದ್ರಿ ಪರ್ವತದ ತಪ್ಪಲಲ್ಲಿರುವ ಕೊಲ್ಲೂರು ಶ್ರೀ ಮೂಕಾಂಬಿಕಾ ಮಾರ್ಗದಿಂದ ಕೊಲ್ಲೂರಿನಿಂದ ಆರಂಭವಾಗಿ ಶಂಕರನಾರಾಯಣ, ಹಾಲಾಡಿ, ಹೆಬ್ರಿ, ಕಾರ್ಕಳ, ಮೂಡುಬಿದಿರೆ, ವೇಣೂರು, ಧರ್ಮಸ್ಥಳ, ಸುಬ್ರಮಣ್ಯಕ್ಕೆ ಹೊಸ ಮಾರ್ಗ ರಚನೆಯಾದಲ್ಲಿ ಕರಾವಳಿಯ ಸಹ್ಯಾದ್ರಿ ಪರ್ವತ ಶ್ರೇಣಿಯ ಒಡಲಲ್ಲಿರುವ ಈ ಪ್ರದೇಶದ ಒಟ್ಟಾರೆ ಚಹರೆಯೇ ಬದಲಾಗಬಹುದು ಎನ್ನುವುದು ಜನತೆಯ ಅಭಿಪ್ರಾಯವಾಗಿದೆ.
ಕೊಲ್ಲೂರು ಆದಿ ಶಂಕರಾಚಾರ್ಯರಿಂದ ಪ್ರತಿಷ್ಠಾಪಿತವಾದ ಪ್ರಸಿದ್ಧ ಪುಣ್ಯಕ್ಷೇತ್ರ. ದಕ್ಷಿಣ ಭಾರತದಲ್ಲಿಯೇ ಕೊಲ್ಲೂರು ಅತ್ಯಂತ ಪ್ರಸಿದ್ಧ ಯಾತ್ರಾ ಸ್ಥಳವಾಗಿದೆ. ಸನಿಹದಲ್ಲೇ ಹಟ್ಟಿಯಂಗಡಿ ಮಹಾಗಣಪತಿ, ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ, ಕಮಲಶಿಲೆ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ಕ್ಷೇತ್ರಗಳು ಇವೆ.
ಸಹ್ಯಾದ್ರಿ ಪರ್ವತ ಶ್ರೇಣಿಯ ಕಣಿವೆಯಲ್ಲಿ ಶಂಕರನಾರಾಯಣ ಇದೆ. ಇಲ್ಲಿ ಪ್ರಸಿದ್ಧ ಶಂಕರನಾರಾಯಣ ದೇವಸ್ಥಾನವಿದೆ. ಇದು ಸಪ್ತಕ್ಷೇತ್ರಗಳಲ್ಲಿ ಒಂದು. ಬ್ರಿಟಿಷ್ ಆಡಳಿತದ ಕಾಲದಿಂದಲೂ ಶಂಕರನಾರಾಯಣ ಪ್ರಮುಖ ಆಡಳಿತ ಕೇಂದ್ರವಾಗಿ ಗುರುತಿಸಲ್ಪಟ್ಟಿದೆ. ಜೊತೆಗೆ ಹೊಸ ತಾಲೂಕು ಆಗುವತ್ತ ಎಲ್ಲ ಸ್ಥಾನಮಾನ ಪಡೆದುಕೊಳ್ಳುತ್ತ ದಾಪುಗಾಲು ಹಾಕುತ್ತಿದೆ.
ಕರಾವಳಿ ಜನತೆಯ ಕೃಷಿಗೆ ನೀರು ಒದಗಿಸುವ ಪ್ರಮುಖ ನದಿಯಾಗಿರುವ ವಾರಾಹಿ ಅಥವಾ ಹಾಲಾಡಿ ಹೊಳೆ ದಡದ ಮೇಲಿರುವ ಹಾಲಾಡಿ ಪ್ರಮುಖ ವಾಣಿಜ್ಯ ಕೇಂದ್ರವಾಗಿ ರೂಪುಗೊಂಡಿದೆ. ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಗೆ ನೇರ ಸಂಪರ್ಕ ಹೊಂದಿರುವ ಮಲೆನಾಡ ಸೊಗಡಿನ ಹೆಬ್ರಿ ತಾಲೂಕು ಕೇಂದ್ರವಾಗಿ ಅಭಿವೃದ್ಧಿ ಪಥದತ್ತ ಮುನ್ನುಗುತ್ತಿದೆ. ಸನಿಹದಲ್ಲಿರುವ ವರಂಗ ಸುಕ್ಷೇತ್ರ ಜೈನ ಅರಸರ ಹಾಗೂ ಪ್ರೇಕ್ಷಣೀಯ ಸ್ಥಳದಿಂದ ಪ್ರವಾಸಿಗರನ್ನು ಸೆಳೆಯುತ್ತಿದೆ.
