Join The Telegram | Join The WhatsApp |
ಬೆಂಗಳೂರು:
ಅಸ್ಪೃಶ್ಯತೆ ನಿವಾರಣೆಗಾಗಿ ರೂಪಿಸಲಾಗಿರುವ ವಿನಯ ಸಾಮರಸ್ಯ ವಿನೂತನ ಯೋಜನೆಯ ಬೃಹತ್ ಸಮಾವೇಶ ಡಿಸೆಂಬರ್ ತಿಂಗಳಲ್ಲಿ ಹಮ್ಮಿಕೊಂಡಿರುವುದಾಗಿ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಅನಾರೋಗ್ಯದಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಿ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು ವಿನಯ ಸಾಮರಸ್ಯ ಯೋಜನೆಗೆ ಚಾಲನಾ ಸಮಾವೇಶ ಸಂಬಂಧ ಗುರುವಾರ ಇಲಾಖೆ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ಮೂಲಕ ಸಭೆ ನಡೆಸಿದರು.
ಅಸ್ಪೃಶ್ಯತೆ ನಿವಾರಣೆಗಾಗಿ ಇಲಾಖೆಯಿಂದ ರೂಪಿಸಿರುವ ವಿನೂತನ ವಿನಯ ಸಾಮರಸ್ಯ ಯೋಜನೆಗೆ ವಿಧ್ಯುಕ್ತವಾಗಿ ಚಾಲನೆ ನೀಡಬೇಕಿದ್ದು ಬರುವ ಡಿಸೆಂಬರ್ ತಿಂಗಳ ಎರಡನೇ ವಾರದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲು ಸಿದ್ಧತೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಅಸ್ಪೃಶ್ಯತೆಯಂತಹ ಅನಿಷ್ಠ ಪದ್ಧತಿಯನ್ನು ಅನುಭವಿಸುವವರಿಗಿಂತ ಅನುಸರಿಸುವವರಿಗೆ ಜಾಗೃತಿ ಮೂಡಿಸಬೇಕಿದೆ. ಈ ಹಿನ್ನೆಲೆಯಲ್ಲಿ ಪರಿಶಿಷ್ಟೇತರ ಸಮುದಾಯಗಳ ಧುರೀಣರು, ಮಠಾಧಿಪತಿಗಳು, ಧಾರ್ಮಿಕ ಮುಖಂಡರನ್ನು ಸಮಾವೇಶಕ್ಕೆ ಆಹ್ವಾನಿಸಬೇಕು. ಈ ಮೂಲಕ ಸಮಾಜದಲ್ಲಿನ ಅಸ್ಪೃಶ್ಯತೆ ನಿವಾರಣೆಯ ಜಾಗೃತಿ ಸಮಾವೇಶ ಅರ್ಥಪೂರ್ಣವಾಗಿ ಯಶಸ್ವಿಯಾಗಬೇಕು ಎಂದರು.
ಬೆಂಗಳೂರು ಅಥವಾ ಕೊಪ್ಪಳದಲ್ಲಿ ಸಮಾವೇಶ ಹಮ್ಮಿಕೊಳ್ಳುವ ಬಗ್ಗೆ ಸದ್ಯದಲ್ಲೆ ಸ್ಥಳ ಹಾಗೂ ದಿನಾಂಕ ಅಂತಿಮಗೊಳಿಸಲಾಗುವುದು. ಬೃಹತ್ ಸಮಾವೇಶದಲ್ಲಿ ಮುಖ್ಯಮಂತ್ರಿಯವರು ವಿನಯ ಸಾಮರಸ್ಯ ಯೋಜನೆಗೆ ಚಾಲನೆ ನೀಡಲಿದ್ದಾರೆ ಎಂದರು.
ಬರುವ ದಿನಗಳಲ್ಲಿ ಪ್ರತಿ ಗ್ರಾಮ ಪಂಚಾಯ್ತಿ ಹಂತದಲ್ಲೂ ಈ ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತರಬೇಕಿದ್ದು ಇಲಾಖೆಯ ಅಧಿಕಾರಿಗಳು ಕಾರ್ಯಕ್ರಮ ಅನುಷ್ಠಾನಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು. ಹಾಗೂ ಚಾಲನಾ ಸಮಾವೇಶ ಅರ್ಥಪೂರ್ಣ ಕಾರ್ಯಕ್ರಮವಾಗಿಸುವ ಮೂಲಕ ಯಶಸ್ವಿಗೊಳಿಸಲು ಶ್ರಮಿಸಬೇಕೆಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದರು.
Join The Telegram | Join The WhatsApp |