ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಕರಾವಳಿ ನಗರಿಯಲ್ಲಿ ಭರ್ಜರಿ ರೋಡ್ ಶೋ ನಡೆಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಬಿಜೆಪಿ ಕಾರ್ಯಕರ್ತರು ಪ್ರಧಾನಿ ಮೋದಿ ಅವರನ್ನು ಹತ್ತಿರದಿಂದ ಕಂಡು ಪುಳಕಿತಗೊಂಡರು. ಬಿಜೆಪಿ ಅಭ್ಯರ್ಥಿಗಳಾದ ಕೋಟ ಶ್ರೀನಿವಾಸ್ ಪೂಜಾರಿ ಹಾಗೂ ಬ್ರಿಜೇಶ್ ಚೌಟ ಅವರು ಪ್ರಧಾನಿ ಅವರ ಪಕ್ಕದಲ್ಲಿ ನಿಂತು ಗಮನ ಸೆಳೆದರು. ಒಟ್ಟಾರೆ ಕರಾವಳಿ ನಗರಿಯಲ್ಲಿ ಭಾನುವಾರ ನಡೆದ ಪ್ರಧಾನಿ ನರೇಂದ್ರ ಮೋದಿ ಅವರ ಸ್ಪಂದನೆ ಕಂಡು ಬಂತು.
ರಸ್ತೆಯ ಇಕ್ಕೆಲಗಳಲ್ಲಿ ಕಿಕ್ಕಿರಿದು ಸೇರಿದ್ದ ಜನಸ್ತೋಮದತ್ತ ಕೈಬೀಸುತ್ತಾ ಸಾಗಿದ ಪ್ರಧಾನಿ ನರೇಂದ್ರ ಮೋದಿ ದಕ್ಷಿಣ ಕನ್ನಡ, ಉಡುಪಿ- ಚಿಕ್ಕಮಗಳೂರು ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚಿಸಿದರು.
ಸಾಮಾಜಿಕ ಕ್ರಾಂತಿಯ ಹರಿಕಾರ ಬ್ರಹ್ಮಶ್ರೀ ನಾರಾಯಣಗುರು ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ರೋಡ್ ಶೋ ಆರಂಭಿಸಿದ ಅವರು ಬಿಲ್ಲವ ಸಮುದಾಯದ ಮುನಿಸು ಶಮನಗೊಳಿಸುವ ಪ್ರಯತ್ನ ಮಾಡಿದರು. ಹೂವುಗಳಿಂದ ಅಲಂಕರಿಸಿದ್ದ ತೆರೆದ ವಾಹನದಲ್ಲಿ ನಗು ಬೀರುತ್ತಾ, ಅಭಿಮಾನಿಗಳತ್ತ ಕೈ ಬೀಸುತ್ತಾ ಸಾಗಿದ ಪ್ತಧಾನಿ ಕಡಲ ತಡಿಯ ನಗರದಲ್ಲಿ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದರು.
ಮೋದಿ ಅವರನ್ನು ಕಾಣಲೆಂದೇ ರಸ್ತೆ ಪಕ್ಕದಲ್ಲಿ ತಾಸುಗಟ್ಟಲೆ ಕಾದು ಕುಳಿತಿದ್ದ ಅಭಿಮಾನಿಗಳು ನೆಚ್ಚಿನನಾಯಕನ ಕಂಡು ಪುಳಕಿತರಾದರು.
ಪ್ರಧಾನಿ ಆಗಮಿಸುತ್ತಿದ್ದಂತೆಯೇ ‘ಜೈ ಜೈ ಮೋದಿ… ಜೈಶ್ರೀರಾಂ, ಆಬ್ ಕೀ ಬಾರ್ ಚಾರ್ ಸೌ ಪಾರ್ ‘ ಘೋಷಣೆ ಮುಗಿಲು ಮುಟ್ಡಿತ್ತು. ಕೇಸರಿ ಪೇಟಾ, ಕೇಸರಿ ಶಾಲು, ಕೇಸರಿ ಟೋಪಿ ಧರಿಸಿದ್ದ ಅಭಿಮಾನಿಗಳಿಗೆ ನೆಚ್ಚಿನ ನಾಯಕನಿಗೆ ಜೈಕಾರ ಹಾಕಿದಷ್ಟೂ ಮನ ತಣಿಯಲಿಲ್ಲ. ಮತ್ತೆ ಮತ್ತೆ ಜೈಕಾರ ಕೂಗಿದರು.