ಕಾರ್ಕಳ ಭೈರರಸರ ಕಾಲದಿಂದಲೂ ಪುರಾತನ ನಗರವಾಗಿ ತನ್ನ ಛಾಪು ಮೂಡಿಸಿದೆ. ಇಲ್ಲಿನ ಬೆಟ್ಟದ ಮೇಲಿರುವ ವೀರ ಕಲ್ಕುಡ ಕೆತ್ತಿರುವ ಬಾಹುಬಲಿ ಮೂರ್ತಿ ಅತ್ಯಂತ ದೂರದಿಂದಲೇ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.
ಕಾರ್ಕಳ ಭಗವಾನ್ ಬಾಹುಬಲಿಯ 42 ಅಡಿ ಎತ್ತರದ ಬೃಹತ್ ಏಕಶಿಲಾ ವಿಗ್ರಹ, 18 ದಿಗಂಬರ ಜೈನ ಬಸದಿ, ಜೈನ ಮಠಗಳ ಶ್ರೀಮಂತ ಜೈನ ಪರಂಪರೆಯ ಪ್ರಸಿದ್ಧ ಜೈನ ಕೇಂದ್ರವಾಗಿದೆ. ಕಾರ್ಕಳ ಕ್ರಿಸ್ತಶಕ 1300 ರ ವರೆಗೆ ಹಳ್ಳಿಯಂತೆ ಇತ್ತು. ನಂತರ ಬೈರರಸರಿಂದ ರಾಜಧಾನಿಯ ಸ್ಥಾನಮಾನ ಪಡೆದಾಗ ಅಭಿವೃದ್ದಿಗೊಂಡಿತು. ಬೈರರಸರು ಈ ಸ್ಥಳವನ್ನು ಐತಿಹಾಸಿಕ ಪಟ್ಟಣವನ್ನಾಗಿ ಪರಿವರ್ತಿಸಿದರು. ಅವರ ರಾಜಧಾನಿಯಾಗಿ ಕಾರ್ಯ ನಿರ್ವಹಿಸಿತು. ಬೈರರಸರ ಆಳ್ವಿಕೆಯಲ್ಲಿ ಧಾರ್ಮಿಕ ಕೇಂದ್ರವಾಗಿ ಪ್ರವರ್ಧಮಾನಕ್ಕೆ ಬಂತು. ಕಾರ್ಕಳ ಭಗವಾನ್ ಬಾಹುಬಲಿಯ ಏಕಶಿಲಾ ಪ್ರತಿಮೆ, ಹಳೆಯ ಜೈನ ಬಸದಿಗಳು, ಜೈನ ಮಠ, ವೆಂಕಟರಮಣ ದೇವಸ್ಥಾನ ಮತ್ತು ಅನಂತಶಯನ ದೇವಸ್ಥಾನಗಳಿಂದ ಪ್ರಸಿದ್ಧಿ ಪಡೆದಿದೆ.
ಮೂಡುಬಿದಿರೆ ಜೈನ ಕಾಶಿ ಹಾಗೂ ಶಿಕ್ಷಣಕಾಶಿ ಎಂದೇ ಪ್ರಸಿದ್ಧಿ ಪಡೆದಿದೆ. ಕೆಲ ದಶಕಗಳಿಂದ ಮೂಡುಬಿದಿರೆ ಶೈಕ್ಷಣಿಕ ಕಾಶಿ ಎಂದೇ ಪರಿಚಯಿಸಲ್ಪಟ್ಟಿದೆ. ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕದಿಂದ ಅಪಾರ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಈ ಪುರಾತನ ನಗರಕ್ಕೆ ಆಗಮಿಸಿ ಶಿಕ್ಷಣ ಪಡೆಯುತ್ತಿರುವುದು ವಿಶೇಷವಾಗಿದೆ. ಮೂಡುಬಿದಿರೆ ಎಂದಾಕ್ಷಣ ಮೊದಲಿಗೆ ಶಿಕ್ಷಣ ಸಂಸ್ಥೆಗಳು ನೆನಪಿಗೆ ಬರುವಷ್ಟು ಇಲ್ಲಿನ ಶಿಕ್ಷಣ ಹೆಸರುವಾಸಿ.
