ಬೆಳಗಾವಿ: ಉಡುಪಿ- ಚಿಕ್ಕಮಗಳೂರು ಲೋಕಸಭಾ ಮತಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿರುವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಒಂದು ತಿಂಗಳಲ್ಲೇ ಇಂಗ್ಲಿಷ್ ಕಲಿಸುವುದಾಗಿ ಬೆಳಗಾವಿಯ ಖ್ಯಾತ ಇಂಗ್ಲಿಷ್ ಟ್ರೆನರ್ ಜಿ.ಎಲ್.ಮಂಜುನಾಥ ತಿಳಿಸಿದ್ದಾರೆ.

ಮೂಲತಃ ಹಾಸನದವರಾಗಿರುವ ಬೆಳಗಾವಿಯಲ್ಲಿ ಕಳೆದ 20 ವರ್ಷಗಳಿಂದ ಟೈಮ್ ಇಂಗ್ಲಿಷ್ ಟ್ರೈನಿಂಗ್ ಅಕಾಡೆಮಿ ಮೂಲಕ ವಿದ್ಯಾರ್ಥಿಗಳು, ಉದ್ಯೋಗಾರ್ಥಿಗಳು ಹಾಗೂ ನಾಗರಿಕರಿಗೆ ಇಂಗ್ಲಿಷ್ ಕಲಿಸಿ ಕೊಟ್ಟು ಸಹಸ್ರಾರು ಜನರ ಬಾಳಿಗೆ ಆಶಾಕಿರಣವಾಗಿರುವ ಮಂಜುನಾಥ ಅವರು ಕೋಟ ಶ್ರೀನಿವಾಸ ಪೂಜಾರಿ ಅವರು ಯಾವುದೇ ಕಾರಣಕ್ಕೆ ಭಾಷೆಗಾಗಿ ಭಯಪಡಬೇಕಾಗಿಲ್ಲ, ನಾನು ಅವರಿಗೆ ಕೇವಲ ಒಂದೇ ತಿಂಗಳಲ್ಲಿ ಇಂಗ್ಲಿಷ್ ಕಲಿಸುತ್ತೇನೆ. ಅದರಲ್ಲೂ ಉಚಿತವಾಗಿ ಇಂಗ್ಲಿಷ್ ಹೇಳಿಕೊಡುತ್ತೇನೆ ಎಂದು ತಿಳಿಸಿದ್ದಾರೆ.

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದಿರುವ ಜಯಪ್ರಕಾಶ ಹೆಗ್ಡೆ ಅವರು ಬ್ರಹ್ಮಾವರದಲ್ಲಿ ನಡೆದ ಭಾಷಣದಲ್ಲಿ ತಮ್ಮ ಎದುರಾಳಿಗೆ ಇಂಗ್ಲಿಷ್ ಮತ್ತು ಹಿಂದಿ ಬಾರದೆ ಇರುವುದರಿಂದ ಲೋಕಸಭೆಯಲ್ಲಿ ಸಮಸ್ಯೆಗಳಿಗೆ ಸ್ಪಂದನೆ ಹಾಗೂ ಸಂವಹನಕ್ಕೆ ಕಷ್ಟವಾಗುತ್ತದೆ ಎಂದು ಹೇಳಿದ್ದರು. ಈ ಹಿನ್ನಲೆಯಲ್ಲಿ
ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಇಂಗ್ಲಿಷ್ ಕಲಿಸಿಕೊಡುವುದಾಗಿ ಮಂಜುನಾಥ ತಿಳಿಸಿದ್ದಾರೆ.