ಮೋದಿ ಅವರು ನಾರಾಯಣ ಗುರುಗಳ ಪ್ರತಿಮೆಗೆ ಮಾಲಾರ್ಪಣೆ ಮಾಡುವಾಗ ದಕ್ಷಿಣ ಕನ್ನಡ ಕ್ಷೇತ್ರದ ಅಭ್ಯರ್ಥಿ ಬ್ರಿಜೇಶ್ ಚೌಟ ಹಾಗೂ ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ, ಶಾಸಕರ ಜೊತೆಯಲ್ಲಿದ್ದರು. ನಾಯಕರ ಜೊತೆಗೆ ಪಕ್ಷದ ಹಿರಿಯ ಕಾರ್ಯಕರ್ತರು, ವಿವಿಧ ಸಮಾಜಗಳ ಮುಖಂಡರು ಸೇರಿದಂತೆ 15 ಮಂದಿಗೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿತ್ತು.
ರೋಡ್ ಶೋ ನೋಡಲು ಕೆಲವರಂತೂ ರಸ್ತೆ ಪಕ್ಕದ ಕಟ್ಟಡಗಳ ಮೆಟ್ಟಿಲುಗಳಲ್ಲಿ ಮೊದಲೇ ಜಾಗ ಹಿಡಿದು ಕಾದಿದ್ದರು. ಇನ್ನು ಕೆಲವರು ರಸ್ತೆ ಪಕ್ಕದ ಆವರಣಗೋಡೆಗಳನ್ನು ಹಾಗೂ ಮರಗಳನ್ನು ಏರಿ ಕಾದು ಕುಳಿತಿದ್ದರು.
ಪೋಟೊ ಕ್ಲಿಕ್ಕಿಸಲು ಹರಸಾಹಸ: ನೆಚ್ಚಿನ ನೇತಾರನ ಫೋಟೊ ಕ್ಲಿಕ್ಕಿಸಲು ಕೆಲವರು ಹರಸಾಹಸ ಪಟ್ಟರು. ಇನ್ನು ಕೆಲವರು ಕಿರು ವಿಡಿಯೊ ರೂಪಿಸಿ ಅದರ ರೀಲ್ಸ್ ರೂಒಇಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡರು.
ಮಂತ್ರ ಘೋಷ, ಶ್ರೀರಾಮ ಭಜನೆ, ಚೆಂಡೆವಾದನ ರೋಡ್ ಶೋಗೆ ವಿಶೇಷ ಕಳೆತಂದಿತ್ತು.
ಸ್ವಯಂಸೇವಕರು ರಸ್ತೆಯ ಇಕ್ಕೆಲಗಳಲ್ಲೂ ಅಲ್ಲಲ್ಲಿ ಕುಡಿಯುವ ನೀರು, ಮಸಾಲ ಮಜ್ಜಿಗೆ, ತಂಪುಪಾನೀಯಗಳನ್ನು ಉಚಿತವಾಗಿ ವಿತರಿಸಿದರು.
ನಾರಾಯಣ ಗುರು ಸರ್ಕಲ್ನಿಂದ ಲಾಲ್ಬಾಗ್ನ ಮಂಗಳೂರು ಪಾಲಿಕೆ ಕಚೇರಿ, ಬಳ್ಳಾಲ್ಬಾಗ್ ದಾಟಿ ಎಂ.ಜಿ. ರಸ್ತೆ ಮೂಲಕ ಸಾಗಿ ಪಿವಿಎಸ್ ಸರ್ಕಲ್ ಬಳಿ ಬಲಕ್ಕೆ ತಿರುಗಿ ನವಭಾರತ್ ಸರ್ಕಲ್ವರೆಗೆ ಸುಮಾರು 2 ಕಿ.ಮೀ. ದೂರದವರೆಗೆ ಮೋದಿ ರೋಡ್ ಶೋ ನಡೆಸಿದರು. ಹೀಗಾಗಿ ರೋಡ್ ಶೋ ನಡೆದ ಮಾರ್ಗವೇ ಕೇಸರಿ ಮಯವಾಗಿತ್ತು. ಎಲ್ಲಿ ನೋಡಿದರಲ್ಲಿ ಕೇಸರಿ ಬಣ್ಣವೇ ಕಣ್ಣು ಕುಕ್ಕುತ್ತಲಿತ್ತು.
ನರೇಂದ್ರ ಮೋದಿ ಅವರ ರೋಡ್ ಪ್ರಾರಂಭವಾಗುತ್ತಿದ್ದಂತೆ ಸೇರಿದ್ದ ನಾಗರಿಕರು ಮೋದಿ ಮೋದಿ ಘೋಷಣೆಯನ್ನು ಕೂಗಿದರು. ಈ ವೇಳೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಹಾಗೂ ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕೋಟ ಶ್ರೀನಿವಾಸ ಪೂಜಾರಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಅಕ್ಕ-ಪಕ್ಕ ನಿಂತಿದ್ದರು. ಮೋದಿ, ಚೌಟ ಹಾಗೂ ಪೂಜಾರಿ ಬಿಜೆಪಿಯ ಕಮಲ ಚಿಹ್ನೆಯ ಲೋಗೋವನ್ನು ಪ್ರದರ್ಶನ ಮಾಡಿದರು.