ಸಾವಿರ ಕಂಬದ ಬಸದಿ ಸೇರಿದಂತೆ ಹಲವಾರು ಬಸದಿಗಳು ಇಲ್ಲಿನ ಗತ ಇತಿಹಾಸವನ್ನು ತೆರೆದಿಡುತ್ತವೆ.
ಮೂಡುಬಿದಿರೆಯಲ್ಲಿ 18 ಬಸದಿಗಳು ,18 ದೇವಾಲಯಗಳು, 18 ಕೆರೆಗಳು ಇವೆ. 90ರ ದಶಕದಲ್ಲಿ ಸ್ಥಾಪನೆಗೊಂಡು ದೇಶಾದ್ಯಂತ ಹೆಸರು ಮಾಡಿರುವ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಪದವಿ ವಿದ್ಯಾಲಯಗಳು, ದಾದಿಯರ ಶಿಕ್ಷಣ ಸಂಸ್ಥೆ, ಆಯುರ್ವೇದ ಮಹಾವಿದ್ಯಾಲಯ, ತಾಂತ್ರಿಕ ಮಹಾವಿದ್ಯಾಲಯಗಳನ್ನು ಮೂಡುಬಿದಿರೆಯ ಹೊಂದಿದೆ. ಇಲ್ಲಿನ ವ್ಯಾಪಾರಿಗಳು ದೇಶ-ವಿದೇಶಗಳ ವಿವಿಧ ಸ್ಥಳಗಳ ವ್ಯಾಪಾರಿಗಳೊಂದಿಗೆ ವ್ಯವಹಾರ ಸಂಬಂಧವನ್ನು ಬಹು ಪ್ರಾಚೀನ ಕಾಲದಿಂದಲೇ ಹೊಂದಿದ್ದರು. ಇತ್ತೀಚಿನ ವರ್ಷಗಳಲ್ಲಿ ಗೋಡಂಬಿ ಉದ್ಯಮ, ಕೃಷಿ ಕೈಗಾರಿಕೆಗಳು, ಆಯುರ್ವೇದಿಯ ಔಷಧಿಗಳ ತಯಾರಿಕೆಯಿಂದ ಈ ನಗರ ಬೆಳೆದು ನಿಂತಿದೆ. ಇದೀಗ ಮಂಗಳೂರು-ಮೂಡುಬಿದಿರೆ- ಕಾರ್ಕಳ ನಡುವೆ ಹೊಸಪೇಟೆಗೆ ಸ್ಪಂದಿಸುವ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ವೇಗವಾಗಿ ಸಾಗಿದೆ.
ವೇಣೂರು ಬೆಳ್ತಂಗಡಿ ತಾಲೂಕಿನಲ್ಲಿದೆ. ಫಲ್ಗುಣಿ ನದಿಯ ದಡದಲ್ಲಿರುವ ವೇಣೂರು ಒಂದು ಕಾಲದಲ್ಲಿ ಜೈನ ಧರ್ಮದ ಸ್ಥಾನವಾಗಿತ್ತು. ಅಜಿಲ ರಾಜವಂಶದ ರಾಜಧಾನಿಯಾಗಿತ್ತು. ಕರಾವಳಿ ಧಾರ್ಮಿಕ ತಾಣಗಳಲ್ಲಿ ಬರುವ ಧರ್ಮಸ್ಥಳ-ಮೂಡುಬಿದಿರೆ- ಕಾರ್ಕಳ ಮಾರ್ಗಗಳ ನಡುವೆ ವೇಣೂರು ಇದೆ.
ವೇಣೂರು ಸಹ ಬಾಹುಬಲಿ ಮೂರ್ತಿಯಿಂದ ಪ್ರಸಿದ್ಧಿ ಪಡೆದಿದೆ. ತನ್ನದೇ ಆದ ಗತ ಇತಿಹಾಸವನ್ನು ಈ ಆಳೆತ್ತರದ ಪ್ರತಿಮೆ ಪಡೆದುಕೊಂಡಿದೆ.
ಭಗವಾನ್ ಬಾಹುಬಲಿಯನ್ನು ಭಗವಾನ್ ಗೋಮಟೇಶ್ವರ ಎಂದೂ ಕರೆಯುತ್ತಾರೆ. ಈ ಏಕಶಿಲಾ ಪ್ರತಿಮೆ 38 ಅಡಿ ಎತ್ತರ ಹೊಂದಿದೆ. ಈ ವರ್ಷ ಈ ಪ್ರತಿಭೆಗೆ ಮಹಾಮಸ್ತಕಾಭಿಷೇಕ ನಡೆಯುತ್ತಿದೆ. ಉತ್ತರ ಕರ್ನಾಟಕ, ಮಹಾರಾಷ್ಟ್ರ ಭಾಗದಲ್ಲಿರುವ ಹೆಚ್ಚಿನ ಸಂಖ್ಯೆಯಲ್ಲಿರುವ ಜೈನ ಬಾಂಧವರು ಈ ವರ್ಷ ಈ ಪವಿತ್ರ ಮಹಾಮಸ್ತಕಾಭಿಷೇಕಕ್ಕೆ ಆಗಮಿಸುತ್ತಾರೆ. ಈ ಬಾಹುಬಲಿ ಕರ್ನಾಟಕದಲ್ಲಿ ಕಂಡುಬರುವ 5 ಅತ್ಯಂತ ಎತ್ತರದ ಏಕಶಿಲಾ ಪ್ರತಿಮೆಗಳಲ್ಲಿ ಒಂದು ಎಂಬ ಅಭಿದಾನಕ್ಕೆ ಪಾತ್ರವಾಗಿದೆ.
ಬೆಳ್ತಂಗಡಿ ತಾಲೂಕು ಕೇಂದ್ರವಾಗಿ ಬೆಳೆದು ನಿಂತಿದೆ. ಹಲವಾರು ಶಿಕ್ಷಣ ಸಂಸ್ಥೆಗಳು ಹಾಗೂ ವಾಣಿಜ್ಯ ಕೇಂದ್ರವಾಗಿ ವೇಗವಾಗಿ ಬೆಳೆಯುತ್ತಿದೆ. ಉಜಿರೆ ಶಿಕ್ಷಣ ಕ್ಷೇತ್ರ ಹಾಗೂ ಸನಿಹದಲ್ಲಿರುವ ಮಣ್ಣಿನ ಬೊಂಬೆಗಳ ಹರಕೆ ಪ್ರಿಯ ಶ್ರೀ ಸದಾಶಿವ ರುದ್ರ ದೇವಸ್ಥಾನ ಅತ್ಯಂತ ಪ್ರಭಾವಿಯಾಗಿ ಗುರುತಿಸಿಕೊಂಡಿದೆ.
ಧರ್ಮಸ್ಥಳ ಮಂಜುನಾಥ ಸ್ವಾಮಿಯ ನೆಲೆಬೀಡು. ಕರ್ನಾಟಕ ಮಾತ್ರವಲ್ಲ, ಇಡೀ ದಕ್ಷಿಣ ಭಾರತದ ಯಾತ್ರಿಕರು ಈ ಪುಣ್ಯಕ್ಷೇತ್ರಕ್ಕೆ ಆಗಮಿಸಿ ಪಾವನರಾಗುತ್ತಾರೆ. ಅಣ್ಣಪ್ಪ ಸ್ವಾಮಿ, ಮಂಜುನಾಥ ಸ್ವಾಮಿ ಹಾಗೂ 39 ಅಡಿ ಎತ್ತರದ ಬಾಹುಬಲಿ ಮೂರ್ತಿ ಇಲ್ಲಿಯ ಆಕರ್ಷಣೆಯ ಪ್ರಮುಖ ಕೇಂದ್ರ. ಧರ್ಮಸ್ಥಳದಿಂದ ಸುಬ್ರಮಣ್ಯ ಹೋಗುವಾಗ ಸಿಗುವ ಸಕಲ ಚರ್ಮರೋಗ ನಿವಾರಕ ಕ್ಷೇತ್ರ ಎಂದೇ ಪ್ರತೀತಿ ಪಡೆದಿರುವ ಶಿಶಿಲದ ಶ್ರೀ ಶಿಶಿಲೇಶ್ವರ ಭಕ್ತರ ನೆಚ್ಚಿನ ತಾಣ. ಸುಬ್ರಮಣ್ಯ ಮಾರ್ಗದ ಸನಿಹದಲ್ಲೇ ಬರುವ ಧರ್ಮಸ್ಥಳದಿಂದ ಕೇವಲ 16 ಕಿಲೋಮೀಟರ್ ದೂರದಲ್ಲಿರುವ ಸೌತಡ್ಕದ ಶ್ರೀ ಬಯಲು ಗಣಪತಿ ಭಕ್ತರು ಕೇಳಿದ್ದನ್ನು ಕೊಡುವ ಅಭಯ ಹಸ್ತ ದೇವರು ಎಂದೇ ಹೆಸರುವಾಸಿ. ಇತ್ತೀಚಿನ ವರ್ಷಗಳಲ್ಲಿ ಧರ್ಮಸ್ಥಳ -ಸುಬ್ರಮಣ್ಯ ಹೋಗುವವರು ಈ ಕ್ಷೇತ್ರಕ್ಕೆ ತಪ್ಪದೇ ಭೇಟಿ ನೀಡಿ ಗಂಟೆಗಳ ಹರಕೆ ತೀರಿಸಿ ಹೋಗುತ್ತಾರೆ.