ಪಿಎಂ ನರೇಂದ್ರ ಮೋದಿ ಅವರನ್ನು ಕಾಣಲು ಎರಡು ಕಿಲೋ ಮೀಟರ್ ರಸ್ತೆಯಲ್ಲಿ ಸಾರ್ವಜನಿಕರು ಕಿಕ್ಕಿರಿದು ಸೇರಿದ್ದರು. ಮಹಾನಗರ ಪಾಲಿಕೆ ಜಂಕ್ಷನ್ ಭರ್ತಿಯಾಗಿ ಅಕ್ಕಪಕ್ಕದ ಕಟ್ಟಡಗಳನ್ನು ಜನರು ಏರಿ ಕುಳಿತಿದ್ದರು. ಎರಡು ಕಿಲೋ ಮೀಟರ್ ರಸ್ತೆಯ ಎರಡೂ ಬದಿಗಳಲ್ಲಿ ಎಲ್ಲಿ ನೋಡಿದರಲ್ಲಿ ಜನರು ಸೇರಿದ್ದರು. ಅಭಿಮಾನಿಗಳಿಂದ ಮೋದಿ ಮೋದಿ.. ಜೈ ಜೈ ಮೋದಿ.. ಜೈಕಾರಗಳು ಮೊಳಗಿದವು. ಈ ವೇಳೆ ಮೋದಿ ಮುಖವಾಡ, ಫ್ಲಾಗ್ -ಕೇಸರಿ ಟೋಪಿ, ಬಾವುಟಗಳನ್ನು ಹಿಡಿದು ಕೆಲವರು ಗಮನ ಸೆಳೆದಿದ್ದಾರೆ.
ನರೇಂದ್ರ ಮೋದಿ ಅವರ ಸ್ವಾಗತಕ್ಕೆ ಹುಲಿಗಳ ದಂಡೇ ಬಂದಿತ್ತು. ಅಂದರೆ ಹುಲಿ ವೇಷಧಾರಿಗಳು ಗಮನ ಸೆಳೆದರು. ಈ ಹುಲಿವೇಷಧಾರಿಗಳಿಗೆ ವಿಶೇಷ ಬಣ್ಣದ ವ್ಯವಸ್ಥೆಯನ್ನು ಮಾಡಲಾಗಿತ್ತು. ಇನ್ನು ಈ ಕಲಾವಿದರ ಎದೆ ಮೇಲೆ ಮೋದಿ ಭಾವಚಿತ್ರವನ್ನು ಬಿಡಿಸಲಾಗಿತ್ತು.
ಲಾಲ್ಬಾಗ್ ಸರ್ಕಲ್ನಲ್ಲಿ ಹುಲಿವೇಷ ಕುಣಿತಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಇದನ್ನು ಪ್ರಧಾನಿ ನರೇಂದ್ರ ಮೋದಿ ಅವರು ವೀಕ್ಷಿಸಿ ಮೆಚ್ಚುಗೆ ಸೂಚಿಸಿದರು. ದಕ್ಷಿಣ ಕನ್ನಡ ಬಿಜೆಪಿ ಘಟಕದವರು ಹುಲಿ ವೇಷ ಕುಣಿತದ ವ್ಯವಸ್ಥೆಯನ್ನು ಮಾಡಿದ್ದರು. ಪ್ರತಿ ಬಾರಿ ಕೃಷ್ಣ ಜನ್ಮಾಷ್ಟಮಿ ನವರಾತ್ರಿ ಸಂದರ್ಭದಲ್ಲಿ ಮಾತ್ರ ಈ ಹುಲಿವೇಷ ಕುಣಿತವನ್ನು ಆಯೋಜನೆ ಮಾಡಲಾಗುತ್ತಿತ್ತು. ಈ ಬಾರಿ ಮೋದಿ ಆಗಮನ ಹಿನ್ನೆಲೆಯಲ್ಲಿ ವಿಶೇಷ ವೇದಿಕೆ ನಿರ್ಮಾಣ ಮಾಡಿ ಹುಲಿವೇಷ ಕುಣಿತಕ್ಕೆ ವ್ಯವಸ್ಥೆಯನ್ನು ಮಾಡಲಾಗಿತ್ತು.