ಸುಬ್ರಹ್ಮಣ್ಯ ದಕ್ಷಿಣ ಕನ್ನಡ ಜಿಲ್ಲೆಯ ಅತ್ಯಂತ ಸುಂದರ ತಾಣ. ಸುಬ್ರಮಣ್ಯ ಸ್ವಾಮಿಯ ದರ್ಶನಕ್ಕಾಗಿ ಮೂಲೆ ಮೂಲೆಗಳಿಂದ ಭಕ್ತರು ಅಪಾರ ಸಂಖ್ಯೆಯಲ್ಲಿ ಇಲ್ಲಿಗೆ ಆಗಮಿಸುವುದು ವಿಶೇಷ.
2010 ರಲ್ಲೇ ಪ್ರಸ್ತಾಪ ಇಂದಿಗೂ ನನೆಗುದಿಗೆ :
ರೈಲ್ವೆ ಬಜೆಟ್ ನಲ್ಲಿ ರಾಜ್ಯಕ್ಕೆ ಮಂಜೂರಾಗಿರುವ 12 ಹೊಸ ರೈಲ್ವೆ ಮಾರ್ಗ ಸಮೀಕ್ಷೆಯನ್ನು ಮುಂದಿನ ಆರು ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ಅಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಈಗಿನ ಕರ್ನಾಟಕ ಸರಕಾರದ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಕೆ.ಎಸ್. ಮುನಿಯಪ್ಪ ತಿಳಿಸಿದ್ದರು. ಹೊಸ ರೈಲ್ವೆ ಹಳಿ ಜೊತೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಸಹಭಾಗಿತ್ವದಲ್ಲಿ ಅನುಷ್ಠಾನಗೊಳಿಸುವ ಐದು ಯೋಜನೆಗಳ ಯೋಜನಾ ವರದಿಯನ್ನು ಸಹ ಆರು ತಿಂಗಳಲ್ಲಿ ಪೂರ್ಣಗೊಳಿಸಿ ಕಾಮಗಾರಿ ಆರಂಭಿಸಲು ಅಗತ್ಯವಿರುವ ಅನುಮೋದನೆ ಪಡೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದರು. ತ್ವರಿತವಾಗಿ ಸಮೀಕ್ಷೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಆದೇಶ ನೀಡಿದ್ದ ಸಚಿವರು, ಚಾಮರಾಜನಗರ- ಕೃಷ್ಣಗಿರಿ, ಮೈಸೂರು-ಮಡಿಕೇರಿ, ಬೈಂದೂರು-ಕೊಲ್ಲೂರು-ಹಾಲಾಡಿ-ಹೆಬ್ರಿ-ಕಾರ್ಕಳ- ಮೂಡುಬಿದರೆ-ವೇಣೂರು-ಬೆಳ್ತಂಗಡಿ, ಧರ್ಮಸ್ಥಳ ನಡುವಿನ ಹೊಸ ರೈಲ್ವೆ ಹಳಿಗಳ ಸಾಧ್ಯತೆಗೆ ಕೇಂದ್ರದ ಪರಿಸರ ಇಲಾಖೆ ಅನುಮತಿ ನೀಡಬೇಕು. ಈ ಬಗ್ಗೆ ಸಚಿವ ಜೈರಾಮ್ ರಮೇಶ್ ಅವರೊಂದಿಗೆ ಚರ್ಚಿಸುವುದಾಗಿ ಹೇಳಿದ್ದರು.
ಆರ್ಥಿಕತೆಗೆ ನವ ಅಧ್ಯಾಯ :
ಒಟ್ಟಾರೆ ಮಲೆನಾಡ ಸೆರಗಿಗೆ ಹೊಂದಿಕೊಂಡಂತೆ ಕರಾವಳಿ ಜಿಲ್ಲೆಗಳಲ್ಲಿ ಹೊಸದಾಗಿ ರೈಲ್ವೆ ಮಾರ್ಗ ನಿರ್ಮಾಣವಾದರೆ ಉಭಯ ಜಿಲ್ಲೆಗಳ ಆರ್ಥಿಕತೆಗೆ ನವ ಅಧ್ಯಾಯ ಬರೆಯಬಹುದು. ಅಭಿವೃದ್ಧಿ ಶಕೆಯೇ ಇಲ್ಲಿ ಬೀಸಬಹುದು. ಹೊಸ ರೈಲ್ವೆ ಮಾರ್ಗದಿಂದ ಕೆಲ ಪ್ರಮಾಣದಲ್ಲಿ ಆರ್ಥಿಕ ನಷ್ಟಗಳು ಆಗುತ್ತವೆ. ಆದರೆ, ಕೆಲವೇ ವರ್ಷದಲ್ಲಿ ಅದನ್ನು ಸರಿದೂಗಿಸಲು ಸಾಧ್ಯವಿದೆ. ಅಪಾರ ಪ್ರಮಾಣದ ಪ್ರಾಚೀನ ಪುಣ್ಯಕ್ಷೇತ್ರಗಳು, ಶಿಕ್ಷಣ ಕ್ಷೇತ್ರಗಳು ಹಾಗೂ ವಾಣಿಜ್ಯ ಕೇಂದ್ರಗಳನ್ನು ಒಳಗೊಂಡಿರುವ ಈ ರೈಲ್ವೆ ಮಾರ್ಗ ಅತ್ಯಂತ ಲಾಭದಾಯಕವಾಗಿ ರೈಲ್ವೆ ಇಲಾಖೆಗೆ ಹೆಚ್ಚಿನ ವರಮಾನ ತರುವುದರಲ್ಲಿ ಯಾವ ಸಂದೇಹವಿಲ್ಲ. ರೈಲ್ವೆ ಮಾರ್ಗ ಹಾದು ಹೋಗುವ ದಾರಿಯಲ್ಲಿ ಕೆಲಮಟ್ಟಿಗೆ ಅರಣ್ಯ ನಾಶ ಆಗುತ್ತದೆ. ಆದರೆ, ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಅರಣ್ಯ ಈ ಭಾಗದಲ್ಲಿ ಇಲ್ಲ. ಹೀಗಾಗಿ ಈ ಮಾರ್ಗ ನಿರ್ಮಾಣಕ್ಕೆ ರಾಜಕೀಯ ಇಚ್ಚಾಸಕ್ತಿ ಪ್ರಮುಖವಾಗಿದೆಯೇ ಹೊರತು ಇತರ ಕಡೆಗಳಲ್ಲಿ ಆಗುವಂತೆ ಹೆಚ್ಚಿನ ಹಾನಿ ಸಂಭವಿಸದು. ಕರಾವಳಿಯ ರಾಜಕಾರಣಿಗಳು ಮಲೆನಾಡ ಮಗ್ಗುಲಲ್ಲಿ ಹಾದು ಹೋಗುವ ಈ ಮಹತ್ವಾಕಾಂಕ್ಷಿ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಗಮನ ಹರಿಸಬೇಕು. ಈ ಮೂಲಕ ಕಡಲ ತೀರದಲ್ಲಿ ಹಾದುಹೋಗಿರುವ ರೈಲ್ವೆ ಮಾರ್ಗದ ಜೊತೆ ಜೊತೆಗೆ ಪಶ್ಚಿಮ ಘಟ್ಟದ ಸನಿಹದಲ್ಲೇ ಹಾದು ಹೋಗುವ ಈ ಹೊಸ ರೈಲ್ವೆ ಮಾರ್ಗ ನಿರ್ಮಾಣದ ರಚನೆಗೂ ಚಿಂತನೆ ನಡೆಸಬೇಕಿದೆ.